ಸ್ಥಳೀಯ ಸಂಶೋಧನೆಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು ಕೀರ್ತಿ ತಂದ ಯುವಶಕ್ತಿಗಳೇ ನಮ್ಮ ದಕ್ಷಿಣ ಕನ್ನಡದ ‘ಬೊಲ್ಪು’ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹರ್ಷ ವ್ಯಕ್ತಪಡಿಸಿದ್ದಾರೆ.
ಮಂಗಳೂರು: ಸ್ಥಳೀಯ ಸಂಶೋಧನೆಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು ಕೀರ್ತಿ ತಂದ ಯುವಶಕ್ತಿಗಳೇ ನಮ್ಮ ದಕ್ಷಿಣ ಕನ್ನಡದ ‘ಬೊಲ್ಪು’ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹರ್ಷ ವ್ಯಕ್ತಪಡಿಸಿದ್ದಾರೆ.
ನೀತಿ ಆಯೋಗದ ‘ಅಟಲ್ ಇನ್ನೋವೇಶನ್ ಮಿಷನ್ ’ (ಎಐಎಂ) ಅಡಿಯಲ್ಲಿ ‘ಗ್ರಾಸ್ರೂಟ್ ಇನ್ನೋವೇಟರ್ ರೆಕಗ್ನಿಷನ್ 2026’ ಗೌರವಕ್ಕೆ ಭಾಜನರಾದ ಅಕ್ಷಯ್ ಮಾಶೇಲ್ಕರ್ (ಎಕ್ಸ್‌ಪರಿಮೈಂಡ್ ಲ್ಯಾಬ್ಸ್ ಪ್ರೈ. ಲಿ.), ಅನುಷಾ ಪ್ರಜ್ವಲ್ (ಮಾವೇದಾಸ್ ಫುಡ್ಸ್ ಆ್ಯಂಡ್ ಸಿರಿಯಲ್ಸ್ ಪ್ರೈ. ಲಿ.) ಹಾಗೂ ರತ್ನಾಕರ ನಾಯಕ್ (ಡಬ್ಲ್ಯೂ.ಡಬ್ಲ್ಯೂ.ಆರ್. ಇನ್ನೋವೇಶನ್ಸ್ ಪ್ರೈ. ಲಿ.) ಮೊದಲಾದವರನ್ನು ಅವರು ನವದೆಹಲಿಯ ತಮ್ಮ ನಿವಾಸದಲ್ಲಿ ಶನಿವಾರ ಅಭಿನಂದಿಸಿ ಮಾತನಾಡಿದರು.ದೇಶಾದ್ಯಂತ ಆಯ್ಕೆಯಾದ 26 ನವೋದ್ಯಮಿಗಳ ಪೈಕಿ ದಕ್ಷಿಣ ಕನ್ನಡಕ್ಕೆ ರಾಷ್ಟ್ರ ಮಟ್ಟದಲ್ಲಿ ಕೀರ್ತಿ ತಂದ ಮೂವರು ಸ್ಟಾರ್ಟ್ಅಪ್‌ಗಳ ಸಂಸ್ಥಾಪಕರ ಸಾಧನೆ ಸಂಸದರು ಶ್ಲಾಘಿಸಿದರು.ಸ್ಥಳೀಯ ಸಂಶೋಧನೆಗಳು ಮತ್ತು ಸ್ವಾವಲಂಬನೆಯು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ವಿಕಸಿತ ಭಾರತ 2047 ಗುರಿಯನ್ನು ತಲುಪಲು ಅಡಿಪಾಯವಾಗಿದೆ. ತಂತ್ರಜ್ಞಾನ, ಕೃಷಿ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಸ್ಥಳೀಯ ಆವಿಷ್ಕಾರಗಳು ದೇಶವನ್ನು ಆರ್ಥಿಕವಾಗಿ ಬಲಪಡಿಸುತ್ತಿವೆ. ನಮ್ಮ ದಕ್ಷಿಣ ಕನ್ನಡದ ಯುವ ಉದ್ಯಮಿಗಳು ಹಾಗೂ ಆವಿಷ್ಕಾರಕರು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯ. ಸ್ಥಳೀಯ ಸವಾಲುಗಳಿಗೆ ಜಾಗತಿಕ ಮಟ್ಟದ ಪರಿಹಾರ ಕಂಡುಕೊಳ್ಳುವ ನಮ್ಮ ಕರಾವಳಿಯ ಪ್ರತಿಭೆಗಳಿಗೆ ಬೇಕಾದ ಅಗತ್ಯ ಪ್ರೋತ್ಸಾಹ ನೀಡಲು ಬದ್ಧ ಎಂದು ಕ್ಯಾ. ಬ್ರಿಜೇಶ್ ಚೌಟ ಭರವಸೆ ನೀಡಿದರು.