ದೇಶಕ್ಕೆ ರೈತ, ಯೋಧರಂತೆ ಸ್ವಚ್ಛತೆ ಮಾಡುವ ಪೌರ ಕಾರ್ಮಿಕರು ಮುಖ್ಯ: ಪಾರ್ಥಸಾರಥಿ

| Published : Nov 18 2024, 12:07 AM IST

ದೇಶಕ್ಕೆ ರೈತ, ಯೋಧರಂತೆ ಸ್ವಚ್ಛತೆ ಮಾಡುವ ಪೌರ ಕಾರ್ಮಿಕರು ಮುಖ್ಯ: ಪಾರ್ಥಸಾರಥಿ
Share this Article
  • FB
  • TW
  • Linkdin
  • Email

ಸಾರಾಂಶ

ಪೌರ ಕಾರ್ಮಿಕರು ಸಾಧ್ಯವಾದಷ್ಟು ರಕ್ಷಣಾ ಕವಚ ಬಳಸಿ ಸ್ವಚ್ಛತೆ ಮಾಡಬೇಕು. ಈ ವಿಚಾರದಲ್ಲಿ ಉದಾಸೀನತೆ ತೋರಬಾರದು. ಸಾರ್ವಜನಿಕರು ಕೂಡ ಪೌರ ಕಾರ್ಮಿಕರ ಜತೆ ಬೆರೆತು ತಮ್ಮ ಮಕ್ಕಳನ್ನು ಹೆಚ್ಚು ವಿದ್ಯಾವಂತರನ್ನಾಗಿ ಮಾಡಿ, ಉನ್ನತ ಹುದ್ದೆ ಪಡೆಯುವ ಕಡೆ ಗಮನಹರಿಸಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ದೇಶಕ್ಕೆ ಅನ್ನ ಕೊಡುವ ರೈತ, ರಕ್ಷಣೆ ನೀಡುವ ಯೋಧ ಎಷ್ಟು ಮುಖ್ಯನೋ ಸ್ವಚ್ಛತೆಯ ಕಾಯಕ ಮಾಡುವ ಪೌರ ಕಾರ್ಮಿಕರು ಅಷ್ಟೇ ಮುಖ್ಯ ಎಂದು ಪುರಸಭೆ ಸದಸ್ಯ ಪಾರ್ಥಸಾರಥಿ ಹೇಳಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಜ್ಯೋತಿ ಲಕ್ಷ್ಮೀ ಬಾಬು ಅಧ್ಯಕ್ಷತೆಯಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿ, ತಮ್ಮ ಆರೋಗ್ಯ ಲೆಕ್ಕಿಸದೆ ಪಟ್ಟಣದ ಸ್ವಚ್ಛತೆ ಕಾಯ್ದುಕೊಳ್ಳುವ ಪೌರ ಕಾರ್ಮಿಕರು ಮೊದಲ ಆದ್ಯತೆಯಾಗಿ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದರು.

ಪೌರ ಕಾರ್ಮಿಕರು ಸಾಧ್ಯವಾದಷ್ಟು ರಕ್ಷಣಾ ಕವಚ ಬಳಸಿ ಸ್ವಚ್ಛತೆ ಮಾಡಬೇಕು. ಈ ವಿಚಾರದಲ್ಲಿ ಉದಾಸೀನತೆ ತೋರಬಾರದು. ಸಾರ್ವಜನಿಕರು ಕೂಡ ಪೌರ ಕಾರ್ಮಿಕರ ಜತೆ ಬೆರೆತು ತಮ್ಮ ಮಕ್ಕಳನ್ನು ಹೆಚ್ಚು ವಿದ್ಯಾವಂತರನ್ನಾಗಿ ಮಾಡಿ, ಉನ್ನತ ಹುದ್ದೆ ಪಡೆಯುವ ಕಡೆ ಗಮನಹರಿಸಬೇಕು ಎಂದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಅನಿವಾರ್ಯ ಕಾರಣಗಳಿಂದ ಕಾರ್ಯಕ್ರಮಕ್ಕೆ ಆಗಮಿಸಿಲ್ಲ. ಅವರು ಕೂಡ ಪೌರ ಕಾರ್ಮಿಕರ ಸಮಸ್ಯೆಗಳಿಗೆ ಸದಸನದಲ್ಲಿ ಚರ್ಚೆ ಮಾಡಲಿದ್ದಾರೆ ಎಂದರು.

ಸದಸ್ಯ ಚಂದ್ರು ಮಾತನಾಡಿ, ಯಾವುದೇ ವಿದ್ಯಾಭ್ಯಾಸವಿಲ್ಲದೆ ಸುಲಭವಾಗಿ ಪಡೆಯಬಹುದಾದ ಅಧಿಕಾರ ಎಂದರೆ ಅದು ರಾಜಕೀಯ ಕ್ಷೇತ್ರವಾಗಿದೆ. ನಾವೆಲ್ಲರೂ ಗೆದ್ದು ಇಲ್ಲಿ ಅಧಿಕಾರದಲ್ಲಿದ್ದೇವೆ. ಅಧಿಕಾರಕ್ಕೆ ಬಂದವರು ಪೌರ ಕಾರ್ಮಿಕರನ್ನು ಉಳಿಸುವ ಕೆಲಸ ಮಾಡಬೇಕು ಎಂದರು.

ಈಗಾಗಲೇ ಪೌರ ಕಾರ್ಮಿಕರ ಕೆಲಸಕ್ಕೆ ಯಾರೂ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಇದರಿಂದ ಸಂಕಷ್ಟ ಎದುರಾಗುತ್ತದೆ. ದೇಶದಾದ್ಯಂತ ಕೊರೋನಾ ವ್ಯಾಪಿಸಿದಾಗ ಪೌರ ಕಾರ್ಮಿಕರು ಸೇನಾನಿಗಳಂತೆ ತಮ್ಮ ಜೀವದ ಹಂಗು ತೊರೆದು ಕ್ವಾರಂಟೈನ್‌ನಲ್ಲಿ ಕಟ್ಟಡಗಳನ್ನು ಸ್ವಚ್ಛಗೊಳಿಸಿದ್ದಾರೆ. ಅವರ ಸೇವೆ ಅನನ್ಯವಾಗಿದೆ ಎಂದು ಸ್ಮರಿಸಿದರು.ಪೌರ ಕಾರ್ಮಿಕರ ಮಕ್ಕಳಿಗೆ ಉಚಿತ ಉನ್ನತ ಶಿಕ್ಷಣ ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಕೊಡಿಸಲು ಸರ್ಕಾರ ಕಾಯ್ದೆ ತರಬೇಕು ಎಂದು ಒತ್ತಾಯಿಸಿದರು.

ಪುರಸಭೆ ಮುಖ್ಯಾಧಿಕಾರಿ ಸತೀಶ್‌ ಕುಮಾರ್ ಮಾತನಾಡಿ, ಪೌರ ಕಾರ್ಮಿಕರು ತಮ್ಮ ದಿನವನ್ನು ಹಬ್ಬದಂತೆ ಅರ್ಥಪೂರ್ಣವಾಗಿ ಆಚರಿಸಬೇಕು. ಕುಂದುಕೊರತೆ ಆಲಿಸಲು ಪ್ರತಿ ವಾರ ಅರ್ಧ ತಾಸು ನಿಗಧಿ ಪಡಿಸಿ ಕಾರ್ಮಿಕರ ಸಮಸ್ಯೆ ಆಲಿಸಲಾಗುವುದು. ಕಾರ್ಮಿಕರು ತಮ್ಮ ಮನದೊಳಗಿನ ಹಿಂಜರಿಕೆ ಸ್ವಭಾವ ಬಿಟ್ಟು ಎಲ್ಲಾ ಹಕ್ಕುಗಳನ್ನು ಕೇಳಿ ಪಡೆದುಕೊಳ್ಳಬೇಕು. ಅಗತ್ಯಗಳನ್ನು ಪೂರೈಸಿಕೊಳ್ಳಬೇಕು ಎಂದರು.

ಇದೇ ವೇಳೆ ಪೌರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕ್ರೀಡಾ ಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪೌರ ಕಾರ್ಮಿಕರು, ಪುರಸಭೆ ಡಿ ಗ್ರೂಪ್ ನೌಕರರು, ನೀರುಗಂಟಿಗಳು ಹಾಗೂ ಪುರಸಭೆ ನೌಕರ ವರ್ಗವನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಎಲ್ಲರಿಗೂ ಹೋಳಿಗೆ ಊಟ ಬಡಿಸಲಾಯಿತು.

ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷ ಎಲ್.ಅಶೋಕ್, ಸದಸ್ಯರಾದ ಆರ್,ಸೋಮಶೇಖರ್, ಉಮಾಶಂಕರ್, ಯಶವಂತ ಕುಮಾರ್, ಜಯಲಕ್ಚ್ಮಮ್ಮ, ಧನಲಕ್ಚ್ಮೀ, ಪುರಸಭೆ ಎಂಜಿನಿಯರ್‌ಗಳಾದ ಚೌಡಪ್ಪ, ಯಶಸ್ವಿನಿ, ಪರಿಸರ ಅಧೀಕ್ಷಕಿ ಶಫೀನಾಜ್ ಅಧಿಕಾರಿಗಳಾದ ಮಣಿಪ್ರಸಾದ್, ನಾಗೇಶ್, ಮಹೇಶ್, ಶ್ರೀನಾಥ್, ನರಸಿಂಹ, ಕೃಷ್ಣ, ಮಧು, ವನೀತಾ ಇತರರು ಇದ್ದರು.