ಸಾರಾಂಶ
ಬೆಂಗಳೂರು: ನಗರದ ವಿವಿಧೆಡೆ ಕಾರಿನಲ್ಲಿ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿ ಬೀಗ ಮುರಿದು ಕಳವು ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೈಸೂರು ರಸ್ತೆಯ ವಾಲ್ಮೀಕಿನಗರ ನಿವಾಸಿ ಯಾಸೀನ್ ಖಾನ್ ಅಲಿಯಾಸ್ ಚೋರ್ ಇಮ್ರಾನ್(37) ಬಂಧಿತ. ಆರೋಪಿಯಿಂದ ಸುಮಾರು ಒಂದು ಕೋಟಿ ರುಪಾಯಿ ಮೌಲ್ಯದ 1.3 ಕೇಜಿ ಚಿನ್ನಾಭರಣ, 1.5 ಕೇಜಿ ಬೆಳ್ಳಿವಸ್ತು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಕಾರು ಜಪ್ತಿ ಮಾಡಲಾಗಿದೆ.
ಕಳೆದ ಜನವರಿಯಲ್ಲಿ ದುಷ್ಕರ್ಮಿಗಳು ಚಲ್ಲಘಟ್ಟದ ಮನೆಯೊಂದರ ಬೀಗ ಮುರಿದು ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಇನ್‌ಸ್ಪೆಕ್ಟರ್ ಎಂ.ಪಾಪಣ್ಣ ನೇತೃತ್ವದಲ್ಲಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೃತ್ತಿಪರ ಕಳ್ಳತನ ವಿರುದ್ಧ 80 ಪ್ರಕರಣ:
ಆರೋಪಿ ಚೋರ್ ಇಮ್ರಾನ್ ವೃತ್ತಿಪರ ಕಳ್ಳನಾಗಿದ್ದು, 2008ನೇ ಸಾಲಿನಿಂದಲೂ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾನೆ. ಈತನ ವಿರುದ್ಧ ಈ ಹಿಂದೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 80 ಮನೆಗಳವು ಪ್ರಕರಣಗಳು ದಾಖಲಾಗಿವೆ. ಹಲವು ಪ್ರಕರಣಗಳಲ್ಲಿ ಬಂಧಿತನಾಗಿ ಜೈಲು ಸೇರಿದ್ದ ಆರೋಪಿಯು ಜಾಮೀನು ಪಡೆದು ಹೊರಗೆ ಬಂದು ಮತ್ತೆ ತನ್ನ ಹಳೇ ಚಾಳಿ ಮುಂದುವರೆಸುತ್ತಿದ್ದ. ಕಡೆಯದಾಗಿ ಕಳೆದ ವರ್ಷ ಆಗಸ್ಟ್‌ನಲ್ಲಿ ಮನೆಗಳವು ಪ್ರಕರಣಗಳಲ್ಲಿ ಪುಲಕೇಶಿನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದರು. ಜಾಮೀನು ಪಡೆದು ಹೊರಗೆ ಬಂದಿದ್ದ ಆರೋಪಿಯು ಮತ್ತೆ ಕಳವು ಕೃತ್ಯಗಳಲ್ಲಿ ತೊಡಗಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
26 ಕಳವು ಪ್ರಕರಣ ಪತ್ತೆ
ಆರೋಪಿಯ ಬಂಧನದಿಂದ ಕೋಣನಕುಂಟೆ, ಬನಶಂಕರಿ, ಹಲಸೂರು ಗೇಟ್, ಸುಬ್ರಹ್ಮಣ್ಯಪುರ ತಲಾ ಮೂರು, ಜೆ.ಜೆ.ನಗರ ಐದು, ಕಾಟನ್‌ಪೇಟೆ ಎರಡು, ಕುಮಾರಸ್ವಾಮಿ ಲೇಔಟ್, ಪುಟ್ಟೇನಹಳ್ಳಿ, ಜೆ.ಪಿ.ನಗರ, ಕೆ.ಜಿ.ನಗರ ಹಾಗೂ ಮಡಿವಾಳ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಸೇರಿದಂತೆ ಒಟ್ಟು 26 ಮನೆಗಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೋವಾ-ಮುಂಬೈನಲ್ಲಿ ಮೋಜು-ಮಸ್ತಿ
ಆರೋಪಿ ಚೋರ್ ಇಮ್ರಾನ್ ಕದ್ದ ಆಭರಣಗಳನ್ನು ಮುಂಬೈ, ಹೈದರಾಬಾದ್, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಜ್ಯುವೆಲ್ಲರಿ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದ. ಇದರಿಂದ ಬಂದ ಹಣ ತೆಗೆದುಕೊಂಡು ಗೋವಾ-ಮುಂಬೈಗಳಲ್ಲಿ ಉಳಿದುಕೊಂಡು ಮೋಜು-ಮಸ್ತಿ ಮಾಡುತ್ತಿದ್ದ. ಹಣ ಖಾಲಿಯಾದ ಬಳಿಕ ಮತ್ತೆ ನಗರಕ್ಕೆ ಬಂದು ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿ ಕಳವು ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
₹50 ಸಾವಿರ ಬಹುಮಾನ
ಕುಖ್ಯಾತ ಕಳ್ಳ ಚೋರ್ ಇಮ್ರಾನ್‌ನನ್ನು ಬಂಧಿಸಿದ ಕೋಣನಕುಂಟೆ ಠಾಣೆ ಪೊಲೀಸರ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಪ್ರಶಂಶಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸರ ತಂಡಕ್ಕೆ 50 ಸಾವಿರ ರು. ನಗದು ಬಹುಮಾನ ಘೋಷಿಸಿದ್ದಾರೆ.