ಸಿನಿಮಾ ಶೂಟಿಂಗ್: ವರದಿ ನೀಡಲು ತಹಸೀಲ್ದಾರ್‌ಗೆ ಡೀಸಿ ಸೂಚನೆ

| Published : Apr 13 2025, 02:04 AM IST

ಸಿನಿಮಾ ಶೂಟಿಂಗ್: ವರದಿ ನೀಡಲು ತಹಸೀಲ್ದಾರ್‌ಗೆ ಡೀಸಿ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಏ.೧೧ರ ಕನ್ನಡಪ್ರಭದಲ್ಲಿ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಲ್ಲಿ ಶೂಟಿಂಗ್‌: ವಿವಾದ ಎಂದು ವರದಿ ಪ್ರಕಟಿಸಿತ್ತು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬಂಡೀಪುರದ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಲೆಯಾಳಂ ಸಿನಿಮಾ ಚಿತ್ರೀಕರಣಕ್ಕೆ ಮುಜರಾಯಿ ಇಲಾಖೆಯ ಅನುಮತಿ ಪಡೆದಿಲ್ಲ ಎಂದು ಜಿಲ್ಲಾಧಿಕಾರಿ ಟಿ.ಸಿ.ಶಿಲ್ಪಾನಾಗ್‌ ಹೇಳಿದ್ದು, ಚಿತ್ರೀಕರಣ ಸಂಬಂಧ ವರದಿ ಸಲ್ಲಿಸಿ ಎಂದು ಗುಂಡ್ಲುಪೇಟೆ ತಹಸೀಲ್ದಾರ್‌ಗೆ ಸೂಚನೆ ನೀಡಿದ್ದಾರೆ.

ಪತ್ರಕರ್ತರೊಂದಿಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಮುಜರಾಯಿ ಇಲಾಖೆ ಅನುಮತಿ ಪಡೆಯದೆ ಶೂಟಿಂಗ್ ನಡೆದಿದೆ. ಯಾರೂ ಕೂಡ ನಮ್ಮ ಬಳಿ ಬಂದು ಶೂಟಿಂಗ್ ಪರ್ಮಿಷನ್ ಪಡೆದಿಲ್ಲ ಎಂದರು. ಈ ಸಂಬಂಧ ಗುಂಡ್ಲುಪೇಟೆ ತಹಸೀಲ್ದಾರ್‌ಗೆ ವರದಿ ಕೊಡಲೂ ಹೇಳಿದ್ದೇನೆ. ಶೂಟಿಂಗ್‌ಗೆ ಪರ್ಮಿಷನ್ ಕೊಟ್ಟಿದ್ಯಾರೂ? ಯಾವ ಚಿತ್ರದ ಶೂಟಿಂಗ್ ಬಗ್ಗೆ ಎಂದು ವರದಿ ಕೊಡಲೂ ಹೇಳಿದ್ದೇನೆ. ಅರಣ್ಯ ಇಲಾಖೆ ಕಂದಾಯ ಇಲಾಖೆಯ ಗಮನಕ್ಕೆ ಶೂಟಿಂಗ್ ವಿಚಾರ ತಂದಿಲ್ಲ ಎಂದರು.

ಅರಣ್ಯ ಇಲಾಖೆಯ ಕಳ್ಳಾಟ ಬಯಲಾಗುತ್ತಾ?:

ಗೋಪಾಲಸ್ವಾಮಿ ಬೆಟ್ಟದಲ್ಲಿ ಮಲೆಯಾಳಂ ಸಿನಿಮಾ ಚಿತ್ರೀಕರಣ ನಡೆದ ಸಂಬಂಧ ಜಿಲ್ಲಾಧಿಕಾರಿ ತಹಸೀಲ್ದಾರ್‌ಗೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಸ್ಥಳೀಯ ತಹಸೀಲ್ದಾರ್‌ ವರದಿ ಬಂದ ಬಳಿಕ ಅನುಮತಿ ನೀಡಿದ ಅರಣ್ಯ ಇಲಾಖೆಯ ಕಳ್ಳಾಟ ಬಯಲಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.ಏ.೧೫ಕ್ಕೆ ಪ್ರತಿಭಟನೆಗೆ ರೈತಸಂಘ ನಿರ್ಧಾರ:

ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದೇ ಗೊಂದಲದಲ್ಲಿರುವ ಕಾರಣ ಸ್ಥಳೀಯ ಅರಣ್ಯಾಧಿಕಾರಿಗಳ ವಿರುದ್ಧ ರೈತಸಂಘ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿ ತನಿಖೆಗೆ ಒತ್ತಾಯಿಸಿದೆ. ಮಲೆಯಾಳಂ ಚಿತ್ರದ ಶೂಟಿಂಗ್‌ಗೆ ಅವಕಾಶ ಕೊಟ್ಟಿದ್ಯಾಕೆ? ಅರಣ್ಯ ಇಲಾಖೆ ಪರಿಸರ ಸೂಕ್ಷ್ಮ ವಲಯದ ನಿಯಮಗಳನ್ನು ಗಾಳಿಗೆ ತೂರಿದೆ. ಯಾರೂ ತಪ್ಪಿತಸ್ಥರಿದ್ದಾರೆ ಅವರ ವಿರುದ್ಧ ಕ್ರಮಕ್ಕೆ ಜಿಲ್ಲಾ ರೈತಸಂಘದ ಆಗ್ರಹಿಸಿದೆ. ಅಲ್ಲದೇ ಏ.15 ರಂದು ಗುಂಡ್ಲುಪೇಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ರೈತಸಂಘ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ.