ಸಾರಾಂಶ
ಮುಂಡರಗಿ: ಚುಟುಕು ಸಾಹಿತ್ಯ ತನ್ನದೇ ಆದ ವಿಶೇಷತೆ ಹೊಂದಿದೆ. ಚುಟುಕು ಸಾಹಿತ್ಯ ಪ್ರತಿಯೊಬ್ಬ ಓದುಗರ ಮನಸ್ಸನ್ನು ತಲುಪುತ್ತದೆ ಎಂದು ಜ.ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು.ಅವರು ಶನಿವಾರ ಪಟ್ಟಣದ ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಕಚುಸಾಪ ಕೇಂದ್ರ ಸಮಿತಿ ಹುಬ್ಬಳ್ಳಿ ಹಾಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಗದಗ ಜಿಲ್ಲಾ ಘಟಕದ ಆಶ್ರಯದಲ್ಲಿ ಜರುಗಿದ ಗದಗ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾವ್ಯ ಕಲ್ಪವಲ್ಲರಿ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಚುಟುಕು ಚುರುಕು ಮುಟ್ಟಿಸುತ್ತಿವೆ ಎನ್ನುವ ಮಾತಿದ್ದು, ಪ್ರತಿಯೊಬ್ಬರೂ ಚುಟುಕು ಬರೆಯುವ ಹಾಗೂ ಚುಟುಕು ಓದುವ ಮೂಲಕ ಚುಟುಕು ಸಾಹಿತ್ಯ ಉಳಿಸಿ ಬೆಳೆಸುವ ಮೂಲಕ ಪ್ರತಿಯೊಬ್ಬರು ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು.ಕಚುಸಾಪ ಗದಗ ಜಿಲ್ಲಾ ಉಪಾಧ್ಯಕ್ಷ ಡಾ. ರಾಜೇಂದ್ರ ಗಡಾದ ಮಾತನಾಡಿ, ಕಚುಸಾಪ ಗೆ ತನ್ನದೆ ಆದ ಇತಿಹಾಸವಿದೆ. ಕಳೆದ 12 ವರ್ಷಗಳಿಂದ ಉತ್ತರ ಕರ್ನಾಟಕ ಭಾಗವೂ ಸೇರಿದಂತೆ ಹಲವಾರು ಚುಟುಕು ಸಾಹಿತ್ಯ ಸಮ್ಮೇಳನ ಮಾಡುವ ಮೂಲಕ ವಿವಿಧ ಕಾರ್ಯಕ್ರಮ ನಡೆಸಲಾಗಿದೆ. ಮುಂದೆ ಜಿಲ್ಲಾ ಪರಿಷತ್ತಿನಿಂದ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ತಾಲೂಕು ಘಟಕ ರಚಿಸಿ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಲಿದೆ. ಮುಂಡರಗಿ ಅನ್ನದಾನ ಶ್ರೀಗಳು ಸಹ ಹೆಚ್ಚಿನ ಚುಟುಕು ರಚಿಸಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ ಎಂದರು.
ಕಚುಸಾಪ ಗದಗ ಜಿಲ್ಲಾಧ್ಯಕ್ಷೆ ಶೋಭಾ ಮೇಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಚುಟುಕು ಕುಟುಕುವಂತಿರಬೇಕು. ಚುಟುಕು ಬರೆಯಲು ನನಗೆ ಪ್ರೇರಣೆಯೇ ಮುಂಡರಗಿ ಶ್ರೀಗಳು ಹಾಗೂ ಲಿಂ. ಸಾಹಿತಿ ಮಹಾಲಿಂಗ ಯಾಳಗಿಯವರು. ನಮ್ಮ ಮನಸ್ಸಿನ ಭಾವನೆ ಹಂಚಿಕೊಳ್ಳುವುದೇ ಚುಟುಕು. ಕವನ ಬರೆಯುವುದು ಸುಲಭ ಆದರೆ ಚುಟುಕು ಬರೆಯುವುದು ಕಷ್ಟದ ಕೆಲಸ ಎಂದರು.ತಾಲೂಕು ಕಾರ್ಯದರ್ಶಿ ಕಾಶಿನಾಥ ಬಿಳಿಮಗ್ಗದ ವಚನ ಪಿತಾಮಹ ಫ.ಗು. ಹಳಕಟ್ಟಿ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಕಚುಸಾಪ ಅಧ್ಯಕ್ಷ ಸಿ.ಎಸ್. ಅರಸನಾಳ ಪದಗ್ರಹಣ ಕಾರ್ಯಕ್ರಮ ನಡೆಸಿಕೊಟ್ಟರು. ಕೊಟ್ರೇಶ ಜವಳಿ ರಚನೆಯ ಕಾವ್ಯ ಕಲ್ಪವಲ್ಲರಿ ಕವನ ಸಂಕಲನ ಬಿಡುಗಡೆಗೊಳಿಸಲಾಯಿತು.ಶೋಭಾ ಮಲ್ಕಿಒಡೆಯರ್ ಕೃತಿ ಪರಿಚಯ ಮಾಡಿದರು. ಕಾರ್ಯಕ್ರಮದಲ್ಲಿ ಸಾಹಿತಿಗಳು, ಕವಿಗಳು ಹಾಗೂ ಜಿಲ್ಲಾ ಪದಾಧಿಕಾರಿಗಳು ಇದ್ದರು.
ಜಿಲ್ಲಾ ಖಜಾಂಚಿ ಸಂತೋಷ ಮುರಡಿ ಸ್ವಾಗತಿಸಿ, ಮಂಜುಳಾ ಇಟಗಿ ನಿರೂಪಿಸಿ, ಸಚಿನ್ ಒಡೆಯರ್ ವಂದಿಸಿದರು.