ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕ್ರಿಶ್ಚಿಯನ್‌ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಗೆ ಬಿಡುಗಡೆಯಾದ ಅನುದಾನದಲ್ಲಿ 120 ಕೋಟಿ ರು.ಗಳಿಗೂ ಅಧಿಕ ಮೊತ್ತದ ಅವ್ಯವಹಾರ ನಡೆದಿದೆ ಎಂದು ಗಂಭೀರ ಆರೋಪ ಮಾಡಿರುವ ರೆಡ್‌ ಆರ್ಮಿ ಸಂಘಟನೆಯು, ಪ್ರಕರಣದ ಕುರಿತು ಉನ್ನತ ಮಟ್ಟದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

ಕನ್ನಡಪ್ರಭ ವಾರ್ತೆ ಬೀದರ್‌

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕ್ರಿಶ್ಚಿಯನ್‌ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಗೆ ಬಿಡುಗಡೆಯಾದ ಅನುದಾನದಲ್ಲಿ 120 ಕೋಟಿ ರು.ಗಳಿಗೂ ಅಧಿಕ ಮೊತ್ತದ ಅವ್ಯವಹಾರ ನಡೆದಿದೆ ಎಂದು ಗಂಭೀರ ಆರೋಪ ಮಾಡಿರುವ ರೆಡ್‌ ಆರ್ಮಿ ಸಂಘಟನೆಯು, ಪ್ರಕರಣದ ಕುರಿತು ಉನ್ನತ ಮಟ್ಟದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

ಈ ಕುರಿತು ಶನಿವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಇಸಾಕ್‌ ಕೆಂಪೆನೋರ್‌, ಕ್ರಿಶ್ಚಿಯನ್‌ ಸಮುದಾಯದ ಅಭಿವೃದ್ಧಿಗಾಗಿ ಸ್ಮಶಾನ ಭೂಮಿ, ಚರ್ಚ್‌ಗಳ ದುರಸ್ತಿ, ಸುತ್ತುಗೋಡೆ ಹಾಗೂ ಸಮುದಾಯ ಭವನಗಳ ನಿರ್ಮಾಣಕ್ಕೆ ಮಂಜೂರಾದ ಅನು ದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಹಲವು ಕಡೆ ಕಳಪೆ ಕಾಮಗಾರಿ ನಡೆಸಿ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಬಳಿರಾಮ್‌ ಅವರ ಅವಧಿಯಲ್ಲಿ ಒಂದೇ ಸಂಸ್ಥೆಗೆ ಪದೇ ಪದೇ ಅನುದಾನ ಬಿಡುಗಡೆ ಮಾಡಲಾಗಿದೆ. ನಗರದ ಟಿಡಿಬಿ ಕಾಲೋನಿಯ ಮೆಥೋಡಿಸ್ಟ್‌ ಚರ್ಚಗೆ ಹತ್ತು ಬಾರಿ ಅನುದಾನ ಮಂಜೂರು ಮಾಡಿರುವುದು ಇದಕ್ಕೆ ಉದಾಹರಣೆಯಾಗಿದೆ ಎಂದು ದೂರಿದರು.

ಕ್ರಿಶ್ಚಿಯನ್‌ ಸಮುದಾಯದವರು ಇಲ್ಲದ ಪ್ರದೇಶಗಳಲ್ಲಿಯೂ ಚರ್ಚಗಳ ಹೆಸರಿನಲ್ಲಿ ಅನುದಾನ ಪಡೆಯಲಾಗಿದೆ. ನ್ಯೂ ರಾಜಗೊಂಡ ಕಾಲೋನಿಯ ಚರ್ಚ್‌ಗೆ 2021-22ನೇ ಸಾಲಿನಲ್ಲಿ 25 ಲಕ್ಷ ಹಾಗೂ 2022-23ನೇ ಸಾಲಿನಲ್ಲಿ ₹18 ಲಕ್ಷ ಸೇರಿದಂತೆ ವಿವಿಧ ಹಂತಗಳಲ್ಲಿ ₹1 ಕೋಟಿಗೂ ಅಧಿಕ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿದರು.

ಇಂದಿರಾ ಗಾಂಧಿ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಹಣ ಪಡೆಯಲಾಗಿದೆ: ಇವ್ಯಾಂಜೆಲಿಕಲ್‌ ಮೈನಾರಿಟಿ ಟ್ರಸ್ಟ್‌ ಸೇರಿದಂತೆ 120ಕ್ಕೂ ಹೆಚ್ಚು ನಕಲಿ ಸೊಸೈಟಿ ಗಳನ್ನು ಸೃಷ್ಟಿಸಿ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಇಂದಿರಾ ಗಾಂಧಿ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಹಣ ಪಡೆಯಲಾಗಿದೆ. ಶಹಾಪುರ ಗೇಟ್‌ ಸಮೀಪದ ಕೋಟಿಲಿಂಗೇಶ್ವರ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಚರ್ಚ್‌ ನಿರ್ಮಾಣದ ಹೆಸರಿನಲ್ಲಿ ಅವ್ಯವಹಾರ ನಡೆದಿದೆ ಎಂದು ದೂರಿದರು.

ಈ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಅಧಿಕಾರಿ ಬಳಿರಾಮ ಹಾಗೂ ಸಿಬ್ಬಂದಿ ದಿನೇಶ ಅವರ ಪಾತ್ರದ ಕುರಿತು ತನಿಖೆ ನಡೆಸಬೇಕು. ಆರೋಪಗಳು ಸಾಬೀತಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಂಡು ದುರ್ಬಳಕೆಯಾದ ಸರ್ಕಾರಿ ಅನುದಾನವನ್ನು ವಸೂಲಿ ಮಾಡಬೇಕು ಎಂದು ಒತ್ತಾಯಿಸಿದರು.

ಅ.15ರಿಂದ ಹೋರಾಟ: ಜಿಲ್ಲಾಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ ಕಾಮಗಾರಿಗಳು, ಅನುದಾನ ಮಂಜೂರಾತಿ ಹಾಗೂ ಫಲಾನುಭವಿ ಸಂಸ್ಥೆಗಳ ದಾಖಲೆಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳದಿದ್ದರೆ ಅಕ್ಟೋಬರ್‌ 15ರಿಂದ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಜಿಲ್ಲಾಧ್ಯಕ್ಷ ಸುರೇಂದ್ರ ಕೋಟೆ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಚಿನ್‌ ಚಂಪಾಕರ್‌ ಮಾತನಾಡಿದರು. ಪವನ, ಸಂದೀಪ, ಸಂಪತ ಕುಮಾರ, ಸಂತೋಷ, ಸುರೇಶ ಹಾಗೂ ಇತರರು ಹಾಜರಿದ್ದರು.

----