ಜೀವನದಲ್ಲಿ ಉನ್ನತ ಭರವಸೆ ಮೂಡಿಸುವುದೇ ಕ್ರಿಸ್‌ಮಸ್ ಸಂದೇಶ: ಬಿಷಪ್ ಪೀಟರ್‌ ಸಲ್ದಾನ

| Published : Dec 21 2024, 01:15 AM IST

ಜೀವನದಲ್ಲಿ ಉನ್ನತ ಭರವಸೆ ಮೂಡಿಸುವುದೇ ಕ್ರಿಸ್‌ಮಸ್ ಸಂದೇಶ: ಬಿಷಪ್ ಪೀಟರ್‌ ಸಲ್ದಾನ
Share this Article
  • FB
  • TW
  • Linkdin
  • Email

ಸಾರಾಂಶ

500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಸಮೂಹ ತುಳು, ಕನ್ನಡ, ಕೊಂಕಣಿ, ಮಲೆಯಾಳ, ಹಿಂದೆ ಸೇರಿದಂತೆ ಹಲವು ಭಾಷೆಗಳಲ್ಲಿ ಕ್ಯಾರೆಲ್ ಹಾಡಿದರೆ, ಏಂಜೆಲ್ಸ್, ಸಾಂತಾಕ್ಲಾಸ್‌, ಬಿಳಿ ಕೆಂಪು ಧಿರಿಸು ತೊಟ್ಟ ನೂರಾರು ವಿದ್ಯಾರ್ಥಿಗಳು ಸಂಭ್ರಮ ಹೆಚ್ಚಿಸಿದರು. ಕಲಾಂಗಣ್ ಮಾಂಡ್ ಸೋಭಾಣೆ ತಂಡದ ಸದಸ್ಯರು ಗಾಯನ ನಡೆಸಿಕೊಟ್ಟರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಗೋದಲಿಯಲ್ಲಿ ಬಾಲಯೇಸು ಜನನದ ದರ್ಶನ, ಕ್ಯಾರೆಲ್ ಹಾಡಿದ ವಿದ್ಯಾರ್ಥಿಗಳ ಗುಂಪು, ಗುಂಪುಗಳ ಮಧ್ಯೆಯಿಂದ ಬಂದ ಸಾಂತಾಕ್ಲಾಸ್‌, ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸಿದ ಕ್ರಿಸ್‌ಮಸ್ ಟ್ರೀ, ಏಂಜೆಲ್ಸ್, ಜಿಂಗಲ್ ಬೆಲ್ ಸಂಗೀತ, ಪುಟಾಣಿಗಳ ಬಾಯಿ ಸಿಹಿ ಮಾಡಿದ ಕೇಕ್. ಕರುಣಾಮಯಿ ಬಾಲಯೇಸು ಜನನದ ಕ್ರಿಸ್‌ಮಸ್ ಸಂಭ್ರಮವು ಆಳ್ವಾಸ್ ಕಾಲೇಜಿನ ನುಡಿಸಿರಿ ಸಭಾಂಗಣದಲ್ಲಿ ಗುರುವಾರ ಸಂಜೆ ಮೂಡಿಬಂತು.

ಭರವಸೆ ನಿರಾಸೆ ಮೂಡಿಸುವುದಿಲ್ಲ. ಬದುಕು ಪ್ರೀತಿಯ ಪಥ. ಜೀವನದಲ್ಲಿ ಉನ್ನತ ಭರವಸೆಯೇ ಕ್ರಿಸ್‌ಮಸ್ ಸಂದೇಶ ಎಂದು ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯಾಧ್ಯಕ್ಷ (ಬಿಷಪ್) ಡಾ. ಪೀಟ‌ರ್ ಸಲ್ದಾನ ಹೇಳಿದರು.

ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಗುರುವಾರ ಸಂಜೆ ನುಡಿಸಿರಿ ವೇದಿಕೆಯಲ್ಲಿ ಹಮ್ಮಿಕೊಂಡ ‘ಆಳ್ವಾಸ್‌ ಕ್ರಿಸ್‌ಮಸ್‌’ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸತ್ಯ ಮತ್ತು ಬದುಕು ನಮ್ಮದಾಗಲಿ. ನಮ್ಮೆಲ್ಲ ಒಳಿತಿಗಾಗಿ ಏಸುಕ್ರಿಸ್ತರು ದೈವಿಕ ಮನುಷ್ಯನಾದರು. ಅವರ ಅನುಸರಣೆಯಿಂದ ಮನುಷ್ಯ ದೈವಿಕ ಆಗಬಹುದು ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮಾತನಾಡಿ, ಭಾರತವು ಒಂದು ಜಾತಿ ಅಥವಾ ಧರ್ಮದ ದೇಶ ಆಗಲು ಸಾಧ್ಯ ಇಲ್ಲ. ಸಾಮರಸ್ಯ, ಸೌಹಾರ್ದತೆಯೇ ದೇಶದ ಭವಿಷ್ಯ ಎಂದರು.

ಭಾರತೀಯರು ಭಾಗ್ಯವಂತರು. 144 ಕೋಟಿ ಜನಸಂಖ್ಯೆಯ ದೇಶ. ಹಲವು ಭಾಷೆ, ಜಾತಿ, ಧರ್ಮ ಇದ್ದರೂ ಎಲ್ಲರೂ ಒಂದಾಗಿ ಬಾಳುವ ದೇಶ. ದೇಶದ ಸಹಿಷ್ಣುತೆಗೆ ಕ್ರೈಸ್ತರು ನೀಡಿದ ಕೊಡುಗೆ ಅಪಾರವಾದುದು. ದಯೆ, ಕರುಣೆ, ತ್ಯಾಗ, ದ್ವೇಷಿಸುವವನ್ನೂ ಪ್ರೀತಿಸು, ಯಾರಿಗೂ ನೋವು ಮಾಡಬೇಡ ಎಂಬಿತ್ಯಾದಿ ಮೌಲ್ಯಗಳನ್ನು ನೀಡಿದ ಕ್ರೈಸ್ತ ಧರ್ಮವು ಸುಧಾರಣೆಗೆ ಕೊಡುಗೆ ನೀಡಿದೆ ಎಂದರು.

ಇದಕ್ಕೂ ಮೊದಲು ಪ್ರಾರ್ಥನೆ ನೆರವೇರಿಸಿದ ಮೂಡುಬಿದಿರೆ ಕೊರ್ಪುಸ್ ಕ್ರೈಸ್ತ ಚರ್ಚ್ ಧರ್ಮಗುರು ಒನಿಲ್ ಡಿಸೋಜ, ವಿನಿಮಯದ ಉತ್ಸವವೇ ಕ್ರಿಸ್‌ಮಸ್. ಯೇಸುಸ್ವಾಮಿ ಜಗತ್ತಿಗೆ ನೀಡಿದ ಮಾನವೀಯತೆಯೇ ಅವರ ಸಂದೇಶ. ಹಾಗಾಗಿ ಅವರ ಕೊಡುಗೆಯನ್ನು ಶಿಕ್ಷಣ, ಸಶಕ್ತಿಕರಣ, ಚಿಕಿತ್ಸೆ ಇತ್ಯಾದಿ ಸೇವೆಯಲ್ಲಿ ಕಾಣುತ್ತೇವೆ ಎಂದು ಹೇಳಿದರು.

ಬೆಳ್ತಂಗಡಿ ಸಿಯೋನ್ ಆಶ್ರಮ ಟ್ರಸ್ಟ್‌ನ ಡಾ.ಯು.ಸಿ. ಪೌಲೋಸ್ ಹಾಗೂ ಅವರ ಪತ್ನಿ ಮೇರಿ ಪೌಲೋಸ್ ಅವರನ್ನು 25 ಸಾವಿರ ರು. ನಗದು, ಹಾರ, ಶಾಲು, ಫಲಕ, ಪ್ರಮಾಣ ಪತ್ರ ಪ್ರದಾನ ಮಾಡಿ ಸನ್ಮಾನಿಸಲಾಯಿತು.500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಸಮೂಹ ತುಳು, ಕನ್ನಡ, ಕೊಂಕಣಿ, ಮಲೆಯಾಳ, ಹಿಂದೆ ಸೇರಿದಂತೆ ಹಲವು ಭಾಷೆಗಳಲ್ಲಿ ಕ್ಯಾರೆಲ್ ಹಾಡಿದರೆ, ಏಂಜೆಲ್ಸ್, ಸಾಂತಾಕ್ಲಾಸ್‌, ಬಿಳಿ ಕೆಂಪು ಧಿರಿಸು ತೊಟ್ಟ ನೂರಾರು ವಿದ್ಯಾರ್ಥಿಗಳು ಸಂಭ್ರಮ ಹೆಚ್ಚಿಸಿದರು. ಕಲಾಂಗಣ್ ಮಾಂಡ್ ಸೋಭಾಣೆ ತಂಡದ ಸದಸ್ಯರು ಗಾಯನ ನಡೆಸಿಕೊಟ್ಟರು.ಮಾಜಿ ಸಚಿವ ಅಭಯಚಂದ್ರ ಜೈನ್ ಇದ್ದರು. ಆಳ್ವಾಸ್‌ ಹೋಮಿಯೋಪಥಿ ಕಾಲೇಜಿನ ಪ್ರಾಂಶುಪಾಲ ರೋಶನ್ ಪಿಂಟೊ ಸ್ವಾಗತಿಸಿದರು. ಉಪನ್ಯಾಸಕ ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.