ಚನ್ನಪಟ್ಟಣ: ಅಮೃತ್ ಯೋಜನೆ ಕಾಮಗಾರಿಯಲ್ಲಿ ವಿಳಂಬ, ರಸ್ತೆ ಅವ್ಯವಸ್ಥೆ, ಬೀದಿ ದೀಪಗಳ ಅಸಮರ್ಪಕ ನಿರ್ವಹಣೆ, ಕುಡಿವ ನೀರು ನಿರ್ವಹಣೆ ಲೋಪದೋಷ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ನಗರಸಭೆ ಸಾಮಾನ್ಯ ಸಭೆಯಲ್ಲಿ ಪಕ್ಷಭೇದ ಮರೆತು ಎಲ್ಲ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ನಗರಸಭೆ ಸಭಾಂಗಣದಲ್ಲಿ ಬಿ.ಎಂ.ನಾಗೇಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ನಡೆದ ಚರ್ಚೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿ ಕುರಿತು ಹಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ, ಸದಸ್ಯರ ಮಾತಿಗೆ, ಸಭೆಯ ನಿರ್ಣಯಕ್ಕೆ ಗೌರವ ಮನ್ನಣೆ ಇಲ್ಲದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಸದಸ್ಯರಾದ ಮಂಜುನಾಥ್, ಶ್ರೀನಿವಾಸ ಮೂರ್ತಿ, ರೇವಣ್ಣ, ಲಿಯಾಕತ್ ಆಲಿ ಖಾನ್, ವಾಸಿಲ್ ಆಲಿ ಖಾನ್ ಇತರರು ಒತ್ತಾಯಿಸಿದರು.

ನಗರಸಭೆ ಅಧ್ಯಕ್ಷ ನಾಗೇಶ್ ಮಾತನಾಡಿ, ಅಧಿಕಾರಿಗಳು ಸದಸ್ಯರ ಮಾತನ್ನು ಉಡಾಫೆ ಮಾಡಬಾರದು. ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು. ಸದಸ್ಯರು ಮತ್ತು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸದಿದ್ದರೆ ಕಚೇರಿಗೆ ಏಕೆ ಬರಬೇಕು ಎಂದು ಕಿಡಿಕಾರಿ, ಮೇಲಧಿಕಾರಿಗಳಿಗೆ ಕಾನೂನು ಕ್ರಮ ಕೈಗೊಳ್ಳುವಂತೆ ವರದಿ ಸಲ್ಲಿಸುವಂತೆ ಪೌರಾಯುಕ್ತ ಮಹೇಂದ್ರಗೆ ಸೂಚಿಸಿದರು.

ಬೀದಿ ದೀಪಗಳ ನಿರ್ವಹಣೆ ಟೆಂಡರ್ ಪಡೆದಿರು ವ್ಯಕ್ತಿಯನ್ನು ಸಭೆಗೆ ಕರೆಸುವಂತೆ ಹೇಳುತ್ತಿದ್ದರೂ ಇಂಜಿಯರ್ ನಿರ್ಲಕ್ಷಿಸುತ್ತಿದ್ದು, ಅವರ ಬಿಲ್ ಕೊಡದೆ ತಡೆ ಹಿಡಿಯಬೇಕು ಎಂದು ಸದಸ್ಯರು ಒತ್ತಾಯಿಸಿದರು.

ನಗರ ಪ್ರದೇಶದಲ್ಲಿ ಅಮೃತ್ ಯೋಜನೆ ಅಸಮರ್ಪಕ ನಿರ್ವಹಣೆಯಿಂದ ರಸ್ತೆಗಳು ಗುಂಡಿಮಯವಾಗಿದ್ದು, ಕಾಮಗಾರಿ ವಿಳಂಬ ಮತ್ತು ಅವ್ಯವಸ್ಥೆಯಿಂದ ಕೂಡಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಗುತ್ತಿಗೆದಾರರನ್ನು ಸಭೆಗೆ ಕರೆಸಿ ಎಂದರೆ ಕರೆಸುತ್ತಿಲ್ಲ. ಅವರು ಸಭೆಗೆ ಬರುವುದಿಲ್ಲ ಎಂದ ಮೇಲೆ ಕೆಲಸ ನಿಲ್ಲಿಸಿಬಿಡಿ ಎಂದು ಆಗ್ರಹಿಸಿದರು. ಇದನ್ನು ಬೆಂಬಲಿಸಿದ ಅಧ್ಯಕ್ಷರು, ಸದರಿ ಗುತ್ತಿಗೆದಾರ ಬರುವವರೆಗೆ ಎಲ್ಲಾ ಕೆಲಸ ನಿಲ್ಲಿಸಿ, ಯಾವುದೇ ಬಿಲ್ ಮಾಡಬಾರದು ಎಂದು ಎಇಇಗೆ ಸೂಚನೆ ನೀಡಿದರು.


ನಗರದಲಿ ಹತ್ತಾರು ಕೊಳವೆ ಬಾವಿಗಳು ಕೆಟ್ಟು ನಿಂತಿದೆ. ಕೆಲವು ಮೋಟಾರ್‌ಗಳನ್ನು ರಿಪೇರಿಗೆ ತೆಗೆದುಕೊಂಡು ಹೋಗಿದ್ದು ಈವರೆಗೆ ತಂದು ಆಳವಡಿಸಿಲ್ಲ. ಇದರಿಂದ ನೀರಿನ ಸಮಸ್ಯೆ ಉಲ್ಬಣವಾಗಿದೆ. ವಾರ್ಡ್ ಸದಸ್ಯರಿಗೆ ನಾವು ಉತ್ತರ ನೀಡಲು ಆಗುತ್ತಿಲ್ಲ. ತಕ್ಷಣ ನೀರಿನ ಸಮಸ್ಯೆ ತಪ್ಪಿಸಲು ಕ್ರಮ ಕೈಗೊಳ್ಳುವಂತೆ ಸದಸ್ಯರು ಆಗ್ರಹಿಸಿದರು.

ಸ್ಲಂ ಬೋರ್ಡ್‌ನಿಂದ ಎಷ್ಟು ಕಡೆ ಸ್ಲಂ ಎಂದು ಗುರುತಿಸಿ, ಎಷ್ಟು ಮನೆಗಳನ್ನು ಕಟ್ಟಿ ಫಲಾನುಭವಿಗಳಿಗೆ ನೀಡಿದ್ದೀರಿ. ಪ್ರಗತಿಯಲ್ಲಿರುವ ಮನೆಗಳೆಷ್ಟು, ಮನೆಗಳನ್ನು ಕಟ್ಟಿಕೊಡಬೇಕಾದರೆ ಇರುವ ನಿಯಮಗಳೇನು ಎಂಬುದನ್ನು ಸಭೆಯ ಗಮನಕ್ಕೆ ತರಬೇಕು ಎಂದು ಪೌರಾಯುಕ್ತ ಮಹೇಂದ್ರ ಸ್ಲಂ ಬೋರ್ಡ್ ಅಧಿಕಾರಿಗೆ ತಿಳಿಸಿದರು.

ಸ್ಲಂ ಬೋರ್ಡ್ ಅಧಿಕಾರಿ ಕೊಡಲು ಮುಂದಾಗುತ್ತಿದ್ದಂತೆಯೇ ಸದಸ್ಯರು ಅವರ ವಿರುದ್ಧ ತಿರುಗಿಬಿದ್ದು, ಸದಸ್ಯರ ಗಮನಕ್ಕೆ ಬಾರದೆ, ಮಧ್ಯವರ್ತಿಗಳು, ಏಜೆಂಜ್‌ಗಳ ಮೂಲಕ ಸ್ಲಂ ಬೋರ್ಡ್ ವ್ಯಾಪ್ತಿ ಬಿಟ್ಟು ಅನ್ಯ ವಾರ್ಡ್‌ಗಳಲ್ಲಿ ಅನುದಾನವನ್ನು ಬಿಡುಗಡೆ ಮಾಡಿ ದುರುಪಯೋಗ ಪಡಿಸಿಕೊಂಡಿದ್ದಾರೆ. ಸಂಬಂಧಿಸಿದ ಅಧಿಕಾರಿಯನ್ನು ಕರೆಸಿ ಎಂದು ಸದಸ್ಯರು ಒತ್ತಾಯಿಸಿದರು. ಮುಂದಿನ ಸಭೆಗೆ ಕರೆಸಿ ಸಮಗ್ರ ಮಾಹಿತಿ ನೀಡಿ ಅವ್ಯವಹಾರ ಕಂಡು ಬಂದರೆ ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಅಧ್ಯಕ್ಷರು ಹಾಗೂ ಪೌರಾಯುಕ್ತರು ಸಭೆಗೆ ತಿಳಿಸಿದರು.

ನಗರದಲ್ಲಿ ಕೋಳಿ ತ್ಯಾಜ್ಯ ವಿಲೇವಾರಿ ನಿರ್ವಹಣೆ ಸರಿ ಇಲ್ಲವಾಗಿದ್ದು ಅಂಗಡಿಯವರು, ಕಾಲುವೆ, ರಸ್ತೆ, ಸಾರ್ವಜನಿಕರು ಓಡಾಡುವ ರಸ್ತೆ ಬದಿಯಲ್ಲಿ ಎಸೆದು ಹೋಗುತ್ತಿದ್ದು, ಪರಿಸರ ಹಾಳಾಗುತ್ತಿದೆ. ಸಾರ್ವಜನಿಕರು, ವಾಹನ ಸವಾರರು ದುರ್ವಾಸನೆ ತಾಳಲಾರದೇ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಈ ಸಂಬಂಧ ಬಿಗಿಯಾದ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.

ಸಭೆಯಲ್ಲಿ ನಗರಸಭಾ ಉಪಾಧ್ಯಕ್ಷ ಲೋಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಮಾಲ ಇತರರಿದ್ದರು.

ಪೊಟೋ೫ಸಿಪಿಟಿ೧: ಚನ್ನಪಟ್ಟಣ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ನಾಗೇಶ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಉಪಾಧ್ಯಕ್ಷ ಲೋಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಮಾಲ ಇತರರಿದ್ದರು.