ಕ್ರಿಸ್ ಮಸ್ ಹಬ್ಬಕ್ಕೆ ಮೈಸೂರು ಸಜ್ಜು

| Published : Dec 25 2024, 12:46 AM IST

ಸಾರಾಂಶ

ಚರ್ಚ್ ಆವರಣದಲ್ಲಿ ಏಸುಕ್ರಿಸ್ತನ ಮೂರ್ತಿಗಳನ್ನು ವಿಶೇಷವಾಗಿ ಸಿಂಗರಿಸಿ,ಏಸು ಜನಿಸಿದ ಚಿತ್ರಣವನ್ನು ಕಟ್ಟಿಕೊಡಲಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರುಕ್ರಿಸ್ ಮಸ್ ಹಬ್ಬಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜುಗೊಂಡಿದ್ದು, ಸಂತ ಫಿಲೋಮಿನಾ ಚರ್ಚ್ ಸೇರಿದಂತೆ ನಗರದ ವಿವಿಧ ಚರ್ಚ್ಗಳು ದೀಪಾಲಂಕಾರ, ನಕ್ಷತ್ರಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿವೆ.ನಗರದ ಚರ್ಚ್ ಗಳನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು, ನಕ್ಷತ್ರಗಳಿಂದ ಮಿನುಗುತ್ತಿವೆ. ಕ್ರಿಸ್ ಮಸ್ ಮರಕ್ಕೆ ಬಣ್ಣ ಬಣ್ಣದ ದೀಪಾಲಂಕಾರ ಮಾಡಲಾಗಿದೆ. ಅಲ್ಲದೆ, ಚರ್ಚ್ ಆವರಣದಲ್ಲಿ ಏಸುಕ್ರಿಸ್ತನ ಮೂರ್ತಿಗಳನ್ನು ವಿಶೇಷವಾಗಿ ಸಿಂಗರಿಸಿ, ಏಸು ಜನಿಸಿದ ಚಿತ್ರಣವನ್ನು ಕಟ್ಟಿಕೊಡಲಾಗಿದೆ.ಐತಿಹಾಸಿಕ ಸಂತ ಫಿಲೋಮಿನಾ ಚರ್ಚ್, ಬೆಂಗಳೂರು- ನೀಲಗಿರಿ ರಸ್ತೆಯ ವೆಸ್ಲಿ ಚರ್ಚ್, ಸೇಂಟ್ ಬಾರ್ಥಲೋಮಿಯಸ್ ಚರ್ಚ್, ಇನ್ ಫ್ಯಾಂಟ್ ಜೀಸಸ್ ಚರ್ಚ್, ಹಾರ್ಡ್ವಿಕ್ ಚರ್ಚ್ ಗಳಲ್ಲಿ ಕ್ರಿಸ್ ಮಸ್ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.ಬೆತ್ಲೆಹೆಮ್, ಜೆರುಸಲೇಮ್ ನಗರಗಳನ್ನು ಬಿಂಬಿಸುವ ಗೋದಲಿ ನಿರ್ಮಾಣದಿಂದ ಆಕರ್ಷಿಸುತ್ತಿರುವ ಸೇಂಟ್ ಫಿಲೋಮಿನಾ ಚರ್ಚ್ ನಲ್ಲಿ ವಿಶೇಷ ತಯಾರಿ ಮಾಡಿಕೊಳ್ಳಲಾಗಿದೆ.ಮಂಗಳವಾರ ಮಧ್ಯರಾತ್ರಿಯಿಂದಲೇ ಚರ್ಚ್ ಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಲಿದ್ದು, ನಗರದ ಎಲ್ಲಾ ಚರ್ಚ್ ಗಳಲ್ಲಿಯೂ ವಿಶೇಷ ಪ್ರಾರ್ಥನೆ ನಡೆಯಲಿದೆ. ತಮ್ಮ ತಮ್ಮ ಚರ್ಚ್ ಗಳಿಗೆ ಆಗಮಿಸುವ ಜನರು ಯೇಸುವನ್ನು ಪ್ರಾರ್ಥಿಸಿ, ಪರಸ್ಪರ ಕ್ರಿಸ್ ಮಸ್ ಶುಭಾಶಯ ವಿನಿಮಯ ಮಾಡಿಕೊಂಡರು. ಬುಧವಾರ ಸಹ ಚರ್ಚ್ ಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.ಸಂತ ಫಿಲೋಮಿನಾ ಚರ್ಚ್ ನಲ್ಲಿ ವಿಶೇಷವಾಗಿ ಕ್ರಿಸ್ ಮಸ್ ಆರಚಣೆ ನಡೆಯಲಿದ್ದು, ಈಗಾಗಲೆ ಚರ್ಚ್ ಅನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ. ಚರ್ಚ್ ನ ಒಳಾವರಣವೂ ಪ್ರಾರ್ಥನೆಗೆ ವಿಶೇಷವಾಗಿ ಸಿದ್ಧವಾಗಿದ್ದು, ಸಾವಿರ ಮಂದಿ ಕೂರಲು ಅವಕಾಶವಿದ್ದು, ಹೊರಾವರಣದಲ್ಲೂ ಪ್ರಾರ್ಥನೆ ವೀಕ್ಷಣೆಗೆ ಎಲ್ಇಡಿ ಸ್ಕ್ರೀನ್ ಗಳನ್ನು ಅಳವಡಿಸಲಾಗಿದೆ. ಗೋದಲಿ ನಿರ್ಮಿಸಿ ಪೂಜೆ ಸಂತ ಫಿಲೋಮಿನಾ ಚರ್ಚ್ ನಲ್ಲಿ ಮಂಗಳವಾರ ರಾತ್ರಿ ಮೈಸೂರು ಧರ್ಮಕ್ಷೇತ್ರ ಆಡಳಿತಾಧಿಕಾರಿ ಬರ್ನಾರ್ಡ್ ಮೋರಸ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನೆರವೇರಿದವು. ಡಿ.25ರ ಬೆಳಗ್ಗೆ 5 ರಿಂದ 9 ರವರೆಗೆ ಪ್ರಮುಖ ಪ್ರಾರ್ಥನೆ ತಮಿಳು, ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ ನಡೆಯಲಿದೆ. ಬಳಿಕ ಸಾರ್ವಜನಿಕರಿಗೆ ಚರ್ಚ್ ಪ್ರವೇಶ ನೀಡಲಾಗುತ್ತದೆ. ಮತ್ತೆ ಸಂಜೆ 6ಕ್ಕೆ ಪ್ರಾರ್ಥನೆ ನಡೆಯಲಿದೆ. ಎಂದು ಚರ್ಚ್ ಫಾ. ಪೀಟರ್ ತಿಳಿಸಿದ್ದಾರೆ.----ಬಾಕ್ಸ್...ರಂಗೋಲಿಯಲ್ಲಿ ಅರಳಿದ ಏಸು ಕ್ರಿಸ್ತ

ಫೋಟೋ- 24ಎಂವೈಎಸ್6

----ಕ್ರಿಸ್ ಮಸ್ ಪ್ರಯುಕ್ತ ನಗರದ ಸಂತ ಫಿಲೋಮಿನಾ ಚರ್ಚ್ ಆವರಣದಲ್ಲಿ ರಂಗೋಲಿಯಲ್ಲಿ ಬಿಡಿಸಿರುವ ಯೇಸು ಕ್ರಿಸ್ತನ ಬೃಹತ್ ಚಿತ್ರವು ಎಲ್ಲರ ಗಮನ ಸೆಳೆಯುತ್ತಿದೆ.ಪುನೀತ್ ಕಲಾವಿದ ಬಳಗ, ರಂಗೋಲಿ ಕಲಾವಿದೆ ಸಿ. ಲಕ್ಷ್ಮಿ ಮತ್ತು ಕೆಥಡ್ರೆಲ್ ಪ್ಯಾರೀಸ್ ನ ಉಸ್ತುವಾರಿ ಸ್ಟೇನಿ ಡಿ. ಅಲ್ಮೇಡಾ ಅವರ ಸಹಯೋಗದೊಂದಿಗೆ 4500 ಚದರ ಅಡಿ ವಿಸ್ತೀರ್ಣದಲ್ಲಿ ಬೃಹತ್ ಚಿತ್ರ ಬಿಡಿಸಲಾಗಿದೆ.