ಸಾರಾಂಶ
ಕಾರಟಗಿಯಲ್ಲಿ ಪೌರ ಕಾರ್ಮಿಕರ ದಿನಾಚರಣೆಗೆ ಚಾಲನೆ ನೀಡಿದ ಸಚಿವ
ಕನ್ನಡಪ್ರಭ ವಾರ್ತೆ ಕಾರಟಗಿ
ಯೋಧರು ದೇಶ ರಕ್ಷಣೆ ಮಾಡಿದರೆ, ಶಿಕ್ಷಕರು ಶಿಕ್ಷಣ ನೀಡುತ್ತಾರೆ. ಹಾಗೆಯೇ ನಗರ, ಪಟ್ಟಣವನ್ನು ಸ್ಪಚ್ಛವಾಗಿಟ್ಟು, ರೋಗ-ರುಜಿನಗಳಿಂದ ನಮ್ಮನ್ನು ಕಾಪಾಡುವ ಪೌರ ಕಾರ್ಮಿಕರು ಕೂಡಾ ಯೋಧರಿದ್ದಂತೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.ಇಲ್ಲಿನ ಪುರಸಭೆಯಿಂದ ಪದ್ಮಶ್ರೀ ಕನ್ವೆಷನ್ ಹಾಲ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪಟ್ಟಣದ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಿ ನಮ್ಮನ್ನೆಲ್ಲಾ ರೋಗ-ರುಜಿನಗಳಿಂದ ದೂರ ಇಡುವ ಪೌರ ಕಾರ್ಮಿಕರನ್ನು ಸಮಾಜ ನಿಷ್ಕೃಷ್ಟವಾಗಿ ಕಾಣುವುದನ್ನು ಬಿಡಬೇಕು. ರೈತರು, ಬೆಳೆ ಬೆಳೆದು ಅನ್ನ ನೀಡಿದರೆ, ಬೆಳ್ಳಂಬೆಳಗ್ಗೆಯೇ ಎದ್ದು ಚಳಿ-ಮಳೆ-ಗಾಳಿಗೆ ಎನ್ನದೆ ನಗರ ಪಟ್ಟಣದಲ್ಲಿ ಸ್ವಚ್ಛಗೊಳಿಸಿ ಸಾಂಕ್ರಾಮಿಕ ರೋಗಗಳಿಂದ ಜನರನ್ನು ರಕ್ಷಿಸುತ್ತಾರೆ ಎಂದರು.ಎಲ್ಲಿದೆ ಹೇಳಿ?:
ಪೌರ ಕಾರ್ಮಿಕರು ಸೇರಿದಂತೆ ಪಟ್ಟಣ ವಸತಿಹೀನರಿಗೆ ನಿವೇಶನಗಳನ್ನು ಕೊಡುವ ಇಚ್ಛೆ ಇದೆ. ಆದರೆ, ಇಲ್ಲಿ ಎಲ್ಲಿಯೂ ಸರ್ಕಾರಿ ಜಾಗ ಇಲ್ಲ. ಭೂಮಿ ಖರೀದಿಸೋಣ ಎಂದರೆ ಬಂಗಾರದ ಬೆಲೆ ಇದೆ. ಭೂಮಿಯನ್ನು ಕೊಡುವರ್‍ಯಾರು ಎಂದು ಪ್ರಶ್ನೆ ಮಾಡಿದರು.ಸರ್ಕಾರಿ ಕಚೇರಿ ಸ್ಥಾಪನೆಗೆ ಪಟ್ಟಣ ಮಧ್ಯೆ ಕೆರೆ ಪ್ರದೇಶವಿತ್ತು. ಆದರೆ, ರಾಜಕೀಯ ನುಸುಳಿದೆ. ಈಗ ಅಲ್ಲೂ ಏನಾದರೂ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸೋಣ ಎಂದರೆ, ಈ ಪ್ರದೇಶದಲ್ಲಿ ಏನು ಮಾಡುವಂತಿಲ್ಲ ಎಂದು ಅಧಿಕಾರಿಗಳು ಸುಪ್ರೀಂ ಕೋರ್ಟ್ ನಿರ್ದೇಶನ ತೋರಿಸುತ್ತಾರೆ ಎಂದು ಸಚಿವರು ಅಸಹಾಯಕತೆ ತೋರಿದರು.ಸಮಸ್ಯೆ ಎದುರಿಸುತ್ತಿದ್ದಾರೆ:
ಹೆಜ್ಜೆ ಮಹಿಳಾ ಸಂಘಟನೆಯ ಮುಖ್ಯಸ್ಥೆ ಡಾ. ಶಿಲ್ಪಾ ದಿವಟರ್ ವಿಶೇಷ ಉಪನ್ಯಾಸ ನೀಡಿ, ಪೌರ ಕಾರ್ಮಿಕ ವರ್ಗ ಶೋಷಿತ ವರ್ಗವಾಗಿದೆ. ನೈರ್ಮಲ್ಯದ ವಿರುದ್ಧ ಹೋರಾಡಿ ನಮ್ಮ ಆರೋಗ್ಯ ಕಾಪಾಡುವ ಪೌರ ಕಾರ್ಮಿಕರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಆಗಬೇಕು. ಪೌರ ಕಾರ್ಮಿಕರು ಹಲವು ಮೂಲ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮುಖ್ಯವಾಗಿ ಇವರಿಗೆ ನಿವೇಶನ, ಯೋಗ್ಯ ಸಂಬಳ, ಭತ್ಯೆಯನ್ನು ಸರ್ಕಾರ ಹೆಚ್ಚಿಸಬೇಕು. ಪೌರ ಕಾರ್ಮಿಕರ ಸೇವೆಯಿಂದಾಗಿ ಕಾರಟಗಿ ಪಟ್ಟಣ ಸ್ವಚ್ಛತೆ ಹೊಂದಿರುವ ಪಟ್ಟಣವಾಗಿದೆ ಎಂದು ಅವರ ಕಾರ್ಯಶಕ್ತಿಯನ್ನು ಶ್ಲಾಘಿಸಿದರು.ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸೂರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ಸುರೇಶ ಶೆಟ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಸಚಿವರು ಪೌರ ಕಾರ್ಮಿಕರನ್ನು ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ತಹಸೀಲ್ದಾರ್ ಎಂ. ಕುಮಾರಸ್ವಾಮಿ, ಉದ್ಯಮಿ ಎನ್. ಶ್ರೀನಿವಾಸ್, ಜಿ. ರಾಜು ದೇವಿಕ್ಯಾಂಪ್, ನೌಕರರ ಸಂಘದ ಅಧ್ಯಕ್ಷ ಸರ್ದಾರ ಅಲಿ, ಮುಖಂಡರಾದ ಮರಳ ಸಿದ್ದಯ್ಯಸ್ವಾಮಿ ಚೆನ್ನಬಸಪ್ಪ ಸುಂಕದ್, ಬೂದಿ ಗಿರಿಯಪ್ಪ, ಶಿವರೆಡ್ಡಿ ನಾಯಕ್, ಕೆ. ಸಿದ್ದನಗೌಡ, ಉಪಾಧ್ಯಕ್ಷೆ ದೇವಮ್ಮ ಚಲುವಾದಿ ಇದ್ದರು.