ಸಾರಾಂಶ
ಸಿಂಧನೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರ ಬೆಂಬಲಿಗರು ಡಿವೈಎಸ್‌ಪಿ ಬಿ.ಎಸ್.ತಳವಾರ ಅವರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಸಿಂಧನೂರು
ಇಲ್ಲಿನ ಸರ್ಕಲ್ ಇನ್ಸೆಪೆಕ್ಟರ್ ವೀರಾರೆಡ್ಡಿ ಅವರನ್ನು ತಕ್ಷಣ ಸೇವೆಯಿಂದ ಅಮಾನತು ಮಾಡಬೇಕು ಎಂದು ಒತ್ತಾಯಿಸಿ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿಯವರ ಬೆಂಬಲಿಗರು ಬುಧವಾರ ಡಿವೈಎಸ್‌ಪಿ ಬಿ.ಎಸ್.ತಳವಾರಗೆ ಮನವಿ ಸಲ್ಲಿಸಿದರು.ಸರ್ಕಲ್ ಇನ್ಸೆಪೆಕ್ಟರ್ ವೀರಾರೆಡ್ಡಿ ತಾಲೂಕಿನಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಿನಾಕಾರಣ ಯುವಕರ ಮೇಲೆ ಅಧಿಕಾರ ದರ್ಪ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಅಲ್ಲದೇ ಮರಳು ದಂಧೆಕೋರರು, ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು, ಮಟ್ಕಾ ಮತ್ತು ಜೂಜಾಟ ನಡೆಸುವವರೊಂದಿಗೆ ಶಾಮೀಲಾಗಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ವೆಂಕನಗೌಡ ಗಿಣಿವಾರ ಆರೋಪಿಸಿದರು.
ಡಿ.24 ರಂದು ಯುವ ಕಾಂಗ್ರೆಸ್ ತಾಲೂಕು ಘಟಕದ ಮಾಜಿ ಅಧ್ಯಕ್ಷ ಹಬೀಬ್ ಖಾಜಿ ಅವರು ಇಂದಿರಾನಗರದಲ್ಲಿರುವ ಮಲ್ಲಯ್ಯ ದೇವರ ದೇವಸ್ಥಾನದ ಹತ್ತಿರ ತನ್ನ ಗೆಳೆಯನನ್ನು ಭೇಟಿಯಾಗಲು ಹೋದ ಸಂದರ್ಭದಲ್ಲಿ ಹೆಡ್ ಕಾನ್‌ಸ್ಟೇಬಲ್ ಸೋಮನಗೌಡ ಇಸ್ಪೀಟ್ ಆಡಲು ಬಂದಿದ್ದಿಯಾ ಎಂದು ಠಾಣೆಗೆ ಕರೆತಂದಿದ್ದರು. ಆಗ ಸರ್ಕಲ್ ಇನ್ಸೆಪೆಕ್ಟರ್ ವೀರಾರೆಡ್ಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಕರಣ ದಾಖಲಿಸಿದ್ದಾರೆ. ಯಾವುದೇ ತಪ್ಪು ಮಾಡದವೆ ಮೇಲೆ ಕೇಸ್ ದಾಖಲಿಸಿದ ಇವರನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿದರು.ಈ ವೇಳೆ ಕಾಂಗ್ರೆಸ್ ಮುಖಂಡರಾದ ಖಾಜಾ ಹುಸೇನ್ ರೌಡಕುಂದಾ, ಬಾಷಾ ಬಳಗಾನೂರು, ಹಬೀಬ್ ಖಾಜಿ, ಹನುಮೇಶ ಕರ್ನಿ, ಪ್ರಭಾಕರ್, ಖಾಜಾಹುಸೇನ್ ಇದ್ದರು.