ಪ್ರಭು ಯೇಸುಕ್ರಿಸ್ತರು ಮತ್ತೊಮ್ಮೆ ಈ ಧರೆಗೆ ಬರಲೆಂದು ಆಪೇಕ್ಷಿಸಿ ಸಮಸ್ತ ಮಾನವ ಕುಲವು ಭಕ್ತಿಶ್ರದ್ಧೆಯಿಂದ ಅವರ ಎರಡನೇ ಆಗಮನವನ್ನು ಎದುರು ನೋಡುತ್ತಿದೆ.
ಕನ್ನಡಪ್ರಭ ವಾರ್ತೆ ಹಳಿಯಾಳ
ಪ್ರಭು ಯೇಸುಕ್ರಿಸ್ತರು ಮತ್ತೊಮ್ಮೆ ಈ ಧರೆಗೆ ಬರಲೆಂದು ಆಪೇಕ್ಷಿಸಿ ಸಮಸ್ತ ಮಾನವ ಕುಲವು ಭಕ್ತಿಶ್ರದ್ಧೆಯಿಂದ ಅವರ ಎರಡನೇ ಆಗಮನವನ್ನು ಎದುರು ನೋಡುತ್ತಿದೆ. ಇದನ್ನೇ ನಾವು ಭರವಸೆ ಕಾಲ ಅಥವಾ ಆಗಮನದ ಕಾಲವೆಂದು ಕರೆಯುತ್ತೇವೆ ಎಂದು ಹಳಿಯಾಳ ಮಿಲಾಗ್ರಿಸ್ ಚರ್ಚ್‌ನ ಹಿರಿಯ ಗುರು ಫ್ರಾನ್ಸಿಸ್ ಮಿರಾಂಡಾ ಹೇಳಿದರು.ಭಾನುವಾರ ಪಟ್ಡಣದ ಮಿಲಾಗ್ರಿಸ್ ಚರ್ಚ್‌ನಲ್ಲಿ ನಡೆದ ಧಾರ್ಮಿಕ ಪೂಜಾವಿಧಿಯಲ್ಲಿ ಕ್ರಿಸ್ಮಸ್ ಆಚರಣೆಗೆ ಸಿದ್ಧತೆಯಾಗಿ ಆಚರಿಸುವ ನಾಲ್ಕು ಭಾನುವಾರಗಳ ಆಗಮನದ ಕಾಲವನ್ನು ಮೇಣದ ಬತ್ತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಆಶೀರ್ವಚನ ನೀಡಿದರು.ನ.30ರಿಂದ ಡಿ. 21ರವರೆಗೆ ಅಂದರೇ ಕ್ರಿಸ್ಮಸ್ ಹಬ್ಬದ ಮಧ್ಯೆ ಬರುವ ನಾಲ್ಕು ಭಾನುವಾರಗಳ ಕಾಲಾವಧಿಯನ್ನು ಕ್ರಿಸ್ತರ ಆಗಮನದ ಕಾಲವೆಂತಲೂ ಅಥವಾ ಮಾನವ ಕುಲದ ಭರವಸೆಯ ಕಾಲವೆಂತಲೂ ಕರೆಯುತ್ತಾರೆ. ಹೀಗೆ ಪ್ರತಿಯೊಂದು ಸಪ್ತಾಹವನ್ನು ವಿಶೇಷ ಉದ್ದೇಶಕ್ಕಾಗಿ ಆಯ್ಕೆ ಮಾಡಿ ಆರಾಧನೆ, ಪೂಜೆಗೆ ಸಿದ್ಧತೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಪೂಜಾ ವಿಧಿಯಲ್ಲಿ ಹಳಿಯಾಳ ಪಟ್ಟಣದ ಕ್ರೈಸ್ತರು ಭಾಗವಹಿಸಿದ್ದರು. ವಾರದ ಸರದಿಯಂತೆ ಭಾನುವಾರ ಪೂಜಾವಿಧಿಯ ಪ್ರಾರ್ಥನೆಯನ್ನು ಯುವಜನರು ಅರ್ಪಿಸಿದರು. ಜೋಸೆಫ್ ಫರ್ನಾಂಡೀಸ್ ಹಾಗೂ ವರ್ಜನಿಯಾ ಗೊನ್ಸಾಲ್ವಿಸ್ ಹಾಗೂ ತಂಡದವರು ಪೂಜಾವಿಧಿಯ ಗೀತೆ ಹಾಡಿ ಮೆರಗನ್ನು ನೀಡಿದರು.ಸಿದ್ಧತಾ ಸಭೆ:ಪೂಜಾವಿಧಿಯ ನಂತರ ಕ್ರಿಸ್ಮಸ್ ಆಚರಣೆಗೆ ಇತರ ಸಕಲ ಸಿದ್ಧತೆ ನಡೆಸುವ ಉದ್ದೇಶಿಂದ ಚರ್ಚ್ ಸಲಹಾ ಮಂಡಳಿ ಹಾಗೂ ಯುವಕ ಸಂಘದ ಜಂಟಿ ಸಭೆಯು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಪ್ರಧಾನ ಗುರು ಫ್ರಾನ್ಸಿಸ್ ಮಿರಾಂಡಾ ವಹಿಸಿದ್ದರು. ಸಹಾಯಕ ಗುರು ಅರುಣ ಫರ್ನಾಂಡೀಸ್ ಹಾಗೂ ಕಾರ್ಮೆಲ್ ಕಾನ್ವೆಂಟಿನ ಮುಖ್ಯ ಭಗಿಣಿ ಸಿಸ್ಟರ್ ರೋಜಿಮಾ ಹಾಗೂ ಇತರರು ಇದ್ದರು. ಚರ್ಚ್ ಸಲಹಾ ಮಂಡಳಿಯ ಕಾರ್ಯದರ್ಶಿ ಓರ್ವೆಲ್ ಫರ್ನಾಂಡೀಸ್, ನಿಕಟಪೂರ್ವ ಕಾರ್ಯದರ್ಶಿ ಕೈತಾನ ಮನಸ್ಕರೆನ್ಸ್, ಅಕ್ಷಯ ಬ್ಯಾಂಕ್ ಉಪಾಧ್ಯಕ್ಷ ಸಂತಾನ ಸಾವಂತ, ಯುವ ಸಂಘದ ಅಧ್ಯಕ್ಷ ಜೋಸೆಫ್ ಫರ್ನಾಂಡೀಸ್, ಉಪಾಧ್ಯಕ್ಷೆ ಸ್ಟೇಲ್ಲಾ ಡಿಸೋಜ, ಕಾರ್ಯದರ್ಶಿ ಸಾನಿಯಾ ಮೆಂಡಿಸ್ ಸೇರಿದಂತೆ ಹಲವರು ಇದ್ದರು.