ಇಂದು ದೇವರ ಮಗ ಮತ್ತು ಮಾನವೀಯತೆಯ ವಿಮೋಚಕ ಎಂದು ಪೂಜಿಸಲ್ಪಟ್ಟ ಏಸುವಿನ ಜನ್ಮವನ್ನು ಆಚರಿಸುವ, ಗೌರವಿಸುವ ಪವಿತ್ರ ದಿನವಾಗಿದೆ. ಎಲ್ಲರಿಗೂ ಮೇರಿ ಕ್ರಿಸ್ಮಸ್ ಶುಭಾಶಯಗಳು. ಈ ಹಬ್ಬವು ಎಲ್ಲರಿಗೂ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ. ಸೌಹಾರ್ದತೆ ಮತ್ತು ಸಹಾನುಭೂತಿಯ ಚೈತನ್ಯವನ್ನು ಸಂಕೇತಿಸುವ ಕ್ರಿಸ್ ಮಸ್ ಹಬ್ಬವನ್ನು ಆಚರಿಸೋಣ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವಿಶ್ವಕ್ಕೆ ಶಾಂತಿ ಮತ್ತು ಸತ್ಯದ ಸಂದೇಶ ಸಾರಿದ ಏಸುಕ್ರಿಸ್ತರ ಜನ್ಮದಿನ ಕ್ರಿಸ್ ಮಸ್ ಹಬ್ಬವನ್ನು ಗುರುವಾರ ಕ್ರೈಸ್ತ ಬಾಂಧವರು ಜಿಲ್ಲಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಿದರು.

ಬಿ.ಬಿ.ರಸ್ತೆಯಲ್ಲಿರುವ ರೋಮನ್ ಕ್ಯಾಥೋಲಿಕ್ ಪಂಥದ ಸಂತ ಫ್ರಾನ್ಸಿಸ್ ಕ್ಷೇವಿಯರ್ ಚರ್ಚ್, ಸೂಸೆಪಾಳ್ಳದ ಚರ್ಚ್, ಕೆ.ಎಸ್ ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗದ ಪ್ರೊಟೆಸ್ಟೆಂಟ್ ಪಂಥದ ಚರ್ಚ್ ಆಫ್ ಸೌತ್ ಇಂಡಿಯಾ(ಸಿಎಸ್‌ಐ) ಚರ್ಚ್ , ಮಂಚನಬಲೆ ರಸ್ತೆಯ ಚರ್ಚ್, ಗೊಲ್ಲಹಳ್ಳಿಯ ಚರ್ಚ್, ಅರೂರಿನ ಬಳಿಯ ಚರ್ಚ್ ಗಳು ಸೇರಿದಂತೆ ನಗರ ಹಾಗೂ ಗ್ರಾಮಾಂತರದ ವಿವಿಧೆಡೆ ಚರ್ಚ್ ಗಳಲ್ಲಿ ಕ್ರೈಸ್ತ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಚರ್ಚ್ ಗಳು ವೈವಿಧ್ಯಮಯ, ವರ್ಣಮಯ ವಿದ್ಯುತ್ ದೀಪಾಲಂಕಾರ ಹಾಗೂ ಚಿತ್ತಾಕರ್ಷಕ ನಕ್ಷತ್ರಗಳಿಂದ ಕಂಗೊಳಿಸುತ್ತಿದ್ದವು. ಗೋದಲಿಯಲ್ಲಿ ಬಾಲ ಏಸುಮೂರ್ತಿಯನ್ನು ಇಟ್ಟು ದೇವರ ಸ್ತುತಿ, ಜೋಗಳ ಮೂಲಕ ಭಕ್ತಾದಿಗಳು ಆರಾಧಿಸಿದರು. ಮೇಣದ ಬತ್ತಿಗಳನ್ನು ಬೆಳಗಿ ಏಸು ಜನ್ಮ ದಿನವನ್ನು ಸ್ವಾಗತಿಸಿದರು. ಚರ್ಚ್ ಗಳಲ್ಲಿ ಬುಧವಾರ ಮಧ್ಯರಾತ್ರಿ ಅಪಾರ ಪ್ರಮಾಣದಲ್ಲಿ ನೆರೆದಿದ್ದ ಭಕ್ತಾದಿಗಳು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಗುರುವಾರ ಬೆಳಗ್ಗೆ ಜನರು ಚರ್ಚ್​ಗೆ ಹೋಗಿ ವಿಶೇಷವಾಗಿ ಪಾರ್ಥನೆ ಸಲ್ಲಿಸುವುದರೊಂದಿಗೆ ಮನೆಯನ್ನು ಕ್ರಿಸ್​ಮಸ್​ ಟ್ರೀ ಹಾಗೂ ಹೂವುಗಳಿಂದ ಅಲಂಕರಿಸಿದ್ದರು. ಸಂಬಂಧಿಕರು, ಸ್ನೇಹಿತರೆಲ್ಲಾ ಒಟ್ಟಾಗಿ ಸೇರಿ ವಿಶೇಷ ಆಹಾರಗಳನ್ನು ಮಾಡಿ ಸವಿದರು.

ಕೆಲ ರಾಜಕಾರಣಿಗಳು ನಗರದ ಸಂತ ಕ್ಷೇವಿಯರ್ ಚರ್ಚ್,ಸಿಎಸ್ಐ ಚರ್ಚ್ ಗಳಿಗೆ ಭೇಟಿ ನೀಡಿ ಕ್ರೈಸ್ತ ಭಾಂಧವರಿಗೆ ಶುಭಾಷಯಗಳನ್ನು ಕೋರಿದರು.

ಈ ವೇಳೆ ಸಂತ ಕ್ಷೇವಿಯರ್ ಚರ್ಚ್ ನ ಫಾಧರ್ ಆಲ್ಬನ್ ಡಿಯೋ ಮಾತನಾಡಿ, ಇಂದು ದೇವರ ಮಗ ಮತ್ತು ಮಾನವೀಯತೆಯ ವಿಮೋಚಕ ಎಂದು ಪೂಜಿಸಲ್ಪಟ್ಟ ಏಸುವಿನ ಜನ್ಮವನ್ನು ಆಚರಿಸುವ, ಗೌರವಿಸುವ ಪವಿತ್ರ ದಿನವಾಗಿದೆ. ಎಲ್ಲರಿಗೂ ಮೇರಿ ಕ್ರಿಸ್ಮಸ್ ಶುಭಾಶಯಗಳು. ಈ ಹಬ್ಬವು ಎಲ್ಲರಿಗೂ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ. ಸೌಹಾರ್ದತೆ ಮತ್ತು ಸಹಾನುಭೂತಿಯ ಚೈತನ್ಯವನ್ನು ಸಂಕೇತಿಸುವ ಕ್ರಿಸ್ ಮಸ್ ಹಬ್ಬವನ್ನು ಆಚರಿಸೋಣ. ಇಂದು ಕ್ರಿಸ್ತನ ಉದಾತ್ತ ಬೋಧನೆಗಳನ್ನು ಸ್ಮರಿಸೋಣ ಎಂದು ಹೇಳಿದರು.

ಸಿಎಸ್ಐ ಚರ್ಚ್ ನ ಫಾಧರ್ ರೆವರೆಂಡ್ ಪ್ರವೀಣ್ ಮಾತನಾಡಿ, ಎಲ್ಲರಿಗೂ ಕ್ರಿಸ್ಮಸ್ ಶುಭಾಶಯಗಳು. ಈ ಹಬ್ಬವು ಸಾಮರಸ್ಯ, ಪ್ರೀತಿ ಮತ್ತು ಸಹಾನುಭೂತಿಯ ಸಂದೇಶವನ್ನು ಸಾರುತ್ತದೆ. ನಾವು ಏಸುಕ್ರಿಸ್ತನ ಬೋಧನೆಗಳನ್ನು ನೆನಪಿಸೋಣ. ಎಲ್ಲರ ಯೋಗಕ್ಷೇಮ ಮತ್ತು ಸಮೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡುವ ಸಂಕಲ್ಪ ಮಾಡೋಣ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಕ್ರೈಸ್ತಭಾಂಧವರು ಪರಸ್ಪರ ಸಿಹಿ ಹಂಚಿಕೊಂಡರು.

ಕ್ರೈಸ್ತಬಾಂಧವರಾದ ಜೆ.ಅಂತೋನಿ, ಹೆನ್ರಿ ಪ್ರಸನ್ನ, ಅರುಣ್, ದಾಸ್, ಜಯರಾಜ್,ಜೆಎಂಜೆ ರಾಜು, ಅರಳಪ್ಪ, ಮತ್ತಿತರರು ಇದ್ದರು.