ವಿಶ್ವಕರ್ಮ ಯೋಜನೆಯ ಸಾಲಕ್ಕೆ ಸಿಬಿಲ್ ಸ್ಕೋರ್ ಅನ್ವಯಿಸುವುದಿಲ್ಲ: ಹಣಕಾಸು ಇಲಾಖೆ ಸ್ಪಷ್ಟನೆ

| Published : Jan 24 2025, 12:49 AM IST

ವಿಶ್ವಕರ್ಮ ಯೋಜನೆಯ ಸಾಲಕ್ಕೆ ಸಿಬಿಲ್ ಸ್ಕೋರ್ ಅನ್ವಯಿಸುವುದಿಲ್ಲ: ಹಣಕಾಸು ಇಲಾಖೆ ಸ್ಪಷ್ಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಫಲಾನುಭವಿಗಳಿಗೆ ಸಾಲ ನೀಡುವುದಕ್ಕೆ ಸಿಬಿಲ್‌ ಸ್ಕೋರ್‌ ಮಾನದಂಡ ಅನ್ವಯಿಸುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟನೆ ನೀಡಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಫಲಾನುಭವಿಗಳಿಗೆ ಸಾಲ ನೀಡುವುದಕ್ಕೆ ಸಿಬಿಲ್ ಸ್ಕೋರ್ ಮಾನದಂಡ ಅನ್ವಯಿಸುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟನೆ ನೀಡಿದೆ.

ಈ ಯೋಜನೆಯ ಫಲಾನುಭವಿಗಳಿಗೆ ಅವರ ಸಿಬಿಲ್ ಸ್ಕೋರ್ ಪರಿಗಣಿಸಿ ಕೆಲವು ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ನೀಡುವುದಕ್ಕೆ ನಿರಾಕರಿಸುತ್ತಿರುವ ಮತ್ತು ನೀಡಿದ ಸಾಲದಲ್ಲಿ ಒಂದಂಶವನ್ನು ಬ್ಯಾಂಕಿನಲ್ಲಿ ಠೇವಣಿಯಾಗಿಡುವಂತೆ ಆಗ್ರಹಿಸುತ್ತಿರುವ ಬಗ್ಗೆ ಮತ್ತು ಈ ಬಗ್ಗೆ ಬ್ಯಾಂಕುಗಳಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಉಡುಪಿ - ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಇತ್ತೀಚೆಗೆ ಕೇಂದ್ರ ಹಣಕಾಸು ಇಲಾಖೆಗೆ ಪತ್ರ ಬರೆದಿದ್ದರು.

ಅದರಂತೆ ಕೇಂದ್ರ ಹಣಕಾಸು ಇಲಾಖೆ ಉಪಕಾರ್ಯದರ್ಶಿಯವರು ಕರ್ನಾಟಕ ರಾಜ್ಯ ಮಟ್ಟದ ಬ್ಯಾಂಕಿಂಗ್ ಸಮಿತಿ (ಎಸ್.ಎಲ್.ಬಿ.ಸಿ)ಗೆ ಸುತ್ತೋಲೆ ನೀಡಿದ್ದು, ಯಾವುದೇ ಕಾರಣಕ್ಕೂ ವಿಶ್ವಕರ್ಮ ಯೋಜನೆಗೆ ಸಿಬಿಲ್ ಸ್ಕೋರ್ ಅನ್ವಯಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಈ ಹಿಂದೆಯೇ ನೀಡಿರುವ ಸುತ್ತೋಲೆಯಲ್ಲಿಯೂ ಪಿಎಂ ವಿಶ್ವಕರ್ಮ ಯೋಜನೆಯಡಿ ಕ್ರೆಡಿಟ್ ಸ್ಕೋರ್ ಪರಿಗಣಿಸಬಾರದು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆದ್ದರಿಂದ ಬ್ಯಾಂಕ್‌ಗಳು ಗೊಂದಲವಿಲ್ಲದೆ ಸಾಲ ನೀಡಬೇಕು ಹಾಗೂ ಸಾಲದ ಯಾವುದೇ ಭಾಗವನ್ನು ಮುಂಗಡ ಠೇವಣಿಯಾಗಿ ಇರಿಸಲು ಒತ್ತಾಯಿಸಬಾರದು ಎಂದೂ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಆದರೆ ಫಲಾನುಭವಿ ಈಗಾಗಲೇ ಬ್ಯಾಂಕಿನಲ್ಲಿ ಬೇರೆ ಸಾಲ ಮರುಪಾವತಿಯನ್ನು ಬಾಕಿ ಇರಿಸಿರಬಾರದು ಅಥವಾ ಸುಸ್ತಿದಾರನಾಗಿರಬಾರದು ಎಂಬುದನ್ನು ಸ್ಪಷ್ಟಪಡಿಸಲಾಗಿದೆ.

ತನ್ನ ಪತ್ರಕ್ಕೆ ಪ್ರತಿಕ್ರಿಯಿಸಿ ರಾಷ್ಟ್ರಾದಾದ್ಯಂತ ವಿಶ್ವಕರ್ಮ ಯೋಜನೆಯಲ್ಲಿ ಸಿಬಿಲ್ ಸ್ಕೋರ್ ಸಮಸ್ಯೆ ಪರಿಹಾರ ಮಾಡಿದ್ದಕ್ಕಾಗಿ ಸಂಸದ ಕೋಟ ಭಾರತ ಸರ್ಕಾರದ ಹಣಕಾಸು ಸಚಿವಾಲಯಕ್ಕೆ ಕೃತಜ್ಞತೆ ತಿಳಿಸಿ, ಎಲ್ಲಾ ಬ್ಯಾಂಕ್‌ಗಳು ಇದನ್ನು ಅನುಷ್ಠಾನ ಮಾಡಬೇಕೆಂದು ಮನವಿ ಮಾಡಿದ್ದಾರೆ.