ಸಾರಾಂಶ
ಹಾನಗಲ್ಲ: ಕೃಷಿಕರು ಕೃಷಿ ಭೂಮಿಯ ಮಣ್ಣಿನ ಪರೀಕ್ಷೆ ಮೂಲಕ ಪೋಷಕಾಂಶಗಳ ನಿಜಾಂಶ ಪಡೆದು ಅಗತ್ಯ ಮರುಪೂರಣಕ್ಕೆ ಮುಂದಾದರೆ ನಿರೀಕ್ಷಿತ ಫಸಲು ಪಡೆಯಲು ಸಾಧ್ಯ ಎಂದು ತಾಂತ್ರಿಕ ಕೃಷಿ ವ್ಯವಸ್ಥಾಪಕ ಬಸವರಾಜ ಮಣಕೂರ ಸಲಹೆ ನೀಡಿದರು.ಹಾನಗಲ್ಲ ಹೋಬಳಿಯ ಸಾವಿಕೇರಿ ಗ್ರಾಮದಲ್ಲಿ ಮಣ್ಣಿನ ಗುಣಧರ್ಮಗಳ ಆಧಾರದ ಮೇಲೆ ಬೆಳೆಗಳ ಆಯ್ಕೆ ಹಾಗೂ ಬೆಳೆ ಪದ್ಧತಿ ಆಧರಿತ ಪ್ರಾತ್ಯಕ್ಷಿಕೆ ಕುರಿತು ಫಲಾನುಭವಿ ರೈತರ ಜಮೀನಿನಲ್ಲಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತರ ಜೀವನೋಪಾಯ ಸುರಕ್ಷತೆಗಾಗಿ ಆರ್ಥಿಕ ಸುಸ್ಥಿರ ಕೃಷಿಗಾಗಿ ಮಿಶ್ರ ಕೃಷಿ, ತೋಟಗಾರಿಕೆ ಮಾದರಿ ಬೆಳೆಗಳು, ಪಶು ಸಂಗೋಪನೆ ಘಟಕಗಳನ್ನು ಸಂಯೋಜಿಸುವ ಮೂಲಕ ಆಹಾರ ಉತ್ಪಾದನೆಯನ್ನು ಹೆಚ್ಚಿಸಬಹುದು. ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೃಷಿ ಹಾಗೂ ಸಂಬಂಧಿತ ಇಲಾಖೆಗಳ ಹಲವು ಯೋಜನೆಗಳನ್ನು ಒಗ್ಗೂಡಿಸಿಕೊಂಡು ಕರ್ನಾಟಕ ರೈತ ಸಮೃದ್ಧಿ ಯೋಜನೆಯನ್ನು ಕೃಷಿ ಇಲಾಖೆಯ ಮುಖಾಂತರ ಕೃಷಿ ಭಾಗ್ಯ ಯೋಜನೆಯ ರೈತ ಫಲಾನುಭವಿಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.ಕೃಷಿ ಅಧಿಕಾರಿ ಸಂಗಮೇಶ ಹಕ್ಕಲಪ್ಪನವರ ಮಾತನಾಡಿ, ತಾಲೂಕಿನಲ್ಲಿ ಗೋವಿನಜೋಳ ಬೆಳೆಯು ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ಪ್ರಮುಖ ಬೆಳೆಯಾಗಿ ಬಿತ್ತನೆಯಾಗುತ್ತಿದೆ. ಮೆಕ್ಕೆಜೋಳ ಬೆಳೆಯು ಹೆಚ್ಚು ಪೋಷಕಾಂಶವನ್ನು ಇಷ್ಟ ಪಡುವ ಬೆಳೆಯಾಗಿದ್ದು, ಬೇರೆ ಬೆಳೆಗಳಿಗೆ ಹೋಲಿಸಿದರೆ ಹೆಚ್ಚು ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ. ಇದರಿಂದ ಮಣ್ಣಿನ ಫಲವತ್ತತೆ ವರ್ಷದಿಂದ ವರ್ಷಕ್ಕೆ ಕುಂಠಿತವಾಗುತ್ತದೆ. ಆದ್ದರಿಂದ ರೈತರು ಪ್ರತಿವರ್ಷ ಒಂದೊಂದೆ ಬೆಳೆ ಬೆಳೆಯುತ್ತಿದ್ದರೆ ಎರಡು ವರ್ಷಕ್ಕೊಮ್ಮೆ ಇಲ್ಲದಿದ್ದರೆ ಪ್ರತಿ ಮೂರು ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದರು.ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಿಬ್ಬಂದಿಗಳಾದ ರಿಯಾಜಅಹ್ಮದ ಮಾಸನಕಟ್ಟಿ, ರೈತರಾದ ಮಹ್ಮದ ಇಸಾಕ್ ಹೊಂಡದಸಾಹೇಬ, ಮನ್ಸೂರಖಾನ್ ಯಳವಟ್ಟಿ, ರಾಮಣ್ಣ ಚವಡೇರ, ಬಾಷಾಸಾಬ ಹೊಂಡದ, ಪರಸಪ್ಪ ಜಿಗಳಿಕೊಪ್ಪ, ದ್ಯಾಮಣ್ಣ ಅರಳೇಶ್ವರ, ಮದರಸಾಬ ಶಿಕಾರಿ, ಶರೀಫಸಾಬ ಇಂಗಳಕಿ, ಕಿಟ್ಟು ಅರಳೇಶ್ವರ, ಇಸಾಕಸಾಬ ಚಿನ್ನಳ್ಳಿ ಇತರರು ಉಪಸ್ಥಿತರಿದ್ದರು.ಹೋಳಿ ಹಬ್ಬ ಸಾಮರಸ್ಯದ ಪ್ರತೀಕ
ಶಿಗ್ಗಾಂವಿ: ಪ್ರಕೃತಿಯಲ್ಲಿ ನೂರಾರು ಬಣ್ಣಗಳಂತೆ ಜಗತ್ತಿನಲ್ಲಿ ನಾನಾ ಧರ್ಮ ಆಚರಿಸುವ ಪಂಥಗಳಿವೆ. ಯಾವುದೇ ಸಾಮರಸ್ಯದ ಆಚರಣೆಗೂ ಧಕ್ಕೆ ಬರಬಾರದು. ಹೋಳಿ ಹಬ್ಬ ಸಮಾಜದ ಸಾಮರಸ್ಯದ ಪ್ರತೀಕ ಎಂದು ಡಿಎಸ್‌ಪಿ ಗುರುಶಾಂತಪ್ಪ ತಿಳಿಸಿದರು.ಪಟ್ಟಣದ ಡಾ. ಬಿಆರ್. ಅಂಬೇಡ್ಕರ ಆಡಳಿತ ಭವನದಲ್ಲಿ ರಾಜಕೀಯ ಮುಖಂಡರು ಹಾಗೂ ಸಮಾಜದ ವಿವಿಧ ಸಮಾಜದ ಹಿರಿಯರ ನೇತೃತ್ವದ ರಂಜಾನ ಹಾಗೂ ಹೋಳಿ ಹಬ್ಬದ ಪೂರ್ವಬಾವಿ ಶಾಂತಿಸಭೆಯಲ್ಲಿ ಮಾತನಾಡಿದರು.ಪ್ರಸಕ್ತ ಶೈಕ್ಷಣಿಕ ವರ್ಷದ ಅಂತಿಮ ಪರೀಕ್ಷಾ ಕಾಲವಾಗಿದ್ದರಿಂದಾಗಿ ಶಾಲಾ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗಬಾರದು. ಎಲ್ಲರ ಒಪ್ಪಿಗೆ ಪಡೆದು ಫೆ. ೨೦ರಂದು ಹೋಳಿ ಬಣ್ಣದಾಟಕ್ಕೆ ಸಭೆ ನಿರ್ಣಯಿಸಿದೆ. ರಂಜಾನ ಉಪವಾಸ ಆಚರಿಸುವವರಿಗೂ ಪ್ರಾರ್ಥನೆಗೂ ತೊಂದರೆಯಾಗದಂತೆ ಸಾಮಾಜಿಕ ಸ್ವಾಸ್ಥ್ಯ, ಶಾಂತಿ ಕಾಪಾಡಲು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತಿದೆ ಎಂದರು.
ಸಿಪಿಐ ಸತೀಶ್ ಮಾಳಗೊಂಡ ಸ್ವಾಗತಿಸಿದರು. ಪುರಸಭೆ ಅಧ್ಯಕ್ಷ ಸಿದ್ಧಾರ್ಥಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ಉಪತಹಸೀಲ್ದಾರ್ ಗಾಮನಗಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಇತರರು ಇದ್ದರು.