ಸಾರಾಂಶ
ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಧರ್ಮಗುರು ಡೆನಿಸ್ ಡೆಸಾ ಹಾಗೂ ಸಮನ್ವಯ ಸರ್ವ ಧರ್ಮ ಸಮಿತಿ ಅಧ್ಯಕ್ಷ ರಮೇಶ್ ತಿಂಗಳಾಯ ಅವರ ನೇತೃತ್ವದಲ್ಲಿ ಕ್ರೈಸ್ತ ಬಾಂಧವರು ಸಾರ್ವಜನಿಕ ಗಣೇಶೋತ್ಸವಕ್ಕೆ ಭೇಟಿ ನೀಡಿ ಶುಭಾಶಯ ಕೋರಿದರು. ಅರ್ಚಕರು ಪ್ರಾರ್ಥನೆ ಸಲ್ಲಿಸಿ, ಪ್ರಸಾದ ನೀಡಿ ಗೌರವಿಸಿದರು.
ಕನ್ನಡಪ್ರಭ ವಾರ್ತೆ ಮಲ್ಪೆ
ತೊಟ್ಟಂ ಗ್ರಾಮದ ಸಾರ್ವಜನಿಕ ಗಣೇಶೋತ್ಸವದಲ್ಲಿ ಸ್ಥಳೀಯ ಚರ್ಚಿನ ಧರ್ಮಗುರುಗಳು ಬುಧವಾರ ಭಾಗವಹಿಸಿ ಸೌಹಾರ್ದತೆಗೆ ಸಾಕ್ಷಿಯಾದರು.ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಧರ್ಮಗುರು ಡೆನಿಸ್ ಡೆಸಾ ಹಾಗೂ ಸಮನ್ವಯ ಸರ್ವ ಧರ್ಮ ಸಮಿತಿ ಅಧ್ಯಕ್ಷ ರಮೇಶ್ ತಿಂಗಳಾಯ ಅವರ ನೇತೃತ್ವದಲ್ಲಿ ಕ್ರೈಸ್ತ ಬಾಂಧವರು ಸಾರ್ವಜನಿಕ ಗಣೇಶೋತ್ಸವಕ್ಕೆ ಭೇಟಿ ನೀಡಿ ಶುಭಾಶಯ ಕೋರಿದರು. ಅರ್ಚಕರು ಪ್ರಾರ್ಥನೆ ಸಲ್ಲಿಸಿ, ಪ್ರಸಾದ ನೀಡಿ ಗೌರವಿಸಿದರು.ಈ ವೇಳೆ ಮಾತನಾಡಿದ ಧರ್ಮಗುರು ಡೆಸಾ, ತೊಟ್ಟಂ ಪರಿಸರ ಸರ್ವ ಧರ್ಮಗಳ ಸೌಹಾರ್ದತೆಯ ತಾಣವಾಗಿದ್ದು, ಪ್ರತಿವರ್ಷ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಸಹೋದರರಂತೆ ಭಾಗಿಯಾಗುತ್ತಿದ್ದೇವೆ. ಅಲ್ಲದೆ ಗಣೇಶೋತ್ಸವ ಸಮಿತಿ ಸದಸ್ಯರೂ ಚರ್ಚಿನ ವಾರ್ಷಿಕ ಮಹೋತ್ಸವ ಹಾಗೂ ತೆನೆ ಹಬ್ಬಗಳಿಗೆ ತಮ್ಮ ವೇದಿಕೆಯಲ್ಲಿ ಅವಕಾಶ ನೀಡಿ ಸೌಹಾರ್ದತೆಯನ್ನು ಕೃತಿಯಲ್ಲಿ ತೋರಿಸುತ್ತಿದ್ದಾರೆ. ಗಣಪತಿಯ ಆಶೀರ್ವಾದ ಇಡೀ ತೊಟ್ಟಂ ಪರಿಸರದ ಮೇಲೆ ಇರಲಿ ಎಂಬುದು ನಮ್ಮೆಲ್ಲರ ಪ್ರಾರ್ಥನೆಯಾಗಲಿ ಎಂದರು.ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಲೆಸ್ಲಿ ಆರೋಝಾ, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, ಸಂತ ಅನ್ನಮ್ಮ ಕಾನ್ವೆಂಟಿನ ಸಿಸ್ಟರ್ ಸುಷ್ಮಾ, ಸಿಸ್ಟರ್ ಶಾಲಿನಿ, ಸಿಸ್ಟರ್ ಲೂಸಿ, ಅಂತರ್ ಧರ್ಮೀಯ ಸಂವಾದ ಆಯೋಗದ ಸಂಚಾಲಕ ಆಗ್ನೆಲ್ ಫರ್ನಾಂಡಿಸ್, ಪದಾಧಿಕಾರಿ ಓನಿಲ್ ಡಿಸೋಜ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ್ ಕೆ. ಸಾಲಿಯಾನ್, ಕಾರ್ಯಾಧ್ಯಕ್ಷ ಯತಿರಾಜ್ ಸಾಲಿಯಾನ್, ಪ್ರಧಾನ ಕಾರ್ಯದರ್ಶಿ ಯೋಗಿಶ್ ಕುಮಾರ್, ಕೋಶಾಧಿಕಾರಿ ರಮೇಶ್ ತೊಟ್ಟಂ ಇತರರು ಉಪಸ್ಥಿತರಿದ್ದರು.