ಎಚ್.ಕೆ.ವೀರಣ್ಣಗೌಡರು, ಕೆ.ವಿ.ಶಂಕರಗೌಡರು ಮತ್ತು ಸಾಹುಕಾರ್ ಚೆನ್ನಯ್ಯನವರಂತಹ ಹಿರಿಯ ನಾಯಕರ ಪ್ರಾಮಾಣಿಕ ರಾಜಕೀಯ ಪರಂಪರೆಯನ್ನು ಚೌಡಯ್ಯನವರು ಮುಂದುವರಿಸಿಕೊಂಡು ಬಂದಿದ್ದರು. ಚೌಡಯ್ಯನವರಿಗೆ ಸಾರ್ವಜನಿಕ ಬದುಕಿನಲ್ಲಿ ಅತ್ಯಮೂಲ್ಯವಾಗಿ ಇರಬೇಕಾದ ಪ್ರಾಮಾಣಿಕತೆ, ನಿಸ್ಪ್ರುಹತೆ ಹಾಗೂ ತಮಗೆ ಏನು ಬೇಕು ಎಂಬುದನ್ನು ಅರ್ಥ ಮಾಡಿಕೊಂಡಿದ್ದ ದೊಡ್ಡ ಮಾಣಿಕ್ಯ.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಾಮಾಣಿಕ ಹಾಗೂ ನಿಷ್ಕಲ್ಮಶ ರಾಜಕೀಯ ಪರಂಪರೆಯ ಪ್ರತೀಕವಾಗಿದ್ದ ಎಚ್.ಡಿ.ಚೌಡಯ್ಯನವರು ನಶಿಸಿ ಹೋದ ರಾಜಕೀಯ ಪರಂಪರೆಯ ಕೊನೆಯ ಕೊಂಡಿ ಎಂದು ನಿವೃತ್ತ ಐಜಿಪಿ ಬಿ.ಆರ್.ರವಿಕಾಂತೇಗೌಡ ಬಣ್ಣಿಸಿದರು.

ನಗರದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ನಿತ್ಯ ಸಚಿವ ಕೆ.ವಿ.ಶಂಕರಗೌಡ ತರಬೇತಿ ಮತ್ತು ಉದ್ಯೋಗ ಕೇಂದ್ರದ ಸಭಾಂಗಣದಲ್ಲಿ ಜನತಾ ಶಿಕ್ಷಣ ಟ್ರಸ್ಟ್ ವತಿಯಿಂದ ನಡೆದ ಡಾ.ಎಚ್.ಡಿ.ಚೌಡಯ್ಯನವರ 99ನೇ ಜನ್ಮದಿನಾಚರಣೆ ಹಾಗೂ 2026ನೇ ಸಾಲಿನ ರಾಜ್ಯ ಮಟ್ಟದ ಸಮಾಜ ಸೇವಾ, ಕ್ರೀಡಾ ಮತ್ತು ಕೃಷಿ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ವಿದ್ಯಾರ್ಥಿ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಎಚ್.ಕೆ.ವೀರಣ್ಣಗೌಡರು, ಕೆ.ವಿ.ಶಂಕರಗೌಡರು ಮತ್ತು ಸಾಹುಕಾರ್ ಚೆನ್ನಯ್ಯನವರಂತಹ ಹಿರಿಯ ನಾಯಕರ ಪ್ರಾಮಾಣಿಕ ರಾಜಕೀಯ ಪರಂಪರೆಯನ್ನು ಚೌಡಯ್ಯನವರು ಮುಂದುವರಿಸಿಕೊಂಡು ಬಂದಿದ್ದರು. ಚೌಡಯ್ಯನವರಿಗೆ ಸಾರ್ವಜನಿಕ ಬದುಕಿನಲ್ಲಿ ಅತ್ಯಮೂಲ್ಯವಾಗಿ ಇರಬೇಕಾದ ಪ್ರಾಮಾಣಿಕತೆ, ನಿಸ್ಪ್ರುಹತೆ ಹಾಗೂ ತಮಗೆ ಏನು ಬೇಕು ಎಂಬುದನ್ನು ಅರ್ಥ ಮಾಡಿಕೊಂಡಿದ್ದ ದೊಡ್ಡ ಮಾಣಿಕ್ಯ ಎಂದರು.

ನಶಿಸುತ್ತಿರುವ ರಾಜಕೀಯ ಪರಂಪರೆಯಲ್ಲಿ ಸಂಸ್ಥೆಗಳನ್ನು ಮುಂದುವರಿಸುವುದು ಸುಲಭ. ಆದರೆ, ಕಟ್ಟುವುದು ಕಷ್ಟ. ಸಂಸ್ಥೆಗಳನ್ನು ಬೆಳೆಸುವ ಕಲೆಯನ್ನು ಚೌಡಯ್ಯನವರು ಕರಗತ ಮಾಡಿಕೊಂಡಿದ್ದರು. ಸಾರ್ವಜನಿಕ ಮತ್ತು ಸಂಸ್ಥೆಗಳ ಕೆಲಸಕ್ಕಾಗಿ ಯಾರ ಮನೆ ಬಾಗಿಲನ್ನಾದರೂ ಕಾಯಲು ಸಿದ್ದರಿದ್ದ ಅವರು, ತಮ್ಮ ವೈಯಕ್ತಿಕ ಕೆಲಸಕ್ಕಾಗಿ ಎಂದಿಗೂ ಯಾರ ಮುಂದೆಯೂ ಕೈ ಚಾಚಲಿಲ್ಲ ಎಂದರು.

ಕೆ.ವಿ.ಶಂಕರಗೌಡರ ಮಾರ್ಗದರ್ಶನದಲ್ಲಿ ಸಹಕಾರ ಚಳವಳಿಯಲ್ಲಿ ತೊಡಗಿಸಿಕೊಂಡು ನಿಸ್ವಾರ್ಥ ಸೇವೆ ಸಲ್ಲಿಸಿದರು. ತಮ್ಮ ರಾಜಕೀಯ ಗುರು ಕೆ.ವಿ.ಶಂಕರಗೌಡರ ವಿರುದ್ಧವೇ ಸ್ಪರ್ಧಿಸಿ ಗೆದ್ದರೂ ಪರಸ್ಪರ ಗೌರವ ಮತ್ತು ಸಾರ್ವಜನಿಕ ಸಂಬಂಧಗಳನ್ನು ಎಂದಿಗೂ ಕೆಡಿಸಿಕೊಳ್ಳಲಿಲ್ಲ. ವೈಯಕ್ತಿಕ ನಿಂದನೆಗಳಿಲ್ಲದ ಗೌರವಾನ್ವಿತ ರಾಜಕಾರಣಕ್ಕೆ ಅವರು ಮಾದರಿಯಾಗಿದ್ದರು ಎಂದು ಬಣ್ಣಿಸಿದರು.

ಪ್ರಶಸ್ತಿ ಸ್ವೀಕರಿಸಿದ ಕರ್ನಾಟಕ ರಾಜ್ಯ ಮುಕ್ತ ವಿವಿ ವಿಶ್ರಾಂತ ಕುಲಪತಿ ಎನ್.ಎಸ್.ರಾಮೇಗೌಡ ಮಾತನಾಡಿ, ಪ್ರತಿಯೊಂದು ವಿಶ್ವ ವಿದ್ಯಾಲಯಕ್ಕೂ ಮೂರು ಪ್ರಮುಖ ಉದ್ದೇಶಗಳಿರುತ್ತವೆ. ಬೋಧನೆ ಪರೀಕ್ಷೆ ಮತ್ತು ಸಂಶೋಧನೆ, ಹಾಗೂ ವಿಸ್ತರಣಾ ಚಟುವಟಿಕೆಗಳು ಅದರಲ್ಲೂ ಕೃಷಿ ವಿಶ್ವವಿದ್ಯಾಲಯಗಳು ತಮ್ಮ ಸಂಶೋಧನೆಗಳನ್ನು ರೈತರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪಿಇಟಿ ಟ್ರಸ್ಟ್‌ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಮಾತನಾಡಿ, ಪ್ರಶಸ್ತಿ ಪುರಸ್ಕೃತರಾದ ವೆಂಕಟೇಶ್ ಮತ್ತು ರಾಮೇಗೌಡರ ಸಾಧನೆಗಳನ್ನು ಶ್ಲಾಘಿಸಿದರು. ಸಾಧಕರ ಸಾಧನೆ ತಿಳಿದು ತಾವೂ ಅಳವಡಿಸಿಕೊಳ್ಳಬೇಕು ಎಂದರು.

ಕರ್ನಾಟಕ ರಾಜ್ಯ ಮುಕ್ತ ವಿವಿ ವಿಶ್ರಾಂತ ಕುಲಪತಿ ಎನ್.ಎಸ್.ರಾಮೇಗೌಡ ಅವರಿಗೆ ಚೌಡಯ್ಯ ಸಮಾಜ ಸೇವಾ ಪ್ರಶಸ್ತಿ, ಪ್ರಗತಿಪರ ಕೃಷಿಕ ಎನ್.ವೆಂಕಟೇಶ್‌ ಅವರಿಗೆ ಚೌಡಯ್ಯ ಕೃಷಿ ಪ್ರಶಸ್ತಿ ತಲಾ 20 ಸಾವಿರ ನಗದು ಪ್ರಶಸ್ತಿ ಫಲಕದೊಂದಿಗೆ ಗೌರವಿಸಲಾಯಿತು.

ಹೊಳಲು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಾದ ಬಿಂದುಶ್ರೀ ಡಿ.ಎಸ್. ಮತ್ತು ಕುಮಾರ ಪ್ರಸನ್ನ ಎಂ ಹಾಗೂ ಶ್ರೀ ವೆಂಕಟೇಶ್ವರ ವಿದ್ಯಾನಿಕೇತನ ಪ್ರೌಢಶಾಲೆ ನಂದಿತಾ ಮತ್ತು ಪ್ರಜ್ವಲ್ ಜೆ. ಅವರಿಗೆ ತಲಾ 5 ಸಾವಿರ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಟ್ರಸ್ಟ್ ಧರ್ಮದರ್ಶಿಗಳಾದ ಎಚ್.ಸಿ.ಮೋಹನ್ ಕುಮಾರ್, ಡಾ.ರಾಮಲಿಂಗಯ್ಯ ಉಪಸ್ಥಿತರಿದ್ದರು.