ಉತ್ತಮ ನಾಯಕನ ಆಯ್ಕೆ ಮಾಡುವುದು ನಿಮ್ಮ ಕೈಯಲ್ಲಿದೆ: ಶಿವಾನಂದ

| Published : May 01 2024, 01:22 AM IST

ಉತ್ತಮ ನಾಯಕನ ಆಯ್ಕೆ ಮಾಡುವುದು ನಿಮ್ಮ ಕೈಯಲ್ಲಿದೆ: ಶಿವಾನಂದ
Share this Article
  • FB
  • TW
  • Linkdin
  • Email

ಸಾರಾಂಶ

ನಾನು ಖಚಿತವಾಗಿ ಮತದಾನ ಮಾಡುವೆ ಎಂಬ ಘೋಷವಾಕ್ಯದೊಂದಿಗೆ ಮತದಾನ ಮಾಡಬೇಕು.

ಹುಲಿಗಿ ಗ್ರಾಮದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕೊಪ್ಪಳ

ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಕೊಪ್ಪಳ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಸ್ಪೀಪ್ ಸಮಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಹಾಗೂ ಹುಲಿಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಸೋಮವಾರ ತಾಲೂಕಿನ ಹುಲಿಗಿ ಗ್ರಾಮದಲ್ಲಿ ಮತದಾನ ಜಾಗೃತಿ ಜರುಗಿತು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ. ಮಾತನಾಡಿ, ಲೋಕಸಭಾ ಚುನಾವಣೆ ನಿಮಿತ್ತ ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆ ಮೇ 7ರಂದು ನಡೆಯಲಿದ್ದು, ಅಂದು ತಮ್ಮ ವಾರ್ಡಿಗೆ ನಿಗದಿಪಡಿಸಿದ ಮತಗಟ್ಟೆಗೆ ಗುರುತಿನ ಕಾರ್ಡಿನೊಂದಿಗೆ ಹೋಗಿ, ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡಿ, ಸುಭದ್ರ ಸರ್ಕಾರ ರಚಿಸುವಂತೆ ಸಲಹೆ ನೀಡಿದರು.

ಭಾರತ ಪ್ರಜಾಪ್ರಭುತ್ವ ದೇಶವಾಗಿದೆ. ನಿಮ್ಮ ಗ್ರಾಮ ಎಲ್ಲ ರೀತಿಯಿಂದ ಅಭಿವೃದ್ಧಿಯಾಗಬೇಕಾದರೆ ಉತ್ತಮ ನಾಯಕನ ಆಯ್ಕೆ ಮಾಡುವುದು ನಿಮ್ಮ ಕೈಯಲ್ಲಿದೆ. ನಾನು ಖಚಿತವಾಗಿ ಮತದಾನ ಮಾಡುವೆ ಎಂಬ ಘೋಷವಾಕ್ಯದೊಂದಿಗೆ ಮತದಾನ ಮಾಡಬೇಕು. ಯಾವುದೇ ವ್ಯಕ್ತಿ ಮತದಾನದಿಂದ ಹೊರಗುಳಿಯದಂತೆ, ಇತರರಿಗೂ ಅರಿವು ಮೂಡಿಸಿ, ಮತದಾನ ಮಾಡಿಸಬೇಕು. ಸದೃಢ ಪ್ರಜಾಪ್ರಭುತ್ವಕ್ಕಾಗಿ ಮತದಾರರ ಸಾಕ್ಷರತೆ ಎಂಬ ಅಂಶವನ್ನು ಆಧಾರವಾಗಿ ಇಟ್ಟುಕೊಂಡು ಮತದಾನ ಮಾಡುವಂತೆ ತಿಳಿಸಿದರು.

ಹುಲಿಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಶಫಿಉಲ್ಲಾ ಮಾತನಾಡಿ, ಮತದಾನ ದಿನದಂದು ನಾವೆಲ್ಲರೂ ಹಬ್ಬದಂತೆ ಸಂಭ್ರಮಿಸಬೇಕು. 18 ವರ್ಷ ಮೇಲ್ಪಟ್ಟವರೆಲ್ಲರೂ ಮತದಾನದ ಪಟ್ಟಿಯಲ್ಲಿ ತಮ್ಮ ಹೆಸರನ್ನ ಖಾತ್ರಿ ಪಡಿಸಿಕೊಂಡು, ತಪ್ಪದೇ ಮತದಾನ ಮಾಡಬೇಕು ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಕೆ. ಮತದಾನ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಎನ್.ಜಿ.ಓ ಸಂಸ್ಥೆಯ ಪದಾಧಿಕಾರಿಗಳು, ಗ್ರಾಪಂ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.