ಸಿನಿಮಾ ರಂಗ ಇಂದು ಪ್ರಗತಿಯತ್ತ ಸಾಗುತ್ತಿದೆ: ನಟಿ ಉಮಾಶ್ರೀ ಅಭಿಮತ

| Published : Oct 05 2024, 01:34 AM IST

ಸಿನಿಮಾ ರಂಗ ಇಂದು ಪ್ರಗತಿಯತ್ತ ಸಾಗುತ್ತಿದೆ: ನಟಿ ಉಮಾಶ್ರೀ ಅಭಿಮತ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ನಗರದ ಅಂಬೇಡ್ಕರ್ ಭವನದಲ್ಲಿ ಮಹಾನಗರ ಪಾಲಿಕೆ, ವಾರ್ತಾಇಲಾಖೆ ಬೆಳ್ಳಿ ಮಂಡಲ, ಚಿತ್ರ ಸಮಾಜ ಆಶ್ರಯದಲ್ಲಿ ಏರ್ಪಡಿಸಿದ್ದ ದಸರಾ ಚಲನ ಚಿತ್ರೋತ್ಸವವನ್ನು ವಿಧಾನಪರಿಷತ್ ಸದಸ್ಯೆ, ನಟಿ ಉಮಾಶ್ರೀ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕನ್ನಡ ಚಿತ್ರ ಸವಿಯುವ ಮನೋಸ್ಥಿತಿಯನ್ನು ಯುವಪೀಳಿಗೆಯಲ್ಲಿ ಬೆಳೆಸಬೇಕು ಎಂದು ವಿಧಾನ ಪರಿಷತ್ ಸದಸ್ಯೆ, ನಟಿ ಉಮಾಶ್ರೀ ಕರೆ ನೀಡಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಮಹಾನಗರ ಪಾಲಿಕೆ, ವಾರ್ತಾ ಇಲಾಖೆ ಬೆಳ್ಳಿಮಂಡಲ, ಚಿತ್ರ ಸಮಾಜ ಆಶ್ರಯದಲ್ಲಿ ಏರ್ಪಡಿಸಿದ್ದ ದಸರಾ ಚಲನ ಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿ, ಶಿವಮೊಗ್ಗ ಜಿಲ್ಲೆ ಸಂಸ್ಕಾರಕ್ಕೆ ಹೆಸರಾಗಿದೆ. ಕಲೆ, ಹೋರಾಟ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣಕ್ಕೆ ಹೆಸರು ಮಾಡಿದೆ. ಮೈಸೂರು ಬಿಟ್ಟರೆ ಶಿವಮೊಗ್ಗ ದಸರಾ ಅತ್ಯಂತ ಪ್ರಸಿದ್ಧವಾಗಿದೆ ಎಂದರು.

ಸಿನಿಮಾ ರಂಗ ಇವತ್ತು ಪ್ರಗತಿಯತ್ತ ಸಾಗುತ್ತಿದೆ. ಒಳ್ಳೆಯ ಸಿನಿಮಾಗಳನ್ನು ಜನರು ನೋಡುತ್ತಾರೆ. ಮನೆಯಿಂದ ಜನರನ್ನು ಹೊರಗೆ ಕರೆದುಕೊಂಡು ಬರುವಂತಹ ವಾತಾವರಣ ನಿರ್ಮಾಣವಾಗಬೇಕಿದೆ. ಅದರಲ್ಲೂ ಕನ್ನಡದ ಸಿನಿಮಾಗಳು ಉಳಿಯಬೇಕು. ಇದರಿಂದ ಕಲಾವಿದರೂ ಉಳಿಯುತ್ತಾರೆ. ಇಂತಹ ವಾತಾವರಣ ನಿರ್ಮಿಸಬೇಕಾದದ್ದು ನಮ್ಮೆಲ್ಲರ ಹೊಣೆ ಎಂದರು.

ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಕಲೆಗೆ ಶಕ್ತಿ ಸಿಗುವಂತಹ ಕಾರ್ಯ ನಡೆಯುತ್ತಿದೆ. ಕಲಾವಿದರ ಜಗತ್ತು ಇದು. ಚಿತ್ರಗಳಿಗೆ ಶಕ್ತಿ ಸಿಗದೇ ಹೋದರೆ ಅನೇಕ ಚಿತ್ರಮಂದಿರಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಭೀಮಾ ಚಿತ್ರದ ನಟಿ ಪ್ರಿಯಾ ಶಠಮರ್ಷಣ್ ರಂಗಭೂಮಿ ಕಲಾವಿದ ಅವಿನಾಶ್, ಶಾಖಾಹಾರಿ ನಿರ್ದೇಶಕ ಸಂದೀಪ್ ಸುಂಕದ್, ನಿರ್ಮಾಪಕ ರಾಜೇಶ್ ಕೀಳಂಬಿ, ಬೆಳ್ಳಿಮಂಡಲ ಸಂಚಾಲಕ ವೈದ್ಯನಾಥ್ ಹೆಚ್.ಯು., ಚಲನಚಿತ್ರ ಸಾಹಿತಿ ಡಾ. ವಿ.ನಾಗೇಂದ್ರ ಪ್ರಸಾದ್,ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಇನ್ನಿತರರಿದ್ದರು.

ಡಾ.ಹೆಚ್.ಎಸ್.ನಾಗಭೂಷಣ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಿವಮೊಗ್ಗ ನಂದನ್, ಶಿವಮೊಗ್ಗ ನಾಗರಾಜ್, ಪ್ರದೀಪ್‌ಕುಮಾರ್, ವಾಸಕಿ ಕುಮಾರ್ ಅವರಿಂದ ಛಾಯಾಚಿತ್ರ ಹಾಗೂ ಕ್ಯಾಮರಾ ಪ್ರದರ್ಶನ ಆಯೋಜಿಸಲಾಗಿತ್ತು.ಮುಂಜಾವಿನ ಪ್ರದರ್ಶನಕ್ಕೆ ನಟಿ ಗರಂ

ಶಿವಮೊಗ್ಗ ದಸರಾದ ಚಲನಚಿತ್ರೋತ್ಸವದಲ್ಲಿ ಸಿನಿಮಾ ಪ್ರದರ್ಶನದ ಸಮಯದ ಕುರಿತು ನಟಿ, ಮಾಜಿ ಸಚಿವೆ ಉಮಾಶ್ರೀ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು. ದಸರಾ ಚಲನಚಿತ್ರೋತ್ಸವದಲ್ಲಿ ಬೆಳಗ್ಗೆ ೯ ಗಂಟೆಗೆ ಸಿನಿಮಾಗಳನ್ನು ಪ್ರದರ್ಶನ ಮಾಡುತ್ತಿರುವುದಕ್ಕೆ ನಟಿ ಉಮಾಶ್ರೀ ಅಸಮಾಧಾನ ಹೊರಹಾಕಿದರು.

ಮಕ್ಕಳಿಗೆ ಉತ್ತಮ ಸಿನಿಮಾ ತೋರಿಸಬೇಕು. ಆದರೆ ಬೆಳಗಿನ ಜಾವವೇ ಪ್ರದರ್ಶನ ಮಾಡುವುದು ಸರಿಯಲ್ಲ. ಸಿನಿಮಾ ಪ್ರದರ್ಶನ ಮಾಡಬೇಕು ಅನ್ನುವ ಕಾರಣಕ್ಕೆ ಹಾಕಬಾರದು. ರಾತ್ರಿ ವೇಳೆ ಪ್ರದರ್ಶನ ಮಾಡಿದರೆ ಅನುಕೂಲ ಆಗಬಹುದು. ಇದರಿಂದ ಹೆಚ್ಚಿನ ಜನರಿಗೆ ಸಿನಿಮಾ ತಲುಪಲಿದೆ ಎಂದು ಉಮಾಶ್ರೀ ಸಲಹೆ ನೀಡಿದರು. ಭಾಷಣದ ಬಳಿಕ ಉಮಾಶ್ರೀ ಅವರಿಗೆ ಶಾಸಕ ಎಸ್.ಎನ್.ಚನ್ನಬಸಪ್ಪ ಮತ್ತು ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಸಮಜಾಯಿಷಿ ನೀಡಿದರು.

ಇಂದಿನಿಂದ 5 ದಿನ ರಂಗ ದಸರಾ: ಮಧು

ಶಿವಮೊಗ್ಗ: ಮಹಾನಗರ ಪಾಲಿಕೆಯ ದಸರಾ ಮಹೋತ್ಸವದಲ್ಲಿ ಈ ಬಾರಿ ಐದು ದಿನಗಳ ಕಾಲ ರಂಗ ದಸರಾವನ್ನು ವಿಭಿನ್ನವಾಗಿ ಸಂಯೋಜಿಸಲಾಗಿದೆ ಎಂದು ರಂಗ ದಸರಾ ಸಮಿತಿ ಸದಸ್ಯ ಕಾರ್ಯದರ್ಶಿ ಮಧು ನಾಯಕ್ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.5ರಂದು ಸಂಜೆ 5.30ಕ್ಕೆ ಕುವೆಂಪು ರಂಗಮಂದಿರದಲ್ಲಿ ರಂಗ ದಸರಾ ಉದ್ಘಾಟನಾ ಸಮಾರಂಭ ನಡೆಯಲಿದೆ. ನೀನಾಸಂ ಪ್ರಾಧ್ಯಾಪಕ ಮಂಜು ಕೊಡಗು ಉದ್ಘಾಟನೆ ಮಾಡಲಿದ್ದಾರೆ. ಸಂಜೆ 7ಕ್ಕೆ ಅಜೇಯ ನೀನಾಸಂ, ಚಂದ್ರಶೇಖರ್ ಹಿರೇಗೋಣಿಗೆರೆ ನಿರ್ದೇಶನದಲ್ಲಿ ಪದವಿ ಮತ್ತು ಬಿ.ಎಡ್ ವಿದ್ಯಾರ್ಥಿಗಳು ರಂಗಗೀತೆ ಪ್ರಸ್ತುತಪಡಿಸುವರು ಎಂದರು.

ಅ.6ರಂದು ಕುವೆಂಪು ರಂಗಮಂದಿರದಲ್ಲಿ ಬೆಳಗ್ಗೆ 10.15ರಿಂದ ಮಕ್ಕಳ ರಂಗ ದಸರಾ ನಡೆಯಲಿದೆ. ನಾಗರಾಜ ಮಂಡಗದ್ದೆ ಅವರಿಂದ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಇದೆ. ಬೆಳಿಗ್ಗೆ ೧೧ ರಿಂದ ಮಕ್ಕಳ ನಾಟಕ ಪ್ರದರ್ಶನ ಇರುತ್ತದೆ. ವಿನೋಬನಗರ ಸರ್ಕಾರಿ ಶಾಲೆ ಮಕ್ಕಳಿಂದ ಪಂಜರ ಶಾಲೆ, ದುರ್ಗಿಗುಡಿ ಸರ್ಕಾರಿ ಶಾಲೆ ಮಕ್ಕಳಿಂದ ನಾಣಿ ಭಟ್ಟನ ಸ್ವರ್ಗದ ಕನಸು, ಗಾಡಿಕೊಪ್ಪ ಶಾಲೆ ಮಕ್ಕಳಿಂದ ಬಿಲ್ಲಹಬ್ಬ ಹಾಗೂ ತಾಯಿಮನೆ ಅನಾಥಾಲಯದ ಮಕ್ಕಳಿಂದ ಹುಲಿರಾಯ ನಾಟಕ ಪ್ರದರ್ಶನ ಏರ್ಪಡಿಸಿದೆ ಎಂದರು.

ಅದೇ ದಿನ ಸಂಜೆ ೭ ರಿಂದ ಮಹಿಳಾ ನಿರ್ದೇಶಕರ ನಾಟಕ ಪ್ರದರ್ಶನ ರಂಗಮಂದಿರದಲ್ಲಿ ನಡೆಯಲಿದೆ. ಕಲೆಯ ಕೊಲೆ ಹಾಗೂ ಸಂಸಾರದಲ್ಲಿ ಸನಿದಪ ನಾಟಕಗಳ ಪ್ರದರ್ಶನ ಇದೆ. ಡಾ.ಶಿವರಾಮ ಕೃಷ್ಣ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಅ.7 ರಂದು ಸಂಜೆ 6 ರಿಂದ ಏಕವ್ಯಕ್ತಿ ನಾಟಕ ಪ್ರದರ್ಶನ ನಡೆಯಲಿದೆ. ಕೂಡ್ಲಿ ಶ್ರೀಧರಾಚಾರ್ ಅವರಿಂದ ಕನಕ, ದಾಳೇಗೌಡರಿಂದ ತದ್ರೂಪಿ, ಅಜಯ್ ನೀನಾಸಂ ಅವರಿಂದ ಸ್ವಗತ ನಾಟಕ ಪ್ರದರ್ಶನ ಇರುತ್ತದೆ ಎಂದರು.

ಅ.8 ರಂದು ಪೌರಾಣಿಕ ನಾಟಕ ಪ್ರದರ್ಶನ ಇದೆ. ಸಂಜೆ 7 ರಿಂದ ನಗರದ ರಂಗಭೂಮಿ ಕಲಾವಿದರು ಮಹಿಷಾ ಸುರ ಮರ್ದಿನಿ ನಾಟಕ ಪ್ರದರ್ಶಿಸಲಿದ್ದಾರೆ. ಅ.9 ರಂದು ಕುಟುಂಬ ರಂಗ-ಪರಿಕಲ್ಪನೆಯಲ್ಲಿ ಮನೆಯಲ್ಲೇ ನಾಟಕ ಪ್ರದರ್ಶನ ಮಾಡಿದವರ ಆಯ್ದ ನಾಟಕ ಪ್ರದರ್ಶನವಿದೆ. ನಾಲ್ಕು ನಾಟಕಗಳ ಪ್ರದರ್ಶನ ನಡೆಯಲಿದೆ. ಅ.10 ರಂದು ಸಮಾರೋಪ ನಡೆಯಲಿದೆ. ವೃತ್ತಿ ರಂಗಭೂಮಿಯ ಕಲಾವಿದೆ ಅನ್ನಪೂರ್ಣಮ್ಮ ಸಾಗರ್ ಸಮಾರೋಪ ನುಡಿ ನುಡಿಯಲಿದ್ದಾರೆ. ನಂತರ ಮುದುಕನ ಮದುವೆ ನಾಟಕ ಪ್ರದರ್ಶನ ನಡೆಯಲಿದೆ. ಶಿವಮೊಗ್ಗ ಜನತೆ ಪಾಲ್ಗೊಳ್ಳಲು ಕೋರಿದರು.

ಪತ್ರಿಕಾಗೋಷ್ಟಿಯಲ್ಲಿ ಚಂದನ್, ಸುರೇಶ್, ಕಾಂತೇಶ್ ಕದರಮಂಡಲಗಿ, ಹೊನ್ನಾಳಿ ಚಂದ್ರು,ಚಂದ್ರಶೇಖರ ಹೀರೆಗೋಣಿ ಇನ್ನಿತರರಿದ್ದರು.

ಇಂದು ರೈತ ದಸರಾ ಜಾಥಾ

ಶಿವಮೊಗ್ಗ: ನಾಡಹಬ್ಬ ಶಿವಮೊಗ್ಗ ದಸರಾ ಅಂಗವಾಗಿ ಅ.5ರಂದು ಬೆಳಗ್ಗೆ 9ಕ್ಕೆ ಸೈನ್ಸ್‌ ಮೈದಾನದಿಂದ ರೈತ ದಸರಾ ಜಾಥಾ ನಡೆಯಲಿದ್ದು, ಅಲಂಕೃತ ಎತ್ತಿನಗಾಡಿ, ಟ್ರ್ಯಾಕ್ಟರ್, ಟಿಲ್ಲರ್‌ಗಳ ಮೆರವಣಿಗೆ ಆಯೋಜಿಸಲಾಗಿದೆ.

ರೈತ ದಸರಾ ಜಾಥಾವನ್ನು ಪ್ರಗತಿಪರ ರೈತರು ಹಾಗೂ ಉದಯೋನ್ಮುಖ ಕೃಷಿ ಪಂಡಿತ ರಾಜ್ಯ ಪ್ರಶಸ್ತಿ ವಿಜೇತರಾದ ಜಯಪ್ರಕಾಶ್ ಉದ್ಘಾಟಿಸುವರು. ಜಥಾವು ಸರ್ಕಾರಿ ಪದವಿಪೂರ್ವ ಕಾಲೇಜು, ಸೈನ್ಸ್ ಮೈದಾನ, ಬಿ.ಎಚ್.ರಸ್ತೆಯಿಂದ ಪ್ರಾರಂಭಗೊಂಡು ಶಿವಪ್ಪ ನಾಯಕ ವೃತ್ತ, ಅಮೀರ್ ಅಹ್ಮದ್ ವೃತ್ತ, ಟಿ.ಸೀನಪ್ಪ ಶೆಟ್ಟಿ ವೃತ್ತ, ಮಹಾವೀರ ವೃತ್ತದಿಂದ ಕುವೆಂಪು ರಂಗಮಂದಿರವನ್ನು ತಲುಪಲಿದೆ. ಜಾಥಾದಲ್ಲಿ ರೈತರು ತಮ್ಮ ಅಲಂಕೃತ ಎತ್ತಿನಗಾಡಿ, ಟ್ರ್ಯಾಕ್ಟರ್, ಟಿಲ್ಲರ್‌ಗಳಲ್ಲಿ ಪಾಲ್ಗೊಳ್ಳುವರು.

ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿರುವ ವೇದಿಕೆ ಕಾರ್ಯಕ್ರಮವನ್ನು ಪ್ರಗತಿಪರ ರೈತರು ಹಾಗೂ ಉದಯೋನ್ಮುಖ ಕೃಷಿ ಪಂಡಿತ ರಾಜ್ಯ ಪ್ರಶಸ್ತಿ ವಿಜೇತರಾದ ಟಿ.ಎನ್.ರಮೇಶ್ ಉದ್ಘಾಟಿಸುವರು. ಮಹಾನಗರ ಪಾಲಿಕೆ ಆಡಳಿತಾಧಿಕಾರಿ ಹಾಗೂ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರ ಗೌರವ ಉಪಸ್ಥಿತಿ ಇರಲಿದೆ. ಇದೇ ವೇಳೆ ಕೃಷಿ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ರೈತ ದಸರಾ ಸಮಿತಿ ಹೇಳಿದೆ.ಬನ್ನಿ ಮಂಟಪಕ್ಕೆ ಗುದ್ದಲಿ ಪೂಜೆ

ಶಿವಮೊಗ್ಗ: ನವರಾತ್ರಿ ಉತ್ಸವದ ಕಡೆಯ ದಿನದಂದು ನಗರದ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂ ಪಾರ್ಕ್) ಅದ್ಧೂರಿಯಾಗಿ ಜರುಗಲಿರುವ ವಿಜಯದಶಮಿಯ ಬನ್ನಿ ಮುಡಿಯುವ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಗೆ ಸಂಬಂಧಿಸಿದಂತೆ ಶುಕ್ರವಾರ ಬನ್ನಿ ಮಂಟಪದ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಭಾಗಿಯಾಗಿ, ತಾಯಿ ಚಾಮುಂಡೇಶ್ವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್, ಪಾಲಿಕೆಯ ಆಯುಕ್ತೆ ಕವಿತಾಯೋಗಪ್ಪನವರ್, ಪ್ರಮುಖರಾದ ರವಿಟೆಲೆಕ್ಸ್, ಪಿ.ಸಿ. ಈಶ್ವರ್, ಚಿನ್ನಸ್ವಾಮಿ, ನ.ರಾ.ವೆಂಕಟೇಶ್ ಸೇರಿದಂತೆ ಹಲವರಿದ್ದರು.