ಸಾರಾಂಶ
ಗದಗ: ಮಾ. 3ರಿಂದ ಸಿಐಟಿಯು ನೇತೃತ್ವದಲ್ಲಿ ವಿವಿಧ ವಿಭಾಗದ ಕಾರ್ಮಿಕರು ತಮ್ಮ ಬೇಡಿಕೆಗಳಿಗಾಗಿ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಿಐಟಿಯುನ ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ಹೇಳಿದರು.
ಅವರು ಮಂಗಳವಾರ ಗದಗ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಾ 3ರಂದು ಗ್ರಾಮ ಪಂಚಾಯತ್ ನೌಕರರು, ಮಾ. 4ರಂದು ಬಿಸಿಯೂಟ ನೌಕರರು, ಮಾ 5ರಂದು ಕಟ್ಟಡ ಕಾರ್ಮಿಕರು, ಮಾ 6 ಹಮಾಲಿ ಕಾರ್ಮಿಕರು ಸೇರಿದಂತೆ ವಿವಿಧ ವಲಯದ ಅಸಂಘಟಿತ ಹಾಗೂ ಕಾರ್ಖಾನೆ ಕಾರ್ಮಿಕರು ಮಾ. 7 ರಂದು ಅಂಗನವಾಡಿ ನೌಕರರು ಸಾವಿರಾರು ಸಂಖ್ಯೆಯಲ್ಲಿ ಹೋರಾಟದಲ್ಲಿ ಭಾಗವಹಿಸಲಿದ್ದು ಈ ಹೋರಾಟ ಕರ್ನಾಟಕದ ಶ್ರಮಜೀವಿಗಳ ಹೋರಾಟಗಳ ಪರ್ವವಾಗಲಿದೆ ಎಂದರು. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮಂಡಿಸಿದ 2025-26ನೇ ಸಾಲಿನ ಬಜೆಟ್ ಮತ್ತೊಮೆ ಶೇ. 99ರಷ್ಟು ದುಡಿಯುವ ವರ್ಗಕ್ಕೆ ದ್ರೋಹ ಬಗೆದಿದೆ. ದೇಶದ ಶೇ. 1ರಷ್ಟು ಇರುವ ಶ್ರೀಮಂತರ ಪರವಾಗಿದೆ. ನಮ್ಮ ಸಾರ್ವಜನಿಕ ಕ್ಷೇತ್ರಗಳಾದ ವಿದ್ಯುತ್, ತೈಲ, ಸಾರಿಗೆ ಮತ್ತು ಹೆದ್ದಾರಿಗಳು, ಕಲ್ಲಿದ್ದಲು ಮತ್ತು ಇತರ ಖನಿಜಗಳು ಸೇರಿದಂತೆ ಅಮೂಲ್ಯವಾದ ಮೂಲಸೌಕರ್ಯಗಳು, ಅಮೂಲ್ಯ ಖನಿಜಗಳು, ಸಾರ್ವಜನಿಕ ಸೇವಾ ಜಾಲ ಇತ್ಯಾದಿಗಳನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸುತ್ತಿದ್ದಾರೆ ಎಂದು ಆರೋಪಿಸಿದರು.ಕೇಂದ್ರದಲ್ಲಿನ ಎನ್‌ಡಿಎ ಸರ್ಕಾರವು ಅನುಸರಿಸುವ ಆರ್ಥಿಕ ನೀತಿಗಳನ್ನೇ ರಾಜ್ಯದ ಕಾಂಗ್ರೆಸ್ ಸರ್ಕಾರವು ಬಹುತೇಕ ಅನುಸರಿಸುತ್ತಿದೆ. ಎನ್‌ಡಿಎ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಕಾಂಗ್ರೆಸ್ ಪಕ್ಷದ ನಾಯಕರು ಜೋರು ದ್ವನಿಯಲ್ಲಿ ಮಾತಾಡುತ್ತಾರೆ. ಆದರೆ ಕಾಂಗ್ರೆಸ್ ಸರ್ಕಾರದ ನೀತಿಗಳನ್ನು ವಿಭಿನ್ನ ರೀತಿಯಲ್ಲಿ ರೂಪಿಸಲು ಆಗುತ್ತಿಲ್ಲ. ಈ ಎರಡೂ ಪಕ್ಷಗಳು ಬೇರೆ ಬೇರೆಯಾದರೂ ನೀತಿಗಳೆಲ್ಲ ಒಂದೇಯಾಗಿವೆ. ರಾಜ್ಯದ ಕಾಂಗ್ರೆಸ್ 2023ರ ವಿಧಾನ ಸಭಾ ಚುನಾವಣೆಗಳ ಸಂದರ್ಭದಲ್ಲಿ ಕನಿಷ್ಠ ವೇತನದ ವೈಜ್ಞಾನಿಕ ಪುನರ್‌ವಿಮರ್ಶೆ ಭರವಸೆ ನೀಡಲಾಗಿತ್ತು. ಆದರೆ ಆ ಬಗ್ಗೆ ಕ್ರಮವಹಿಸಿಲ್ಲ. ಬದಲಾಗಿ ಬಿಜೆಪಿ ಜಾರಿಗೊಳಿಸಿದ್ದ ಕೆಲಸದ ಅವಧಿಯನ್ನು ಹೆಚ್ಚಿಸುವ ಆದೇಶವನ್ನು ಹಿಂಪಡೆಯಲಿಲ್ಲ ಎಂದರು.
ಮಹಿಳಾ ಕಾರ್ಮಿಕರಿಗೆ ರಾತ್ರಿ ಪಾಳಿಯಲ್ಲಿ ಕೆಲಸಮಾಡಿಸಲು ಅವಕಾಶ ನೀಡುವ ಕಾನೂನು ತಿದ್ದುಪಡಿಗಳನ್ನು ವಾಪಸ್ ಪಡೆಯಲಿಲ್ಲ. ಹಮಾಲಿ, ಆಟೋ, ಮನೆಕೆಲಸ, ಬೀದಿಬದಿ ಮೊದಲಾದ ಅಸಂಘಟಿತ ಕಾರ್ಮಿಕರಿಗೆ ಕಲ್ಯಾಣ ಯೋಜನೆಗಳ ಜಾರಿಗೆ ಅಗತ್ಯವಿರುವ ಅನುದಾನವನ್ನು ನೀಡಲಿಲ್ಲ. ಅಂಗನವಾಡಿ, ಬಿಸಿಯೂಟ ಮುಂತಾದ ಸರ್ಕಾರಿ ಯೋಜನೆಗಳಲ್ಲಿ ಕೆಲಸಮಾಡುವ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಯಾವುದೇ ಕ್ರಮವಹಿಸಲಿಲ್ಲ ಎಂದು ಟೀಕಿಸಿದರು.ಮುಂಬರುವ ಬಜೆಟ್‌ನಲ್ಲಿ ಅಸಂಘಟಿತ 23 ವಲಯದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗಾಗಿ 500 ಕೋಟಿ ಹಣಕಾಸಿನ ನೆರವು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಮಹೇಶ ಹಿರೇಮಠ, ಗ್ರಾಪಂ ನೌಕರರ ಬಸವರಾಜ ಮಂತೂರ, ಮೈಬೂಬಸಾಬ ಹವಾಲ್ದಾರ, ನಿವೇದಿತಾ ಸಂಶಿ, ಶೇಖವ್ವ ಮುಂತಾದವರು ಹಾಜರಿದ್ದರು.