ಕನ್ನಡಪ್ರಭ ವಾರ್ತೆ ಹಿರಿಯೂರು
ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇದ್ದು ಅಧಿಕಾರಿಗಳು ಬರದ ತೊಂದರೆಯ ಖಚಿತ ಮಾಹಿತಿ ಒದಗಿಸಬೇಕು. ಇದು ನಾಮಕಾವಸ್ಥೆ ಪ್ರಕೃತಿ ವಿಕೋಪ ನಿರ್ವಹಣೆ ಸಭೆ ಆಗಬಾರದು. ಜನರ ನಿರೀಕ್ಷೆ ಹೆಚ್ಚಿದ್ದು ಅವರಿಗೆ ಸಿಗಬೇಕಾದ ಸೌಲಭ್ಯ ದೊರಕಿಸಿಕೊಡಲು ಪ್ರಾಮಾಣಿಕವಾಗಿ ಅಧಿಕಾರಿಗಳು ಕೆಲಸ ಮಾಡಬೇಕು ಇಲ್ಲವೇ ನಿಮ್ಮ ದಾರಿ ನೀವು ನೋಡಿಕೊಂಡು ಹೊರಟುಬಿಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.ಪಟ್ಟಣದ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಕೃತಿ ವಿಕೋಪ ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿರಿಯೂರು ತಾಲೂಕಿನಲ್ಲಿ ಜಲಾಶಯ ಇದ್ದರೂ ಸಹ ತಾಲೂಕಲ್ಲಿ ನೀರಿನ ತೊಂದರೆ ಇದೆ. ಕುಡಿಯುವ ನೀರಿನ ತೊಂದರೆಗಳ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಜೆಜಿ ಹಳ್ಳಿ ಭಾಗದ ಕೆ.ಎಚ್.ಆರ್ ನಗರದಲ್ಲಿ ಕುಡಿಯುವ ನೀರಿನ ತೊಂದರೆ ಇದೆ ಎಂದು ಜನರು ಮತ್ತು ಪಿಡಿಒ ಹೇಳುತ್ತಿದ್ದಾರೆ. ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.ಸಚಿವರ ಮಾತಿಗೆ ಉತ್ತರಿಸಿದ ಎಇಇ ಹಸೇನ್ ಬಾಷ ಕಳೆದ ಹದಿನೈದು ದಿನಗಳಿಂದ ಅಲ್ಲಿ ನೀರಿನ ತೊಂದರೆ ಕಾಣಿಸಿಕೊಂಡಿದೆ. ಈಗಾಗಲೇ ತಾಲೂಕಿನ ಅಲ್ಲಲ್ಲಿ 9 ಟ್ಯಾoಕರ್‌ಗಳಲ್ಲಿ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ದಿಂಡಾವರ, ಯಲ್ಲದಕೆರೆ, ಕರಿಯಾಲ ಭಾಗದಲ್ಲಿ ಕುಡಿಯುವ ನೀರಿನ ತೊಂದರೆ ಇದೆ. ಶೀಘ್ರದಲ್ಲೇ 75 ಹಳ್ಳಿಗೆ ಮಲ್ಟಿ ವಿಲೇಜ್ ಸ್ಕೀಮ್ ನಡಿ ನೀರು ಒದಗಿಸುತ್ತೇವೆ. ಕಾಮಗಾರಿ ಪ್ರತಿಶತ ಮುಗಿದಿದೆ. ತಾಲೂಕಲ್ಲಿ 236 ಆರ್.ಓ ಪ್ಲಾoಟ್ ಗಳಿವೆ. ಅದರಲ್ಲಿ 222 ಕೆಲಸ ನಿರ್ವಹಿಸುತ್ತಿವೆ.10 ದುರಸ್ಥಿಗೆ ಬಂದಿದ್ದು 4 ಉಪಯೋಗಕ್ಕೆ ಬರದಂತಾಗಿವೆ ಎಂದು ತಿಳಿಸಿದರು.
ಅಧಿಕಾರಿಗಳ ಉತ್ತರಕ್ಕೆ ಪ್ರತಿಕ್ರಿಯಿಸಿದ ಸಚಿವರು, ನೀರು ಕೊಡುವ ವಿಚಾರದಲ್ಲಿ ತಡ ಮಾಡಬೇಡಿ. 10 ಲಕ್ಷ ರು. ಅನುದಾನ ಪಡೆದು ಅಲ್ಲಿಗೆ ನೀರು ಕೊಡಿ. 75 ಹಳ್ಳಿಗಳಿಗೆ ಕುಡಿಯುವ ನೀರನ್ನು ಶೀಘ್ರದಲ್ಲೇ ಕೊಡುತ್ತೇವೆ ಎಂಬ ಉತ್ತರ ಬೇಡ. ಆಗಸ್ಟ್ ತಿಂಗಳೊಳಗೆ ಅಷ್ಟು ಹಳ್ಳಿಗಳ ಕುಡಿಯುವ ನೀರಿಗೆ ಚಾಲನೆ ಸಿಗಬೇಕು. ನಗರ ಭಾಗದಲ್ಲೂ ಅಷ್ಟೇ. ಕುಡಿಯುವ ನೀರು, ರಸ್ತೆ, ಚರಂಡಿ ಬಗ್ಗೆ ದೂರುಗಳು ಬರಬಾರದು. ರಸ್ತೆ ವಿಸ್ತರಣೆಯ ತಕರಾರುಗಳನ್ನು ಬಗೆಹರಿಸಿ ರಸ್ತೆ ವಿಸ್ತರಣೆಗೆ ಕ್ರಮ ಕೈಗೊಳ್ಳಬೇಕು ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ ಮಾಹಿತಿ ನೀಡಿ, ತಾಲೂಕಲ್ಲಿ 126.9 ಮಿಮೀ ಮಳೆ ಆಗಿದೆ.
ಶೇ.45ರಷ್ಟು ಮಳೆ ಕೊರತೆಯಾಗಿದೆ. ಮುಂಗಾರು ಜೂನ್ ನಿಂದ ಸೆಪ್ಟೆಂಬರ್ ವರೆಗೆ ಇದ್ದು ಶೇ.45ರಷ್ಟು ಮುಂಗಾರು ಮಳೆ ಕೊರತೆ ಆಗಿದೆ.ಬಿತ್ತನೆ ಗುರಿ 40510 ಹೆಕ್ಟರ್ ಇದ್ದು 4382 ಹೆಕ್ಟರ್ ಬಿತ್ತನೆಯಾಗಿದೆ.ಶೇ 10.5 ರಷ್ಟು ಮಾತ್ರ ಬಿತ್ತನೆಯಾಗಿದೆ.ಶೇಂಗಾ ಗುರಿ 8620 ಹೆಕ್ಟರ್ ಬಿತ್ತನೆ ಗುರಿ ಇದ್ದು 837 ಹೆಕ್ಟರ್ ಬಿತ್ತನೆಯಾಗಿದೆ. ಸೂರ್ಯಕಾoತಿ 954 ಹೆಕ್ಟರ್ ಬಿತ್ತನೆ ಆಗಿದೆ. ತೊಗರಿ 4450 ಹೆಕ್ಟರ್ ಬಿತ್ತನೆ ಗುರಿ ಇದ್ದು 329 ಹೆಕ್ಟರ್ ಬಿತ್ತನೆ ಆಗಿದೆ.ಬೆಳೆ ವಿಮೆ ನೋಂದಣಿಗೆ ಗ್ರಾಮ ಮಟ್ಟದಲ್ಲಿ ಪ್ರಚಾರ ನಡೆಸಿದ್ದೇವೆ ಎಂದರು.
ಸಚಿವರು ಮಾತನಾಡಿ ರಾಜ್ಯದಲ್ಲಿ ಭೀಕರ ಬರಗಾಲ ಇದೆ.ನಮ್ಮ ಜಿಲ್ಲೆಯಲ್ಲೂ ಬರ ಇದೆ. ಮಂತ್ರಿ ಮಂಡಲ ರಚನೆ ಆದ ತಕ್ಷಣ ಸಿಎಂ ಮೀಟಿಂಗ್ ಮಾಡಿ ಬರ ಪರಿಶೀಲನೆ ನಡೆಸಲು ಹೇಳಿದ್ದಾರೆ. ಜಿಲ್ಲೆಯ ಆರೂ ತಾಲೂಕುಗಳಲ್ಲಿ ಸಭೆ ನಡೆಸಿ ವರದಿ ನೀಡಬೇಕು. ಜೆಜಿ ಹಳ್ಳಿಯಿಂದ ಪರಿಶೀಲನೆ ನಡೆಸಿದ್ದೇನೆ. ಕುಡಿಯುವ ನೀರಿಗೆ ತೊಂದರೆ, ಬೆಳೆಗೆ ನೀರಿಲ್ಲದ ಪರಿಸ್ಥಿತಿ ನೋಡಿ ಬಂದಿದ್ದೇನೆ. ಬೆಳೆ ವಿಮೆ ಬರುವುದಿಲ್ಲ ಎಂದು ರೈತರ ಆರೋಪ ಮಾಡುತ್ತಿದ್ದಾರೆ. ಬರ ಇದ್ದಾಗ ರೈತರಿಗೆ ಮಾಹಿತಿ ನೀಡಬೇಕು. ವಿಮೆ ಬರುವುದಿಲ್ಲ ಎಂಬ ಭಾವನೆ ಹೋಗಲಾಡಿಸಬೇಕು. ಮೂರು ಹಂತದ ವಿಮೆಯಲ್ಲಿ ಜಾಸ್ತಿ ಸಹಾಯವಾಗುವ ವಿಮೆಯನ್ನು ರೈತರಿಗೆ ಕೊಡಿಸಬೇಕು. ರೈತರಿಗೆ ಬೆಳೆ ವಿಮೆ ಬಗ್ಗೆ ನಂಬಿಕೆ ಬರಬೇಕು. ಗಂಭೀರವಾಗಿ ಬೆಳೆ ವಿಮೆಯ ಕೆಲಸ ಮಾಡಬೇಕು. ಮಳೆ ಬರದಿದ್ದರೆ ರೈತರು ಸರ್ಕಾರದ ಕಡೆ ನೋಡುತ್ತಾರೆ. ಅವರಿಗೆ ಸಹಾಯ ಮಾಡಬೇಕು. ಎಲ್ಲಾ ಅಧಿಕಾರಿಗಳಿಗೆ ಹೇಳುವುದೇನೆಂದರೆ ಎಲ್ಲರೂ ವಾರಕ್ಕೆ, ಹದಿನೈದು ದಿನಕ್ಕೆ ತಿಂಗಳಿಗೆ ಮೀಟಿಂಗ್ ಗಳನ್ನು ನಡೆಸಲಾಗುತ್ತದೆ ಎಂದರು.ಪಶು ಸಂಗೋಪನೆ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ಸಚಿವರಿಗೆ ತಮ್ಮ ಇಲಾಖೆಯ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ವೀರೇಂದ್ರ ಪಪ್ಪಿ, ಜಿಲ್ಲಾಧಿಕಾರಿ ಟಿ ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿಟಿ ಕುಮಾರಸ್ವಾಮಿ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ, ಜಿಲ್ಲಾ ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಆಕಾಶ್, ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಶಿವಣ್ಣ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಮುಖಂಡ ಎಂ ಕೆ ತಾಜ್ ಪೀರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.