ಅಮ್ಮತ್ತಿಯ ಸಂತ ಅಂತೋಣಿ ದೇವಾಲಯದ ಸಭಾಂಗಣ ದಲ್ಲಿ ನಡೆದ ದಕ್ಷಿಣ ಕೊಡಗು ಕ್ರಿಶ್ಚಿಯನ್ ಅಸೋಸಿಯೇಷನ್ ಆಯೋಜಿಸಿದ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಆಚರಣೆ
ವಿರಾಜಪೇಟೆ: ಸಮಾನತೆ ಇದ್ದಲ್ಲಿ ಮಾತ್ರ ಸದೃಢ ಸಮಾಜದ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟರು.
ಅವರು ಅಮ್ಮತ್ತಿಯ ಸಂತ ಅಂತೋಣಿ ದೇವಾಲಯದ ಸಭಾಂಗಣ ದಲ್ಲಿ ನಡೆದ ದಕ್ಷಿಣ ಕೊಡಗು ಕ್ರಿಶ್ಚಿಯನ್ ಅಸೋಸಿಯೇಷನ್ ಆಯೋಜಿಸಿದ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಆಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಕೇಕ್ ಕತ್ತರಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸರ್ವ ಧರ್ಮದಲ್ಲೂ ಸಮಾನತೆ ಮುಖ್ಯ ಆಗಿದ್ದಲ್ಲಿ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಜಾತಿ ಧರ್ಮ ಗಳಲ್ಲಿ ಸಮಾನತೆ ಕಾಣುವಂತೆ ಮುಖ್ಯ ಮಂತ್ರಿಗಳಾದ ಸಿದ್ಧರಾಮಯ್ಯ ಅವರ ಸರಕಾರ ಮಾಡುತ್ತಿದ್ದು ಜನತೆಗೆ ನೀಡಿದ ಭರವಸೆಯನ್ನು ಈಡೇರಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು. ಸಮಾಜದಲ್ಲಿ ಪರಸ್ಪರ ಹೊಂದಾಣಿಕೆ, ಸಾಮರಸ್ಯ ಮೂಡಿದಾಗ ಮಾತ್ರ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ ಎಂದರು.
ಸಮಾನತೆಯಿಂದ ಮಾತ್ರ ಪ್ರಗತಿ ಸಾಧ್ಯ ಎಂದರು. ಹಾಗೂ ನೆರೆದಿದ್ದ ಸರ್ವರಿಗೂ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಶುಭಾಶಯವನ್ನು ತಿಳಿಸಿದರು. ಅಮ್ಮತ್ತಿಯ ಸಂತ ಅಂತೋಣಿ ದೇವಾಲಯದ ಧರ್ಮ ಗುರುಗಳಾದ ರೆ . ಫಾ.ಮದಲೈ ಮುತ್ತು ರವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ಕ್ರಿಸ್ಮಸ್ ಹಬ್ಬವು ಶಾಂತಿ ಹಾಗೂ ಪ್ರೀತಿಯ ಸಂದೇಶವನ್ನು ಕೊಡುತ್ತದೆ. ದ್ವೇಷ ಗಳನ್ನು ಕೊನೆಗಾಣಿಸಿ ಸಾಮರಸ್ಯದ ಭಾವನೆಯನ್ನು ಎಲ್ಲರಲ್ಲಿ ಮೂಡಿಸುತ್ತದೆ. ಹೊಸ ವರ್ಷವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಸರ್ವರೂ ಸುಖ ಶಾಂತಿ ಸಹಬಾಳ್ವೆಯಿಂದ ಸಮಾಜದಲ್ಲಿ ಜೀವಿಸುವಂತಾಗಲಿ ಎಂದು ಶುಭ ಹಾರೈಸಿದರು. ದಕ್ಷಿಣ ಕೊಡಗು ಕ್ರಿಶ್ಚಿಯನ್ ಅಸೋಸಿಯೇಷನ್ ನ ಅಧ್ಯಕ್ಷರಾದ ಎ ಜೆ ಬಾಬು ಅಧ್ಯಕ್ಷೀಯ ನುಡಿಗಳನಾಡಿದರು.ಈ ಸಂದರ್ಭದಲ್ಲಿ ಸಿಸ್ಟರ್ ಎಲಿಜಬೆತ್, ಸಮಾಜ ಸೇವಕರಾದ ಜಾರ್ಜ್, ಸಂಘದ ಸಹ ಕಾರ್ಯದರ್ಶಿ ಅಂತೋಣಿ ಜೊಸೆಫ್, ಹ್ಯಾಂಡೊ ಸಿ ಜೆ, ಖಜಾಂಚಿ ಜಾರ್ಜ್ ಎಂ, ಸಂಚಾಲಕರಾದ ಅಂಟೋನಿ ರೋಬಿನ್ ಸೇರಿದಂತೆ ಕ್ರೈಸ್ತ ಸಮುದಾಯದ ಬಾಂದವರು ಹಾಜರಿದ್ದರು.