ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮನುಷ್ಯನ ಅಂತರಾಳದ ಭಾವನೆಗಳನ್ನು ಹೊರಹಾಕುವ ಮಾಧ್ಯಮವಾಗಿ ಸಿನಿಮಾಗಳು ರೂಪುಗೊಳ್ಳುತ್ತಿವೆ. ಭಾವನೆ ಮತ್ತು ಕನಸುಗಳ ತಾಕಲಾಟದ ಪ್ರತಿಬಿಂಬವೇ ಸಿನಿಮಾ ಎಂದು ಸಿನಿಮಾ ಸಂಕಲನಕಾರ ಎಂ.ಎನ್. ಸ್ವಾಮಿ ತಿಳಿಸಿದರು.ನಗರದ ಗೋಕುಲಂನಲ್ಲಿರುವ ಅಂತಾರಾಷ್ಟ್ರೀಯ ಯೂತ್ ಹಾಸ್ಟೆಲ್ ನಲ್ಲಿ ಮನುಜಮತ ಸಿನಿಯಾನದ "ಮೈಸೂರು ಸಿನಿಮಾ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಜೀವನದ ವ್ಯಾಪಾರಗಳನ್ನು ಮರುಸೃಷ್ಟಿಸುವ ಕೆಲಸ ಸಿನಿಮಾಗಳಿಂದ ನಡೆಯುತ್ತಿದೆ. ಶೋಷಣೆ, ಅಸಮಾನತೆ, ದಬ್ಬಾಳಿಕೆಗಳ, ಕ್ರಿಯೆಗಳನ್ನು ಕಲಾತ್ಮಕವಾಗಿ ಸೃಷ್ಟಿಸಿ ಬೌದ್ಧಿಕ ಚಿಂತನೆಗೆ ಒಳಪಡಿಸುವ ಕ್ರಿಯೆ ಸಿನಿಮಾಗಳಿಂದ ಸಾಧ್ಯವಾಗಿದೆ ಎಂದರು.
ಸಾಮಾಜಿಕ ಅನ್ಯಾಯ ಹಾಗೂ ನಾಗರಿಕ ಸಮಾಜ ಗಳನ್ನು ಪ್ರತಿಸೃಷ್ಟಿಸಿ, ಭಾವನೆಗಳ ದಾಖಲಾಟಗಳನ್ನು ವಿಶ್ಲೇಷಣೆ ಮಾಡುವ ಕ್ರಿಯೆ ಸಿನಿಮಾಗಳಿಂದ ಆಗುವುದರಿಂದ ಸಿನಿಮಾಗಳನ್ನು ಸರಿಯಾದ ರೀತಿಯಲ್ಲಿ ಅರ್ಥೈಸಲು ಸಿನಿಮಾ ಹಬ್ಬಗಳು ಸಹಕಾರಿಯಾಗಿದೆ ಎಂದು ಅವರು ಹೇಳಿದರು.ವಿಶ್ವ ಸಿನಿಮಾಗಳು ಅಥವಾ ಕಲಾತ್ಮಕ ಚಿತ್ರಗಳು ಮನುಷ್ಯ ಪರವಾದ ಚಿಂತನೆಗಳಿಂದ ಕೂಡಿರುವುದರಿಂದ ಶಾಲಾ ಕಾಲೇಜುಗಳಲ್ಲಿ ಸಿನಿಮಾ ಕ್ಲಬ್ ಗಳನ್ನು ಸ್ಥಾಪಿಸಬೇಕಿದೆ.ಮನುಜ ಮತ ಸಿನಿಯಾನ ಬಳಗ ರಾಜ್ಯದ ವಿವಿಧ ಕಡೆಗಳಲ್ಲಿ ಸಿನಿಮಾ ಹಬ್ಬವನ್ನು ಸಂಘಟಿಸುತ್ತಾ ಚರ್ಚೆ ಸಂವಾದಗಳನ್ನು ನಡೆಸುತ್ತಾ ಬೌದ್ಧಿಕ ಜ್ಞಾನವನ್ನು ವಿಸ್ತರಿಸುವ ಕೆಲಸ ಅಭಿನಂದನಿಯ ಎಂದರು.
ಬರಹಗಾರ್ತಿ ಮೋಳಿ ವರ್ಗಿಸ್ ಮಾತನಾಡಿ, ವಿಶ್ವ ಸಿನಿಮಾಗಳು ಜಗತ್ತಿನ ಮನೆ- ಮನೆಯ ಕತೆಗಳಾಚೆಗೆ ಆಯಾ ದೇಶದ ಧರ್ಮದ ಹೆಸರಿನಲ್ಲಾಗುವ ರಾಜಕಾರಣ, ಸಾಂಸ್ಕೃತಿಕ ಪಲ್ಲಟಗಳನ್ನು ಗಡಿ ಮೀರಿದ ಭಾಷೆ ಭಾವನೆಗಳನ್ನು ವ್ಯಕ್ತಪಡಿಸುತ್ತಿದೆ ಎಂದು ತಿಳಿಸಿದರು.ಸಿನಿಮಾಗಳು ಬದುಕಿನ ಬೆರಗುಗಳನ್ನು ಹಿಡಿಯುವ ಮಾಧ್ಯಮವಾಗಿದೆ. ಮಾತಿಯಾಳು ಸಿನಿಮಾ ಪ್ರಪಂಚದಲ್ಲಿ ವಿಶ್ವ ಸಿನಿಮಾಗಳ ಗುಣಮಟ್ಟ ಕಾಪಾಡಿಕೊಳ್ಳಲು ನಿರ್ದೇಶಕ ಅಡೂರು ಗೋಪಾಲಸ್ವಾಮಿ ಅವರ ಸಿನಿಮಾಗಳು ಉದಾಹರಣೆಯಾಗಿವೆ ಎಂದರು.
ಮನುಜ ಮತ ಸಿನಿಯಾನದ ಸಂಚಾಲಕ ಐವಾನ್ ಡಿ. ಸಿಲ್ವಾ ಮಾತನಾಡಿ, ಸಾಮಾಜಿಕ ರಾಜಕೀಯ ವಿಚಾರಗಳನ್ನು ಗಮನಿಸುತ್ತಾ, ಸಂವಾದಿಸುವ, ಚರ್ಚಿಸುವ, ಬೌದ್ಧಿಕ ಚಳವಳಿಯಾಗಿ ರಾಜ್ಯದ ವಿವಿಧ ಕಡೆಗಳಲ್ಲಿ ಸ್ಥಳೀಯ ಸಂಘಟಕರೊಂದಿಗೆ ಸಿನಿಮಾ ಹಬ್ಬಗಳನ್ನು ಸಂಘಟಿಸಲಾಗುತ್ತಿದೆ. ವಿಷಯ ವಸ್ತುಗಳನ್ನು ನಿರ್ದಿಷ್ಟ ಸಮಸ್ಯೆಗಳನ್ನು ಇಟ್ಟುಕೊಂಡು ಸಿನಿಮಾ ಹಬ್ಬಗಳನ್ನು ರೂಪಿಸಲಾಗುತ್ತಿದೆ ಎಂದರು.ಜಾಗತಿಕ ಸಿನಿಮಾಗಳೊಂದಿಗೆ ಭಾರತೀಯ ಸಿನಿಮಾಗಳನ್ನು ಅಲ್ಲಿನ ಸಿನಿಮಾ ಹಾಗೂ ಸಾಕ್ಷ್ಯಚಿತ್ರಗಳನ್ನು ನೋಡುತ್ತಾ ರಾಜಕಾರಣ, ಕಲೆ, ಸಂಸ್ಕೃತಿ, ಜೀವನ, ಶೈಲಿ, ಜನಜೀವನದ ದುಃಖ ದುಮ್ಮಾನದ ಹೊಳವುಗಳನ್ನು ಚರ್ಚಿಸಿ ಭೌತಿಕ ಚಿಂತನೆಯನ್ನು ಗಟ್ಟಿಗೊಳಿಸಲಾಗುತ್ತಿದೆ ಎಂದರು.
ಸಿನಿಮಾ ವಿಮರ್ಶಕ ಕೆ. ಪಣಿರಾಜ್ ಮಾತನಾಡಿ, ಸಾಮಾಜಿಕತೆ ಸ್ಥಳೀಯ ರಾಜಕಾರಣ ಕಲೆಯ ಸ್ಪರ್ಶಗಳನ್ನು ಪರಸ್ಪರ ಅರ್ಥೈಸಿಕೊಳ್ಳಲು ಸಿನಿಮಾ ಸಂಘಟನೆಗಳು ಸಹಾಯವಾಗುತ್ತಿದೆ. ವಿಶ್ವದ ಯಾವುದೇ ಸಿನಿಮಾ ರೂಪುಗೊಳ್ಳುತ್ತಿರುವುದೇ ಭಾರತದ ಸಂವಿಧಾನದ ಆಶಯಗಳನ್ನು ವಿರೋಧಿಸುವುದೇ ಆಗಿರುತ್ತದೆ ಎಂಬಂಥಾ ಪರಿಸ್ಥಿತಿ ನಮ್ಮ ನಡುವಿದೆ ಎಂದು ಹೇಳಿದರು.ಅಸಮಾನತೆ, ಶೋಷಣೆ, ಹಿಂಸೆಯ ತಳಹದಿಗಳ ಮೇಲೆ ಸಿನಿಮಾಗಳು ರೂಪುಗೊಳ್ಳುತ್ತಿದೆ. ಧರ್ಮರಾಜ, ಯುದ್ಧೋನ್ಮಾದ, ಲಾಭಕೋರತನ, ದಬ್ಬಾಳಿಕೆಗಳೇ ಮಾನವ ವಿರೋಧಿ ಲಕ್ಷಣಗಳಾಗಿವೆ. ಇವುಗಳನ್ನೇ ಪ್ರತಿಬಿಂಬವಾಗಿಸಿ ಸಿನಿಮಾ, ಕಲೆ, ಸಾಹಿತ್ಯ ಮುಂತಾದ ಕ್ರಿಯಾತ್ಮಕ ಸಂಗತಿಗಳೇ ಮನುಷ್ಯ ವ್ಯಾಪಾರದ ಪ್ರತಿಬಿಂಬವಾಗಿರುವುದರಿಂದ ಬೌದ್ಧಿಕ ಎಚ್ಚರಕ್ಕಾಗಿ ಸಿನಿಮಾ ಹಬ್ಬಗಳಲ್ಲಿನ ಸಂವಾದ- ಚರ್ಚೆಗಳು ಇಂದಿನ ಜನರಿಗೆ ಅತ್ಯಗತ್ಯವಾಗಿದೆ ಎಂದರು .
ಮನುಜಮತ ಸಿನಿಯಾನದ ಸಂಚಾಲಕರಾದ ಯದುನಂದನ್ ಕಿಲಾರ, ಮನು, ಗೌರೀಶ್ ಕಪನಿ, ಮಳವಳ್ಳಿ ಆದರ್ಶ್, ಲೋಕೇಶ್ ಮೊಸಳೆ ಮೊದಲಾದವರು ಇದ್ದರು.