ಸಾರಾಂಶ
ಹಳಿಯಾಳ: ಬಂಗಾರ ಯಾವುದು, ಬೆಳ್ಳಿ ಯಾವುದು ಹಾಗೂ ಮಣ್ಣು ಯಾವುದೆಂಬುದನ್ನು ಗುರುತಿಸುವ ಶಕ್ತಿ ಜನರಲ್ಲಿ ಇಲ್ಲದಿದ್ದರೆ ಕಷ್ಟ. ನನ್ನ ಭಾಗದ ಜನರು ಅಭಿವೃದ್ಧಿಪರ ಜನಪ್ರತಿನಿಧಿಯನ್ನು ಸರಿಯಾಗಿ ಗುರುತಿಸುತ್ತಿಲ್ಲ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.ಮಂಗಳವಾರ ತಾಲೂಕಿನ ಮುರ್ಕವಾಡ ಜಿಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಅಭಿವೃದ್ಧಿ ಮಾಡುವ ಜನಪರ ಕಾರ್ಯ ಮಾಡುವುದು ಹುಚ್ಚು ನನಗಿದೆ ಎಂದರು. ಶಿಲಾನ್ಯಾಸ ಮಾಡಿದ ಎಲ್ಲ ಕಾಮಗಾರಿಗಳು ಗುಣಮಟ್ಟದಿಂದ ನಡೆಯಬೇಕು. ನಿಗದಿತ ಅವಧಿಯಲ್ಲಿ ಮುಕ್ತಾಯಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ತಾಕೀತು ಮಾಡಿದರು.ಸಹಾಯ ಮಾಡಲು ನಾನು ಬೇಕು, ಕೆಲಸ ಮಾಡಲು ನಾನು ಬೇಕು, ಆದರೆ ಮತದಾನ ಮಾಡುವಾಗ ನನ್ನ ನೆನಪಾಗುವುದಿಲ್ಲ. ಇದು ಹೀಗೇಕೆ? ನನಗೆ ಜನ ಮತ ಹಾಕುವುದಿಲ್ಲ ಏಕೆ? ನಾನೇನು ತಪ್ಪು ಮಾಡಿದ್ದೇನೆ? ಬರುವ ಚುನಾವಣೆಯಲ್ಲಿ ಯಾರು ಒಳ್ಳೆಯವರು, ಯಾರು ಬಡವರ, ರೈತರ, ಶೋಷಿತರ ಪರವಾಗಿದ್ದಾರೆ, ಅಂಥವರನ್ನು ಜಾತಿ, ಧರ್ಮ ಲೆಕ್ಕಿಸದೇ ಬೆಂಬಲಿಸಿ ಎಂದು ಮನವಿ ಮಾಡಿದರು.
ನಾನು ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸಲು ಆರಂಭಿಸಿದರೆ ವಿರೋಧ ಮಾಡಿದರು. ನನ್ನ ಪ್ರತಿಮೆಯನ್ನು ಸುಟ್ಟು ಹಾಕಿದರು. ಆದರೂ ಪ್ರಯತ್ನ ಮತ್ತು ಜನರ ಸಹಕಾರದಿಂದ ಕಾರ್ಖಾನೆ ಪ್ರಾರಂಭವಾಯಿತು. ಇದರಿಂದ ಈ ಭಾಗದ ಅಭಿವೃದ್ಧಿಯಾಗಿರುವುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ ಎಂದರು.ವಿವಿಧೆಡೆ ಶಿಲಾನ್ಯಾಸ: ನಾಗಶೆಟ್ಟಿಕೊಪ್ಪ ಗ್ರಾಮದಲ್ಲಿ ಇಂದಿರಾಗಾಂಧಿ ವಸತಿ ಶಾಲೆ(ಪ.ವರ್ಗ) ನೂತನ ಕಟ್ಟಡ ₹22 ಕೋಟಿ, ಜೋಗನಕೊಪ್ಪದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ(ಪ.ಜಾ.) ನೂತನ ಕಟ್ಟಡ ₹22 ಕೋಟಿ, ಜನಗಾ ಕ್ರಾಸ್ ಬಳಿ ಮುಂಡಗೋಡ- ಅಣಶಿ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಕಾಮಗಾರಿ ₹2 ಕೋಟಿ, ಕೆಸರೊಳ್ಳಿ ಕ್ರಾಸ್ ಬಳಿ ರಸ್ತೆ ಅಭಿವೃದ್ಧಿ ಕಾಮಗಾರಿ ₹8 ಕೋಟಿ, ಹಳಿಯಾಳ ಬಸ್ ನಿಲ್ದಾಣದಲ್ಲಿ ಕಾಂಕ್ರಿಟ್ ನೆಲಹಾಸು ಕಾಮಗಾರಿ ₹1.20 ಕೋಟಿ ವೆಚ್ಚದ ಕಾಮಗಾರಿಗೆ ಶಿಲಾನ್ಯಾಸವನ್ನು ಶಾಸಕ ಆರ್.ವಿ. ದೇಶಪಾಂಡೆ ಅವರು ನೆರವೇರಿಸಿದರು.
ಗುತ್ತಿಗೆದಾರ ಸುಜಯಕುಮಾರ ಶೆಟ್ಟಿ, ಕ್ರೈಸ್ಟ್ ಮಂಡಳಿಯ ಎಇ ಚಂದ್ರಶೇಖರ, ಶಿವಶಂಕರ ಹರಿಸಿದ್ದಣ್ಣನವರ, ಲೋಕೋಪಯೋಗಿ ಇಲಾಖೆಯ ಎಇ ಸುಧಾಕರ ಕಟ್ಟಿಮನಿ, ಜೆಇ ಸಂಜು ಕುಲಕರ್ಣಿ, ಪುರಸಭಾ ನಾಮನಿರ್ದೇಶಿತ ಸದಸ್ಯ ರವಿ ತೋರಣಗಟ್ಟಿ, ಜಮೀರ್ ಅಹ್ಮದ ಶಿವಳ್ಳಿ, ಕಾಂಗ್ರೆಸ್ ಮುಖಂಡ ಸಂಜು ಮಿಶಾಳೆ, ನಂದಾ ಕೊರ್ವೆಕರ, ನಾಗಶೆಟ್ಟಿಕೊಪ್ಪ ಗ್ರಾಪಂ ಅಧ್ಯಕ್ಷ ಸುರೇಶ ಬಾವಕರ ಇತರರು ಇದ್ದರು.