ಸಾರಾಂಶ
ಗಣಪತಿಯ ಪೂಜೆಯಲ್ಲಿ ಆಕರ್ಷಕ ಅಲಂಕಾರ, ತರಕಾರಿ ಧಾನ್ಯಗಳಿಂದ ಫಲಾವಳಿ ಸಿಂಗಾರ, ವಿದ್ಯುದ್ದೀಪಗಳ ಝಗಮಗದ ನಡುವೆ ಹಾಡು, ಭಜನೆಗಳು ಮೇಳೈಸಿದ್ದವು.
ಕುಮಟಾ: ಮಳೆಯ ಕೃಪೆಯ ನಡುವೆಯೂ ತಾಲೂಕಿನಾದ್ಯಂತ ಬುಧವಾರ ವಿಘ್ನವಿನಾಶಕ ಸಿದ್ಧಿವಿನಾಯಕನ ವಿಶೇಷ ಹಬ್ಬವಾದ ಗಣೇಶ ಚತುರ್ಥಿಯನ್ನು ಸಂಪ್ರದಾಯದಂತೆ ಪ್ರತಿಷ್ಠಾಪಿಸಿ ಅತ್ಯಂತ ಭಕ್ತಿ ಸಡಗರದಿಂದ ಪೂಜಿಸಿ ಪ್ರಾರ್ಥಿಸಲಾಗಿದೆ. ಗುರುವಾರ ಋಷಿಪಂಚಮಿ ಹಬ್ಬವನ್ನು ಆಚರಿಸುವ ಮೂಲಕ ಚೌತಿ ಹಬ್ಬವು ವಿಧ್ಯುಕ್ತವಾಗಿ ಸಂಪನ್ನಗೊಂಡಂತಾಗಿದೆ.
ವಿಪರೀತ ಮಳೆಯಿದ್ದರೂ ಕಲಾವಿದರ ಮನೆಯಿಂದ ಬೆಳಿಗ್ಗೆಯಿಂದಲೇ ಗಣಪನ ಮೂರ್ತಿಗಳನ್ನು ಗಂಟೆ, ಜಾಗಟೆ ವಾದ್ಯದೊಂದಿಗೆ ಕರೆತಂದು ಮನೆಮನೆಗಳಲ್ಲಿ ಪ್ರತಿಷ್ಠಾಪಿಸಲಾಯಿತು. ಗಣಪತಿಯ ಪೂಜೆಯಲ್ಲಿ ಆಕರ್ಷಕ ಅಲಂಕಾರ, ತರಕಾರಿ ಧಾನ್ಯಗಳಿಂದ ಫಲಾವಳಿ ಸಿಂಗಾರ, ವಿದ್ಯುದ್ದೀಪಗಳ ಝಗಮಗದ ನಡುವೆ ಹಾಡು, ಭಜನೆಗಳು ಮೇಳೈಸಿದ್ದವು. ಎಲ್ಲರ ಇಷ್ಟದ ದೈವ ಮಹಾಗಣಪತಿಯ ಸಂತೃಪ್ತಿಗಾಗಿ ವೈವಿಧ್ಯಮಯ ಭಕ್ಷ್ಯಭೋಜ್ಯಗಳನ್ನು ಕರಿದ ತಿಂಡಿಗಳನ್ನು ಸಿದ್ಧಪಡಿಸಿ ನೈವೇದ್ಯವಾಗಿ ಸಮರ್ಪಿಸಲಾಯಿತು.ಪಟ್ಟಣದಲ್ಲಿ ಬಸ್ ನಿಲ್ದಾಣಗಳು, ಉಪ್ಪಾರಕೇರಿ, ಮೂರುಕಟ್ಟೆ, ವ್ಯಾಯಾಮ ಶಾಲೆ, ಕೊಂಕಣ ರೈಲ್ವೆ ನಿಲ್ದಾಣ, ವನ್ನಳ್ಳಿ, ಹಳಕಾರ ಹಾಗೂ ಮಾಸೂರು ಕ್ರಾಸ್‌ಗಳಲ್ಲಿ, ಮಾತ್ರವಲ್ಲದೇ, ಮೂರೂರು, ಹೊಳೆಗದ್ದೆ, ಮಿರ್ಜಾನ, ತಾರಿಬಾಗಿಲ, ಕೋಡ್ಕಣಿ, ದಿವಗಿ ಮುಂತಾದ ಗ್ರಾಮೀಣ ಭಾಗಗಳಲ್ಲೂ ಸಾರ್ವಜನಿಕ ವತಿಯಿಂದ ಗಣೇಶೋತ್ಸವ ಸಮಿತಿಯವರು ವಿಶೇಷವಾದ ಅಲಂಕಾರ, ವಿನ್ಯಾಸಗಳ ರಂಗಸಜ್ಜಿಕೆಯಲ್ಲಿ ಗಣಪತಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜಿಸಿದ್ದಾರೆ. ಗುಡಿಗಾರಗಲ್ಲಿ ಸಾರ್ವಜನಿಕ ಗಣಪತಿಗೆ ಭಕ್ತರು ಬೆಳ್ಳಿಯ ಕಿರೀಟ ತಯಾರಿಸಿ ಸಮರ್ಪಿಸಿದರು.
ಮಳೆಯಿಂದಾಗಿ ಚೌತಿ ದಿನ ಸಾರ್ವಜನಿಕ ಗಣಪತಿ ವೀಕ್ಷಿಸಲು ಜನರ ದಂಡು ಕಡಿಮೆ ಎನಿಸಿದ್ದರೂ ಗುರುವಾರ ಬೆಳಿಗ್ಗೆ ಮೂರ್ನಾಲ್ಕು ತಾಸು ಮಳೆಯ ಬಿಡುವು ಕಾಣಿಸಿದ್ದರಿಂದ ಸಾರ್ವಜನಿಕ ಗಣಪನ ವೀಕ್ಷಣೆಗೆ ಭಕ್ತರನ್ನು ಸೆಳೆದು ತರುವಲ್ಲಿ ಯಶಸ್ವಿಯಾಗಿದೆ.ಸಾರ್ವಜನಿಕ ಗಣಪತಿ ಪೆಂಡಾಲ್‌ಗಳಲ್ಲಿ ಗುಂಪುಗುಂಪಾಗಿ ಆಗಮಿಸಿ ಆಕರ್ಷಕ ಗಣಪತಿಯ ದರ್ಶನ ಪಡೆದರು. ನಿರೀಕ್ಷೆಯಂತೆ ಮಳೆಯ ಬಿಡುವಿನಿಂದ ಪಟ್ಟಣದ ಎಲ್ಲ ರಸ್ತೆಗಳಲ್ಲಿ ಜನಜಂಗುಳಿ ಹೆಚ್ಚಿದ್ದರಿಂದ ಪೊಲೀಸರು ಸಾಕಷ್ಟು ಬಂದೋಬಸ್ತ ಮಾಡಿದ್ದು ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಟ್ರಾಫಿಕ್ ನಿರ್ವಹಣೆಯನ್ನು ಮುತುವರ್ಜಿಯಿಂದ ನಿಭಾಯಿಸಿದರು. ಹಲವೆಡೆ ಒಂದೇ ದಿನಕ್ಕೆ ಗಣಪತಿಯನ್ನು ವಿಸರ್ಜಿಸುವ ಸಂಪ್ರದಾಯ ಪಾಲಿಸಿದ್ದರೆ, ಕೆಲವೆಡೆ ಎರಡನೇ ದಿನದ ಪೂಜೆ ಮುಗಿಸಿ ಜಲದಲ್ಲಿ ವಿಸರ್ಜನೆ ಮಾಡಲಾಗಿದೆ. ವಿಸರ್ಜನೆಗೆ ಮುನ್ನ ಭಜನೆ, ಗುಮಟೆ ಪಾಂಗು, ವಾದ್ಯದ ಮೆರವಣಿಗೆಯನ್ನು ಜನರು ವೀಕ್ಷಿಸಿದರು.