ಸವಣೂರು: ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 76 ವರ್ಷಗಳು ಗತಿಸಿದರೂ ಕೂಡಾ ಶಿಕ್ಷಣ ಕ್ಷೇತ್ರದಲ್ಲಿ ಕೇವಲ ಶೇ. 86ರಷ್ಟು ಮಾತ್ರ ವಿದ್ಯಾವಂತರಿದ್ದಾರೆ. ಇನ್ನುಳಿದ ಶೇ. 14ರಷ್ಟು ಇರುವ ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕು ಎನ್ನುವ ಉದ್ದೇಶದಿಂದ ಶಾಲೆಗಳಲ್ಲಿ ಬಿಸಿಯೂಟದ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಹೇಳಿದರು.ಪಟ್ಟಣದ ಡಾ. ವಿ.ಕೃ. ಗೋಕಾಕ ಸಾಂಸ್ಕೃತಿಕ ಭವನದಲ್ಲಿ ಶನಿವಾರ ಜರುಗಿದ 2025-26ನೇ ಸಾಲಿನ ಅಕ್ಷರ ದಾಸೋಹ ಕಾರ್ಯಕ್ರಮದಡಿ ಕಾರ್ಯ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಗ್ಗಾಂವಿ-ಸವಣೂರ ವಿಧಾನಸಭಾ ಕ್ಷೇತ್ರದಲ್ಲಿ ಶಿಕ್ಷಣದ ಕ್ರಾಂತಿಯನ್ನು ಮಾಡಬೇಕು ಎನ್ನುವ ಉದ್ದೇಶದಿಂದ ಶಾಸಕನಾದ ನಂತರ ಕ್ಷೇತ್ರಕ್ಕೆ 13 ಕೆಪಿಎಸ್ ಶಾಲೆಗಳನ್ನು ತೆಗೆದುಕೊಂಡು ಬಂದು ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಕಾಂಗ್ರೇಸ್ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ ರಾಜ್ಯದ ಮಹಿಳೆಯರಿಗೆ 60 ಸಾವಿರ ಕೋಟಿ ನಮ್ಮ ಕ್ಷೇತ್ರಕ್ಕೆ 7 ನೂರು ಕೋಟಿ ಹಣವನ್ನು ನೀಡಿ ಮಹಿಳೆಯರಿಗೆ ಶಕ್ತಿ ತುಂಬುವಂತ ಕೆಲಸವನ್ನು ಮಾಡಿದ್ದೇವೆ. ಅದರಂತೆ, ಬಿಸಿಯೂಟ ತಯಾರಿಸುವ ಸಿಬ್ಬಂದಿಗಳಿಗೆ ಸರ್ಕಾರ ಬಂದ ನಂತರ ಒಂದು ಸಾವಿರ ಹೆಚ್ಚಳ ಮಾಡಿ ಸಹಕಾರವನ್ನು ನೀಡಲಾಗಿದೆ. ಇಷ್ಟಾದರೆ ಸಾಲದು, ತಿಂಗಳ ಪ್ರೋತ್ಸಾಹ ಧನ 10 ಸಾವಿರ ಆದಾಗ ಜೀವನ ನಿರ್ವಹಣೆ ಸಾಧ್ಯವಾಗುತ್ತದೆ. ಅದಕ್ಕೆ, ಕೇಂದ್ರಕ್ಕೆ ರಾಜ್ಯದಿಂದ ಯಾವುದೇ ಸಹಾಯ ಸಹಕಾರ ಸಿಗುತ್ತಿಲ್ಲ. ರಾಜ್ಯದಿಂದ ಕೇಂದ್ರಕ್ಕೆ 5 ಲಕ್ಷಕೋಟಿ ತೆರಿಗೆ ಹಣ ಹೋಗುತ್ತಿದೆ. ಆದರೆ, ಮರಳಿ 20 ಸಾವಿರ ಕೋಟಿ ತೆರಿಗೆ ಹಣ ನೀಡುತ್ತಿದ್ದಾರೆ. ಕೇಂದ್ರದಿಂದ ಬರುವ 4 ಲಕ್ಷ 80ಸಾವಿರ ಕೋಟಿ ಹಣವನ್ನು ಇಟ್ಟುಕೊಳ್ಳತ್ತಾರೆ. ಕೇಂದ್ರದಿಂದ ಹೆಚ್ಚಿನ ಅನುದಾನವನ್ನು ನೀಡಿದರೆ ಹೆಚ್ಚಿನ ಅಭಿವೃದ್ಧಿಯ ಜೊತೆಗೆ ವೇತನ ಪರಿಷ್ಕರಣೆ ಸಹಿತ ಮಾಡಲು ಸಾಧ್ಯವಾಗಲಿದೆ. ಸದ್ಯದಲ್ಲಿಯೆ ಕೇಂದ್ರದ ಮಂತ್ರಿಗಳಾದ ಪ್ರಹ್ಲಾದ ಜೋಶಿ ಅವರನ್ನು ಭೇಟಿ ಮಾಡಿ ಕೇಂದ್ರದಿಂದ ಹೆಚ್ಚಿನ ಹಣವನ್ನು ನೀಡಬೇಕು ಎಂದು ಒತ್ತಾಯಿಸಲಾಗುವುದು. ಸರ್ಕಾರಕ್ಕೆ ಯಾವುದೇ ತೊಂದರೆ ಬಂದರೂ ಕೂಡಾ ಮಕ್ಕಳಿಗೆ ನೀಡುವ ಪೂರಕ ಪೌಷ್ಟಿಕ ಆಹಾರ ಮತ್ತು ಅಡುಗೆ ತಯಾರಕರ ಗೌರವ ಧನವನ್ನು ನೀಡಲಾಗುತ್ತಿದೆ. ಶಾಲೆಯಲ್ಲಿ ಮಕ್ಕಳಿಗೆ ನೀಡುವ ಆಹಾರವನ್ನು ಗುಣಮಟ್ಟದಲ್ಲಿ ತಯಾರಿಸಿ ಉಣಬಡಿಸಬೇಕು. ಕಳಪೆ ಆಹಾರವನ್ನು ತಯಾರಿಸುವಂತ ಸಿಬ್ಬಂದಿಗಳು ದೇವರಿಗೆ ಮೋಸ ಎಸಗಿದಂತೆ. ಇದನ್ನು ಮನದಲ್ಲಿಟ್ಟುಕೊಂಡು ಪೌಷ್ಟಿಕ ಆಹಾರವನ್ನು ತಯಾರಿಸಬೇಕು ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಇಓ ಎಂ.ಎಫ್. ಬಾರ್ಕಿ ವಹಿಸಿದ್ದರು. ಪ್ರಾಸ್ತಾವಿಕವಾಗಿ ಅಕ್ಷರದಾಸೋಹ ಅಧಿಕಾರಿ ಟಿ.ಎಲ್.ಮಳವಳ್ಳಿ ಮಾತನಾಡಿದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ರವಿಕುಮಾರ ಕೊರವರ, ಪುರಸಭೆ ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ, ಅಕ್ಷರದಾಸೋಹ ರಾಜ್ಯ ಘಟಕದ ಕಾರ್ಯದರ್ಶಿ ಲಲಿತಾ ಬುಶೆಟ್ಟಿ, ಕೆಡಿಪಿ ಸದಸ್ಯ ರವಿ ಕರಿಗಾರ, ಸುರೇಶ ಹಾವನೂರ, ರಾಘವೇಂದ್ರ ಬಾಲೆಹೊಸೂರ, ಮೌಲಾಸಾಬ ಹೊಂಬರಡಿ, ಸುರೇಶ ಗಾಣಿಗೇರ ಸೇರಿದಂತೆ ಅಡುಗೆ ಸಿಬ್ಬಂದಿಗಳು ಇದ್ದರು.
ಶಿಗ್ಗಾಂವಿ ಕ್ಷೇತ್ರದಲ್ಲಿ ಶಿಕ್ಷಣದ ಕ್ರಾಂತಿ ಮಾಡಬೇಕು-ಶಾಸಕ ಪಠಾಣ
ಭಾರತ ದೇಶಕ್ಕೆ ಸ್ವಾತಂತ್ರ್ಯr ಸಿಕ್ಕು 76 ವರ್ಷಗಳು ಗತಿಸಿದರೂ ಕೂಡಾ ಶಿಕ್ಷಣ ಕ್ಷೇತ್ರದಲ್ಲಿ ಕೇವಲ ಶೇ. 86ರಷ್ಟು ಮಾತ್ರ ವಿದ್ಯಾವಂತರಿದ್ದಾರೆ. ಇನ್ನುಳಿದ ಶೇ. 14ರಷ್ಟು ಇರುವ ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕು ಎನ್ನುವ ಉದ್ದೇಶದಿಂದ ಶಾಲೆಗಳಲ್ಲಿ ಬಿಸಿಯೂಟದ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.