ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯ ಇತಿಹಾಸ ಪ್ರಸಿದ್ದ ಜಾನುವಾರು ಮತ್ತು ಜನಗಳ ಜಾತ್ರೆಯನ್ನು ವಿಜೃಂಭಣೆಯಿಂದ ನಡೆಸಲು ಅಧಿಕಾರಿಗಳಿಗೆ ಸರ್ವರೂ ಸಹಕಾರ ನೀಡಬೇಕು ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.ಚುಂಚನಕಟ್ಟೆ ಶ್ರೀರಾಮ ದೇವಾಲಯದಲ್ಲಿ ಶನಿವಾರ ನಡೆದ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಹಿಂದೆಂದೆಗಿಂತ ಈ ಬಾರಿ ಜಾತ್ರೆಯನ್ನು ವೈಶಿಷ್ಟ್ಯ ಪೂರ್ಣವಾಗಿ ಮಾಡೋಣ ಎಂದರು.ಜಾನುವಾರು ಜಾತ್ರೆ, ಸೀತಾ ಕಲ್ಯಾಣ, ರಥೋತ್ಸವ ಮತ್ತು ತೆಪ್ಪೋತ್ಸವ ನಡೆಯುವ ದಿನಾಂಕ ಮತ್ತು ವ್ಯವಸ್ಥೆಗಳ ಬಗ್ಗೆ ತಾಲೂಕು ಆಡಳಿತ, ತಾಲೂಕು ಪಂಚಾಯ್ತಿ ಮತ್ತು ಗ್ರಾಮ ಪಂಚಾಯ್ತಿಯವರು ವ್ಯಾಪಕ ಪ್ರಚಾರ ಮಾಡಬೇಕು ಎಂದು ತಿಳಿಸಿದರು.ಆರೋಗ್ಯ ಇಲಾಖೆಯವರು ಜಾತ್ರಾ ಆವರಣದಲ್ಲಿ ತಾತ್ಕಾಲಿಕ ಆಸ್ಪತ್ರೆ ತೆರೆದು ಅಗತ್ಯ ಚಿಕಿತ್ಸೆ ನೀಡಿ ಜತೆಗೆ ಎರಡು ಆಂಬುಲೆನ್ಸ್ ಗಳನ್ನು ಕಾಯ್ದಿರಿಸಿ ಇದರೊಂದಿಗೆ ಅಗತ್ಯ ವೈಧ್ಯರನ್ನು ನೇಮಕ ಮಾಡಿ ಆರೋಗ್ಯ ಶಿಬಿರ ಆಯೋಜಿಸಿ ಎಂದು ಅವರು ಹೇಳಿದರು.ಸಾರಿಗೆ ಇಲಾಖೆಯವರು ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕು ಕೇಂದ್ರಗಳಿಂದ ಚುಂಚನಕಟ್ಟೆಗೆ ಜಾನುವಾರು ಜಾತ್ರೆ, ಸೀತಾ ಕಲ್ಯಾಣೋತ್ಸವ, ರಥೋತ್ಸವ ಮತ್ತು ತೆಪ್ಪೋತ್ಸವ ದಿನಗಳಲ್ಲಿ ಅಗತ್ಯ ಬಸ್ ಸೇವೆ ಒದಗಿಸಬೇಕು ಎಂದರು.ಲೋಕೋಪಯೋಗಿ ಇಲಾಖೆ ವತಿಯಿಂದ ಜಾತ್ರಾ ಸಮಯದಲ್ಲಿ ಎಲ್ಲ ರಸ್ತೆಗಳಿಗೂ ನಿಯಮಿತವಾಗಿ ನೀರು ಚಿಮುಕಿಸಿ ಗುಂಡಿ ಮುಚ್ಚಿಸಬೇಕು ಹಾಗೂ ಜಲ ಸಂಪನ್ಮೂಲ ಇಲಾಖೆಯವರು ನಾಲೆಗಳಿಗೆ ನೀರು ಹರಿಸಿ ರಾಸುಗಳಿಗೆ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಕಟ್ಟಪ್ಪಣೆ ಮಾಡಿದರು.ಚುಂಚನಕಟ್ಟೆ ಹೋಬಳಿ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ದಿಕ್ಕುಗಳ ಪ್ರಮುಖ ರಸ್ತೆಗಳಿಗೂ ಡಿಸೆಂಬರ್ ಅಂತ್ಯದ ವೇಳೆಗೆ ದೀಪಾಲಂಕಾರ ಮಾಡಿ ಎಂದು ಸೆಸ್ಕ್ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.ಕುಪ್ಪೆ ಗ್ರಾಪಂಯವರು ನಾಳೆಯಿಂದಲೆ ಜವಾಬ್ದಾರಿ ತೆಗೆದುಕೊಂಡು ರಾಸುಗಳ ಜಾತ್ರಾ ಮಾಳ ಮತ್ತು ಶ್ರೀರಾಮ ದೇವಾಲಯದ ಸುತ್ತಮುತ್ತ ಕುಡಿಯುವ ನೀರಿನ ಟ್ಯಾಪ್ ಅಳವಡಿಸಿ ಅಗತ್ಯವಿರುವೆಡೆ ಟ್ಯಾಂಕರ್ ಮೂಲಕ ಸರಬರಾಜು ಮಾಡಬೇಕೆಂದು ಆದೇಶಿಸಿದರು.ಕೃಷಿ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅರಣ್ಯ ಸೇರಿದಂತೆ ಇತರ ಇಲಾಖೆಯವರು ವಸ್ತು ಪ್ರದರ್ಶನ ಆಯೋಜಿಸಬೇಕೆಂದು ಆದೇಶ ನೀಡಿದರು.ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಜಿಪಂ ಮಾಜಿ ಸದಸ್ಯರಾದ ಜಿ.ಆರ್. ರಾಮೇಗೌಡ, ಜಯರಾಮೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಹದೇವ್, ಉದಯಶಂಕರ್, ವಕ್ತಾರ ಸೈಯದ್ ಜಾಬೀರ್, ಹೊಸಕೋಟೆ ಗ್ರಾಪಂ ಮಾಜಿ ಅಧ್ಯಕ್ಷ ಸಿ.ಕೆ. ಬಸವರಾಜು, ಕುಪ್ಪೆ ಗ್ರಾಪಂ ಸದಸ್ಯರಾದ ಗೌರಮ್ಮ, ಗೋವಿಂದೇಗೌಡ, ಕುಪ್ಪೆ ಕೃಷಿ ಪತ್ತಿನ ಸಹಕಾರ ಸಂಘದ ಅದ್ಯಕ್ಷ ಸಂತೋಷ್, ತಹಸೀಲ್ದಾರ್ ಎಸ್. ನರಗುಂದ್, ಜಿ. ಸುರೇಂದ್ರಮೂರ್ತಿ, ಗ್ರೇಡ್- 2 ತಹಸೀಲ್ದಾರ್ ರಾಮಪ್ಪ, ಇಒ ವಿ.ಪಿ. ಕುಲದೀಪ್, ಶ್ರೀರಾಮ ದೇವಾಲಯದ ಇಒ ರಘು, ಸೆಸ್ಕ್ ಎಇಇ ಅರ್ಕೇಶ್ ಮೂರ್ತಿ, ಬಿಇಒ ಆರ್. ಕೃಷ್ಣಪ್ಪ, ಸಿಡಿಪಿಒ ಸಿ.ಎಂ. ಅಣ್ಣಯ್ಯ, ಸಮಾಜ ಕಲ್ಯಾಣಾಧಿಕಾರಿ ಶಂಕರ್ ಮೂರ್ತಿ, ಹಿರಿಯ ಪಶು ಸಂಗೋಪನಾ ನಿರ್ದೇಶಕ ಡಾ. ಮಂಜುನಾಥ್, ಸಹಾಯಕ ಎಂಜಿನಿಯರ್ ಜಿ. ಸಿದ್ದೇಶ್ ಪ್ರಸಾದ್, ಪಿಡಿಒಗಳಾದ ರಾಜೇಶ್, ಚಿದಾನಂದ ಇದ್ದರು.