ಸಾರಾಂಶ
ಕನ್ನಡಪ್ರಭ ವಾರ್ತೆ ಆಳಂದ
ಯೇಸು ಕ್ರಿಸ್ತನ ಜನ್ಮ ಮಾನವತೆಗೆ ದೇವರ ಆಶೀರ್ವಾದ ಮತ್ತು ದೈವಿಕ ಅನುಗ್ರಹದ ಪ್ರತೀಕವಾಗಿದೆ ಎಂದು ಸ್ಥಳೀಯ ಶಾಂತಿವನ ಚರ್ಚ್ ಫಾದರ್ ಬಾಪು ಅವರು ಹೇಳಿದರು.ಪಟ್ಟಣದ ಬಸ್ ನಿಲ್ದಾಣ ಮುಂದೆ ಬುಧವಾರ ಶಾಂತಿವನ ಚರ್ಚ್ ಆಶ್ರಯದಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆ ನಿಮಿತ್ತ ಕೈಗೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೇಸುಕ್ರಿಸ್ತರು ಇಡೀ ಲೋಕದ ರಕ್ಷಣೆಗಾಗಿ ಈ ಭೂಮಿಯಲ್ಲಿ ದೀನರಾಗಿ ಜನಿಸಿದರು. ಇಡೀ ಜಗತ್ತಿಗೆ ಶಾಂತಿಯನ್ನು ಸಾರಿದರೂ, ಅದೇ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಾಗಿದೆ ಎಂದು ಹೇಳಿದರು.
ನಮ್ಮ ಜೀವನದಲ್ಲಿ ಶಾಂತಿ ಮತ್ತು ಪ್ರೀತಿಯನ್ನು ಸ್ಥಾಪಿಸಲು, ನಾವು ಯೇಸು ಕ್ರಿಸ್ತನ ತತ್ವಗಳನ್ನು ಪಾಲಿಸಬೇಕಾಗಿರುತ್ತದೆ. ಯೇಸು ಆಶೀರ್ವಾದದಿಂದ, ನಾವು ನಮ್ಮ ಹೃದಯಗಳನ್ನು ಬದಲಾಯಿಸಿ, ಪ್ರಪಂಚವನ್ನು ಇನ್ನಷ್ಟು ಶಾಂತಿದಾಯಕವಾಗಿ, ಪ್ರೀತಿಪೂರ್ವಕವಾಗಿ ರೂಪಿಸಲು ಮುಂದಾಗಬೇಕಿದೆ ಎಂದರು.ಕ್ರಿಸ್ಮಸ್ ಹಬ್ಬವು ಯೇಸು ಕ್ರಿಸ್ತನ ಜನ್ಮವನ್ನು ನೆನೆಸಿಕೊಂಡು, ಅವರ ಅನುಗ್ರಹ ಮತ್ತು ಪವಿತ್ರತೆಯನ್ನು ತಲುಪುವ ದಿನವಾಗಿದೆ. ಯೇಸು ಅವರು ಈ ಪ್ರಪಂಚದಲ್ಲಿ ಬಂದಾಗ, ಅವರು ಮಾನವ ಸಮಾಜಕ್ಕೆ ದೇವರ ದಯೆ, ಪ್ರೀತಿ ಮತ್ತು ಶಾಂತಿಯ ಸಂದೇಶ ತಂದುಕೊಟ್ಟರು. ಅವರ ಬೋಧನೆಗಳಲ್ಲಿ ಸಹಾನುಭೂತಿ, ಕ್ಷಮೆ, ಪ್ರೀತಿ ಮತ್ತು ಸೇವೆಯ ಮಹತ್ವ ಒಳಗೊಂಡಿದೆ. ಅವರು ತೋರಿಸಿದ ದಯೆ, ಸಹನೆ ಮತ್ತು ಶಾಂತಿ ನಮ್ಮ ಪ್ರತಿಯೊಬ್ಬರ ಬಾಳು ಬೆಳಗಲಿದೆ ಎಂದು ನುಡಿದರು.
ಉಸ್ತುರಿ ಧುತ್ತರಗಾಂವ ಮಠದ ಶ್ರೀ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿದ ಅವರು, ನಾವೆಲ್ಲರೂ ಐಕ್ಯತೆಯಲ್ಲಿ ಜೀವಿಸಿ ಆ ಯೇಸು ಕ್ರಿಸ್ತನ ಸಂದೇಶ ಸಾರಬೇಕು ಎಂದರು.ಜಿಪಂ ಮಾಜಿ ಸದಸ್ಯೆ ಪೂಜಾ ರಮೇಶ ಲೋಹಾರ್, ಸಿಸ್ಟರ್, ಸೆಂಟ್‍ಮೇರಿ ಶಾಲೆಯ ಪ್ರಾಂಶುಪಾಲರು ಜೂಲಿಯಾನ, ಸಿಸ್ಟರ್ ತೆರೇಸಾ, ಸಿಸ್ಟರ್ ರೋಸ್ಲಿನ್, ಸ್ಟೀವನ್, ಸುಧಾ, ಆಶಾ, ಅಖಿಲ, ಅಂಬಿಕ, ಕೈಲಾಶ್ ಮತ್ತು ಅನೇಕ ಗಣ್ಯರು ಭಾಗವಹಿಸಿ ಯೇಸುಕ್ರಿಸ್ತರ ದರ್ಶನ ಪಡೆದರು.
ಸ್ಥಳೀಯ ಸಾರ್ವಜನಿಕರು, ಪ್ರಯಾಣಿಕರು, ಮತ್ತು ಚರ್ಚ್ ಅಭಿಮಾನಿಗಳು ಈ ಆಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿದ್ದು, ಎಲ್ಲರಿಗೂ ಕೇಕ್ ವಿತರಣೆ ಮಾಡಲಾಯಿತು.