ಆದಿಚುಂಚನಗಿರಿಯಲ್ಲಿ ನಾಳೆ 5 ಮಂದಿ ಸಾಧಕರಿಗೆ ಚುಂಚಶ್ರೀ ಪ್ರಶಸ್ತಿ ಪ್ರದಾನ

| Published : Sep 23 2024, 01:29 AM IST

ಸಾರಾಂಶ

ರಾಜ್ಯ ಮಟ್ಟದ 45ನೇ ಜಾನಪದ ಕಲಾ ಮೇಳದಲ್ಲಿ ಸೆ.24ರ ಮಂಗಳವಾರ ಬೆಳಗ್ಗೆ 9.30ಕ್ಕೆ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಚುಂಚಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಆದಿಚುಂಚನಗಿರಿ ಮಹಾ ಸಂಸ್ಥಾನಮಠದಲ್ಲಿ ಸೋಮವಾರ ಸಂಜೆಯಿಂದ ಮೇಳೈಸುವ ಜಾನಪದ ಕಲರವದಲ್ಲಿ ನಾಡಿನ ವಿವಿಧ ಭಾಗಗಳಿಂದ ಆಗಮಿಸಿರುವ ಸಹಸ್ರಾರು ಸಂಖ್ಯೆಯ ಜಾನಪದ ಕಲಾವಿದರು ತಾವು ಕಲಿತಿರುವ ಗ್ರಾಮೀಣ ಸೊಗಡಿನ ಕಲೆಯನ್ನು ಪ್ರದರ್ಶಿಸಲಿದ್ದಾರೆ.

ರಾಜ್ಯ ಮಟ್ಟದ 45ನೇ ಜಾನಪದ ಕಲಾ ಮೇಳದಲ್ಲಿ ಸೆ.24ರ ಮಂಗಳವಾರ ಬೆಳಗ್ಗೆ 9.30ಕ್ಕೆ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಚುಂಚಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ನ್ಯಾಯಾಂಗ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ನಾಗಮಂಗಲ ತಾಲೂಕಿನ ಕಂಚನಹಳ್ಳಿ ನಂಜೇಗೌಡ ಮತ್ತು ಪುಟ್ಟಲಕ್ಷ್ಮಮ್ಮ ದಂಪತಿ ಪುತ್ರ ಕೆ.ಎನ್.ಪುಟ್ಟೇಗೌಡ, ಸಮಾಜ ಸೇವಾ ಕ್ಷೇತ್ರದಿಂದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕೊಳವಾರ ಗ್ರಾಮದ ಅಪ್ಪಣ್ಣ ಹೆಗಡೆ ಮತ್ತು ಕೆ.ಟಿ.ನಾಗಮ್ಮ ದಂಪತಿಯ ಪುತ್ರ ಹಿರಿಯಣ್ಣ ಹೆಗಡೆ, ಜಾನಪದ ಕ್ಷೇತ್ರದಿಂದ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಬಸಪ್ಪ ಮತ್ತು ಬಸವ್ವ ದಂಪತಿಯ ಪುತ್ರಿ ಮಲ್ಲವ್ವ ಬಸಪ್ಪ ಮೆಗೇರಿ, ಸಾಹಿತ್ಯ ಮತ್ತು ಜಾನಪದ ಕ್ಷೇತ್ರದಿಂದ ಮದ್ದೂರು ತಾಲೂಕಿನ ಹಿರೇಗೌಡನದೊಡ್ಡಿ ಗ್ರಾಮದ ರಾಮೇಗೌಡ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಎಚ್.ಡಿ.ಕೋಟೆ ತಾಲೂಕಿನ ಕೊತ್ತಲಗಾಲ ಗ್ರಾಮದ ಪುಟ್ಟೇಗೌಡ ಮತ್ತು ಮಾರಾಲಮ್ಮ ದಂಪತಿ ಪುತ್ರ ಪ್ರೊ.ಕೆ.ಪಿ.ಬಸವೇಗೌಡ ಅವರಿಗೆ 50 ಸಾವಿರ ರು. ನಗದು ಸೇರಿದಂತೆ ನೆನಪಿನ ಕಾಣಿಕೆ ಪ್ರಶಸ್ತಿ ಫಲಕಗಳನ್ನೊಳಗೊಂಡ ಈ ವರ್ಷದ ಚುಂಚಶ್ರೀ ಪ್ರಶಸ್ತಿ ಪ್ರದಾನ ಮಾಡಿ ಶ್ರೀಕ್ಷೇತ್ರದ ವತಿಯಿಂದ ನಿರ್ಮಲಾನಂದನಾಥಶ್ರೀಗಳು ಗೌರವಿಸುವರು.

ಮುತ್ತಿನ ಪಾಲಕ್ಕಿ ಉತ್ಸವ:

ಇದೇ ದಿನ ಸಂಜೆ 7 ಗಂಟೆಗೆ ಶ್ರೀಕ್ಷೇತ್ರದ ಜೋಡಿ ರಸ್ತೆಯಲ್ಲಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥಶ್ರೀಗಳ ಸರ್ವಾಲಂಕೃತ ಮುತ್ತಿನ ಪಾಲಕ್ಕಿ ಉತ್ಸವ ಹಾಗೂ ಜಾನಪದ ಕಲಾವಿದರ ವರ್ಣರಂಜಿತ ಮೆರವಣಿಗೆ ನಡೆಯಲಿದ್ದು ನಂತರ ಶ್ರೀ ಕಾಲಭೈರವೇಶ್ವರಸ್ವಾಮಿ ಪುಷ್ಕರಣೆಯಲ್ಲಿ ತೆಪ್ಪೋತ್ಸವ ಜರುಗಲಿದೆ.