ಮನೆಗೆ ನುಗ್ಗಿ ಹಲ್ಲೆ ಘಟನೆ ಸಿಐಡಿ ತನಿಖೆ: ಗೃಹ ಸಚಿವ

| Published : May 03 2024, 01:04 AM IST

ಸಾರಾಂಶ

ಕೋಟನೂರ್ ಡಿ ಗ್ರಾಮದಲ್ಲಿ ಕಳೆದ ಜ.23ರಂದು ನಡೆದಂತಹ ಅಂಬೇಡ್ಕರ್‌ ಪ್ರತಿಮೆ ಅಪಮಾನ ಪ್ರಕರಣದಿಂದ ಹಿಡಿದು ಮೊನ್ನೆ ಅದೇ ಗ್ರಾಮದಲ್ಲಿ ಸಂಭವಿಸಿರುವ ಲಿಂಗಾಯಿತ ಸಮುದಾಯದವರ ಮನೆ ಹೊಕ್ಕು ನಡೆಸಲಾದಂತಹ ಹಲ್ಲೆ ಘಟನೆಯವರೆಗಿನ ಎಲ್ಲಾ ಬೆಳವಣಿಗೆಗಳು, ಘಟನಾವಳಿಗಳ ಬಗ್ಗೆ ಸಮಗ್ರ ತನಿಖೆಗೆ ಇಡೀ ಪ್ರಕರಣ‍ನ್ನು ರಾಜ್ಯ ಸರಕಾರ ಸಿಐಡಿಗೆ ಒಪ್ಪಿಸಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ನಗರದ ಕೋಟನೂರ್ ಡಿ ಗ್ರಾಮದಲ್ಲಿ ಕಳೆದ ಜ.23ರಂದು ನಡೆದಂತಹ ಅಂಬೇಡ್ಕರ್‌ ಪ್ರತಿಮೆ ಅಪಮಾನ ಪ್ರಕರಣದಿಂದ ಹಿಡಿದು ಮೊನ್ನೆ ಅದೇ ಗ್ರಾಮದಲ್ಲಿ ಸಂಭವಿಸಿರುವ ಲಿಂಗಾಯಿತ ಸಮುದಾಯದವರ ಮನೆ ಹೊಕ್ಕು ನಡೆಸಲಾದಂತಹ ಹಲ್ಲೆ ಘಟನೆಯವರೆಗಿನ ಎಲ್ಲಾ ಬೆಳವಣಿಗೆಗಳು, ಘಟನಾವಳಿಗಳ ಬಗ್ಗೆ ಸಮಗ್ರ ತನಿಖೆಗೆ ಇಡೀ ಪ್ರಕರಣ‍ನ್ನು ರಾಜ್ಯ ಸರಕಾರ ಸಿಐಡಿಗೆ ಒಪ್ಪಿಸಿದೆ.

ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು, ಈ ಘಟನೆಯ ಸಮಗ್ರ ತನಿಖೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್‌ ಖರ್ಗೆಯವರು, ಡಾ. ಶರಣ ಪ್ರಕಾಶ ಪಾಟೀಲರು ಇಬ್ಬರೂ ನನ್ನ ಗಮನ ಸೆಳೆದು ಕೋರಿದ್ದರು. ಚುನಾವಣೆಯ ಈ ಸಂದರ್ಭದಲ್ಲಿನ ಈ ಬೆಳವಣಿಗೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು ಪ್ರಕರಣದ ಸತ್ಯಾಸತ್ಯತೆ ಏನೆಂಬುದು ಸಮಗ್ರ ತನಿಖೆಯಿಂದ ಹೊರಬರಲಿ ಎಂಬ ಕಾರಣಕ್ಕೆ ಇಡೀ ಪ್ರಕರಣವನ್ನೇ ಸಿಐಡಿಗೆ ಒಪ್ಪಿಸಲಾಗಿದೆ ಎಂದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಬಿಜೆಪಿಯವರು ಸುಖಾ ಸುಮ್ಮನೇ ಆರೋಪಿಸುತ್ತಿದ್ದಾರೆ. ಬಿಜೆಪಿಯವರ ಆಡಳಿತಕ್ಕಿಂತ ನಮ್ಮ ಆಡಳಿತದಲ್ಲಿಯೇ ರಾಜ್ಯದಲ್ಲಿ ಹೆಚ್ಚಿನ ನೆಮ್ಮದಿ ನೆಲೆಯೂರಿದೆ ಎಂದು ಡಾ. ಪರಮೇಶ್ವರಹೇಳಿದರು.

ಅಂಕಿ ಸಂಖ್ಯೆ ಸಮೇತ ಎಲ್ಲಾ ಮಾಹಿತಿ ನನ್ನ ಬಲಿ ಇವೆ. ಯಾರೇ ಆಗಲಿ ಬಿಜೆಪಿಯವರು ಚರ್ಚೆಗೆ ಬಂದರೆ ನಾನು ಸಿದ್ಧ. ಸುಮ್ಮನೆ ಆರೋಪ ಮಾಡಿದರೆ ನಾವು ಕೇಳುವವರಲ್ಲ ಎಂದು ಪರಮೇಶ್ವರ ಹೇಳಿದರು.

ಮುಂದುವರಿದ ಧರಣಿ: ವೀರಶೈವ ಲಿಂಗಾಯತ ಸಮಾಜದ ಸಂಗಮೇಶ ಅವರ ಮನೆಯ ಮೇಲೆ ಮಂಗಳವಾರ ತಡರಾತ್ರಿ ಕೆಲವು ಕಿಡಿಗೇಡಿಗಳು ಹಲ್ಲೆ ಮಾಡಿ ಮನೆಯಲ್ಲಿದ್ದ ಮಹಿಳೆಯರು, ಪುರುಷರು ಎಲ್ಲರನ್ನು ಮನಬಂದಂತೆ ಥಳಿಸಿರುವ ಘಟನೆಯನ್ನು ಉಗ್ರವಾಗಿ ಖಂಡಿಸಿ ಗುರುವಾರ ಆಳಂದ ಚೆಕ್‌ಪೋಸ್ಟ್‌ ಬಳಿ ಇರುವ ವೃತ್ತದಲ್ಲಿ ವೀರಶೈವ ಲಿಂಗಾಯಿತ ಸಮುದಾಯದ ಮುಖಂಡರು, ಯುವಕರು ಭಾರಿ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿದರು.

ಘಯನೆಯನ್ನು ಉಗ್ರವಾಗಿ ಖಂಡಿಸಿದ ಹೋರಾಟಗಾರರು ಕಾನೂನು ಕೈಗೆತ್ತಿಕೊಂಡು ದುಷ್ಕರ್ಮಿಗಳ ನಡೆಯನ್ನು ಖಂಡಿಸಿ ತಕ್ಷಣ ಅವರನ್ನು ಬಂಧಿಸುವಂತೆ ಆಗ್ರಹಿಸಿದರು.

ನಗರದ ಹೊರವಲಯದ ಆಳಂದ ಚೆಕ್‌ಪೋಸ್ಟ್ ಬಳಿ ನಡೆದ ಹೋರಾಟದಿಂದಾಗಿ ಆಳಂದ ಭಾಗದ ವಹನ ಸಂಚಾರ ಸ್ಥಗಿತಗೊಂಡಿತ್ತು. ಜಿಲ್ಲೆಯ ವೀರಶೈವ ಲಿಂಗಾಯತ ಸಮುದಾಯದ ವತಿಯಿಂದ ನಡೆದ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು.

ಹಲ್ಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಆಗ್ರಹಿಸಿ ರಸ್ತೆ ತಡೆದು ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಲಾಯ್ತು. ಬೃಹತ್ ಪ್ರತಿಭಟನೆಯಲ್ಲಿ ಚವದಾಪುರಿ ಶ್ರೀಗಳು, ವೀರಶೈವ ಲಿಂಗಾಯತ ಮುಖಂಡರಾದ ಶಿವಕಾಂತ್ ಮಹಾಜನ್‌, ಲ ಕ್ಷ್ಮಿಕಾಂತ ಸ್ವಾದಿ. ಸಚಿನ್ ಕಡಗಂಚಿ. ಸಿದ್ದರಾಜು ಬಿರೆದಾರ.ಮಲ್ಲಿಕಾರ್ಜುನ ಸರವಾಡ. ಮಹೇಶ್ ಕೆಂಭಾವಿ. ದಯಾನಂದ ಯಂಕಂಚಿ ಅನೇಕ ಸಮಾಜದ ಹಿರಿಯರು ಯುವಕರು ಪಾಲ್ಗೊಂಡಿದ್ದಾರು.

ಕೋಟನೂರ್‌ ಹಲ್ಲೆ ಘಟನೆ ಖಂಡಿಸಿದ ಶರಣು ಮೋದಿ: ಕಲಬುರಗಿಯ ಕೋಟನೂರ್ (ಡಿ) ಬಡಾವಣೆ ಸಮೀಪದ ಲುಂಬಿಣಿ ಉದ್ಯಾನದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಜಾಮೀನು ಪಡೆದ ಸಂಗಮೇಶ್ ಅವರ ಸಹೋದರ, ತಾಯಿ ಹಾಗೂ ಚಿಕ್ಕಪ್ಪ ಅವರ ಮೇಲೆ ನಡೆದಿರುವ ಹಲ್ಲೆಯನ್ನು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾಧ್ಯಕ್ಷ ಶರಣು ಮೋದಿ ಹೇಳಿದ್ದಾರೆ.

ಹೇಳಿಕೆ ನೀಡಿರುವ ಅವರು, ಸಂವಿಧಾನ ಶಿಲ್ಪಿಯ ಪುತ್ಥಳಿಗೆ ಅಪಮಾನ ಮಾಡಿದ್ದಾರೆ ಎನ್ನಲಾಗುತ್ತಿರುವ ಎಲ್ಲ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ, ಕಾನೂನಾತ್ಮಕವಾಗಿ ಹೋರಾಟ ನಡೆಸಲು ಎಲ್ಲರಿಗೂ ಪ್ರಜಾಪ್ರಭುತ್ವದ ತತ್ವಗಳ ಅಡಿಯಲ್ಲಿ ಅವಕಾಶ ಕಲ್ಪಿಸಿದೆ. ಹೀಗಿರುವಾಗ ಜಾಮೀನು ಪಡೆದ ವ್ಯಕ್ತಿಗಳ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸುವುದು ನ್ಯಾಯಾಲಯಕ್ಕೆ ಅಗೌರವ ಸೂಚಿಸಿದಂತಾಗುತ್ತದೆ. ಅದರಲ್ಲೂ ಮಹಿಳೆಯರ ಮೇಲೆ ಹಲ್ಲೆ ನಡೆಸುವುದನ್ನು ಇಡೀ ಪ್ರಜ್ಞಾವಂತ ಸಮಾಜ ಖಂಡಿಸುತ್ತದೆ. ಹಾಗಾಗಿ, ಈ ಘಟನೆಯನ್ನು ಖಂಡಿಸುತ್ತಾ ಯಾವುದೇ ಕಾರಣಕ್ಕೂ ಘಟನೆಗೆ ಸಂಬಂಧಿಸಿದಂತೆ ರಾಜಕಾರಣ ಮಾಡಬಾರದು ಎಂದು ಶರಣು ಮೋದಿ ಮನವಿ ಮಾಡಿದ್ದಾರೆ.