ಧಾರವಾಡ:ಮಳೆಯ ಯಾವ ನಿರೀಕ್ಷೆ ಹಾಗೂ ಮುನ್ಸೂಚನೆ ಇಲ್ಲದೇ ಹೋಳಿ ಹಬ್ಬದ ನಂತರ ಕಾಮಣ್ಣನ ಕಣ್ಣೀರು ಎನ್ನುವಂತೆ ಶನಿವಾರ ನಗರದಲ್ಲಿ ಧಾರಾಕಾರ ಮಳೆ ಸುರಿಯಿತು.
ಎಂದಿನಂತೆ ಶನಿವಾರ ಸಹ ಸಂಜೆ ವರೆಗೂ ಬಿಸಿಲಿನ ವಾತಾವರಣವಿದ್ದು, ಸಂಜೆ 6ರ ಸುಮಾರಿಗೆ ಏಕಾಏಕಿ ಮೋಡ ಕವಿದು ಗುಡುಗು-ಮಿಂಚು ಹಾಗೂ ಆಲಿಕಲ್ಲು ಸಹಿತ ಮಳೆ ಸುರಿಯಿತು. ಬಿರು ಬಿಸಿಲನಿಂದ ಕಾದು ಹಂಚಿನಂತಾಗಿದ್ದ ಭೂವಿಗೆ ತಂಪಿನ ಮಳೆ ಸುರಿಯಿತು. ಬೇಸಿಗೆ ಬಿಸಿಯಿಂದ ಬೇಸತ್ತ ಜನರಿಗೂ ತಂಪಾದ ಹವಾಮಾನ ಮುದ ತರಿಸಿತು. ಆದರೆ, ಏಕಾಏಕಿ ಜೋರಾಗಿ ಸುರಿದ ಮಳೆಯಿಂದ ಗಟಾರು ತುಂಬಿ ರಸ್ತೆಗಳೆಲ್ಲಾ ನೀರು. ಮುನ್ಸೂಚನೆ ಇಲ್ಲದ ಬಂದ ಕಾರಣ ಜನರು ಮಳೆಗೆ ತೋಯಿಸಿಕೊಳ್ಳಬೇಕಾಯಿತು.ಅದರಲ್ಲೂ ಶನಿವಾರ ಕರ್ನಾಟಕ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಜಂಗೀ ನಿಕಾಲಿ ಕುಸ್ತಿ ಪಂದ್ಯಾವಳಿಗೆ ಮಳೆರಾಯ ಅಡ್ಡಿ ಮಾಡಿದನು. ಇನ್ನೇನು ಕುಸ್ತಿ ಪಂದ್ಯಾವಳಿಗೆ ಚಾಲನೆ ದೊರೆತು ಕೊನೆಯ ಗಣ್ಯರು ಮಾತನಾಡುವ ವೇಳೆ ಸುರಿದ ಮಳೆಯಿಂದ ಮುಂದೆ ನಡೆಯಬೇಕಿದ್ದ ಪಂದ್ಯಗಳು ಅನಿವಾರ್ಯವಾಗಿ ರದ್ದಾದವು. ಬರೀ ತೂಕದ ಪಂದ್ಯಕ್ಕೆ ಸೀಮಿತವಾಗಿ ಜಂಗೀ ನಿಕಾಲಿ ಕುಸ್ತಿ ಮಳೆಯಿಂದ ರದ್ದು ಮಾಡಬೇಕಾಯಿತು.