ಪರಸ್ಪರ ಸಂತೋಷ ಹಂಚಿ ಬಾಳುವುದೇ ಕ್ರಿಸ್ಮಸ್

| Published : Dec 26 2024, 01:04 AM IST

ಸಾರಾಂಶ

ಕಮಲನಗರ ಪಟ್ಟಣದ ಶಾಯಿನಗರ ಬಡಾವಣೆಯಲ್ಲಿರುವ ನ್ಯೂ ಚರ್ಚ್‌ನಲ್ಲಿ ಬುಧುವಾರ ಆಯೋಜಿಸಿದ ಕ್ರಿಸ್ಮಸ್ ಕಾರ್ಯಕ್ರಮದಲ್ಲಿ ಧರ್ಮಗುರು ಶೇಖರ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕಮಲನಗರ

ಪರಸ್ಪರ ಸಂತೋಷ ಹಂಚಿಕೊಂಡು ಬಾಳುವುದೇ ಕ್ರಿಸ್ಮಸ್ ಹಬ್ಬದ ನಿಜವಾದ ಅರ್ಥ ಎಂದು ನ್ಯೂ ಚರ್ಚಿನ ಧರ್ಮಗುರು ಶೇಖರ್‌ ಹೇಳಿದರು.

ಕಮಲನಗರ ಪಟ್ಟಣದ ಶಾಯಿನಗರ ಬಡಾವಣೆಯಲ್ಲಿರುವ ನ್ಯೂ ಚರ್ಚ್‌ನಲ್ಲಿ ಬುಧುವಾರ ಕ್ರಿಸ್ಮಸ್ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ರಿಸ್ಮಸ್ ಹಬ್ಬದಲ್ಲಿ ಪರಸ್ಪರ ಶುಭಾಶಯ, ಸಿಹಿತಿಂಡಿಗಳನ್ನು ಹಂಚಿಕೊಂಡರೆ ಸಾಲದು, ಸಹಬಾಳ್ವೆಯ ಜೀವನವನ್ನು ಬಾಳುವುದರೊಂದಿಗೆ ಅದರೊಂದಿಗೆ ಪ್ರತಿಯೊಬ್ಬರು ಜೀವನದಲ್ಲಿ ಅನುಕರಣೆ ಮಾಡಿದಾಗ ಮಾತ್ರ ಹಬ್ಬದ ಆಚರಣೆ ಸಾರ್ಥಕತೆ ಪಡೆಯುತ್ತದೆ ಎಂದರು.

ಎಲ್ಲಾ ಧರ್ಮಗಳ ಆಚರಣೆಯಲ್ಲಿ ಸಾಮ್ಯತೆಗಳಿವೆ. ನಮ್ಮ ನೆರೆಯವರನ್ನು ಗೌರವಿಸಿ ನಡೆದಾಗ ಸೌಹಾರ್ದ ಸಮಾಜ ನಿರ್ಮಾಣಗೊಳ್ಳುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.

ಪ್ರವೀಣ ಸೂರ್ಯವಂಶಿ ಮಾತನಾಡಿ, ಯೇಸುಕ್ರಿಸ್ತ ಈ ಜಗದ ಉದ್ಧಾರಕ್ಕಾಗಿ ಧರೆಯ ಮೇಲೆ ಜನ್ಮತಾಳಿದ ದೇವರು, ಎಲ್ಲರ ಪಾಪ, ಕರ್ಮಗಳನ್ನು ತಾನು ಸ್ವೀಕರಿಸಿ ಜಗವನ್ನು ಉದ್ಧರಿಸಿದ ಪ್ರವಾದಿ. ಆದಕಾರಣ ಈ ಭೂಮಿಯ ಮೇಲೆ ಹುಟ್ಟಿದವರೆಲ್ಲ ಯೇಸುವಿಗೆ ಸದಾ ಚಿರರುಣಿ ಆಗಿರಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದು ಎಲ್ಲರಿಗೂ ಒಳಿತು ಮಾಡಬೇಕು ಎಂದರು.

ಸುನೀಲ ಸಂತು ಮಾತನಾಡಿ, ಬಡವ ಬಲ್ಲಿದ, ದೀನ ದುರ್ಬಲ ಎನ್ನದೆ ಎಲ್ಲರ ಕಲ್ಯಾಣಕ್ಕಾಗಿ ಯೇಸು ಸಾಕಷ್ಟು ನೋವು ಅನುಭವಿಸಿ ಜೀವ ಕೊಟ್ಟಿದ್ದಾರೆ. ಅವರ ತ್ಯಾಗ, ಬಲಿದಾನ ವ್ಯರ್ಥವಾಗಬಾರದು. ಸದಾ ಜಗದ ಹಿತಕ್ಕಾಗಿ ಕೆಲಸ ಮಾಡಬೇಕು. ಬೈಬಲ್ ಕೂಡ ಇದೇ ಹೇಳುತ್ತದೆ ಎಂದು ತಿಳಿಸಿದರು. ತಾಲೂಕಿನ ವಿವಿಧ ಗ್ರಾಮದ ಕ್ರೈಸ್ತ ಬಾಂಧವರು ಚರ್ಚ್‌ನಲ್ಲಿ ಭಾಗವಹಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.