ಖಾನಾಪುರಪಟ್ಟಣದ ಹೊರವಲಯದ ಗೋವಾ ಕ್ರಾಸ್‌ನಿಂದ ಮರಾಠಾ ಮಂಡಳ ಡಿಗ್ರಿ ಕಾಲೇಜುವರೆಗಿನ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ವಿಳಂಬ ಧೋರಣೆ ಮತ್ತು ಅಸಮರ್ಪಕ ಕಾಮಗಾರಿ ಖಂಡಿಸಿ ಪಟ್ಟಣ ಹಾಗೂ ಸುತ್ತಮುತ್ತಲಿನ ಭಾಗದ ನಾಗರಿಕರು, ವ್ಯಾಪಾರಸ್ಥರು, ಸಾರ್ವಜನಿಕರು ಗುರುವಾರ ಕರೆ ನೀಡಿದ್ದ ಖಾನಾಪುರ ಬಂದ್ ಸಂಪೂರ್ಣ ಯಶಸ್ವಿಯಾಯಿತು.
ಕನ್ನಡಪ್ರಭ ವಾರ್ತೆ ಖಾನಾಪುರ
ಪಟ್ಟಣದ ಹೊರವಲಯದ ಗೋವಾ ಕ್ರಾಸ್‌ನಿಂದ ಮರಾಠಾ ಮಂಡಳ ಡಿಗ್ರಿ ಕಾಲೇಜುವರೆಗಿನ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ವಿಳಂಬ ಧೋರಣೆ ಮತ್ತು ಅಸಮರ್ಪಕ ಕಾಮಗಾರಿ ಖಂಡಿಸಿ ಪಟ್ಟಣ ಹಾಗೂ ಸುತ್ತಮುತ್ತಲಿನ ಭಾಗದ ನಾಗರಿಕರು, ವ್ಯಾಪಾರಸ್ಥರು, ಸಾರ್ವಜನಿಕರು ಗುರುವಾರ ಕರೆ ನೀಡಿದ್ದ ಖಾನಾಪುರ ಬಂದ್ ಸಂಪೂರ್ಣ ಯಶಸ್ವಿಯಾಯಿತು.ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಶಿವಸ್ಮಾರಕ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ವ್ಯವಸ್ಥೆಯ ವಿರುದ್ಧ ಹರಿಹಾಯ್ದರು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಕಾಮಗಾರಿಯ ಗುತ್ತಿಗೆದಾರರ ಅಸಂಬದ್ಧ ಧೋರಣೆ ವಿರುದ್ಧ ಘೋಷಣೆಗಳನ್ನು ಕೂಗಿದರು.
ಬಂದ್ ಹಿನ್ನೆಲೆಯಲ್ಲಿ ಇಡೀ ದಿನ ಪಟ್ಟಣದಲ್ಲಿ ಎಲ್ಲ ರೀತಿಯ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿದ್ದವು. ಬಂದ್‌ಗೆ ಸ್ಥಳೀಯ ವ್ಯಾಪಾರಸ್ಥರು, ವಾಣಿಜ್ಯ ಉದ್ಯಮಿಗಳು, ವಿವಿಧ ಸಂಘ-ಸಂಸ್ಥೆಗಳು, ಹೋಟೆಲ್ ಮಾಲೀಕರು, ದಿನಸಿ ವರ್ತಕರು ಸೇರಿದಂತೆ ಹಲವರು ಬೆಂಬಲಿಸಿದ್ದರು. ಶಾಲಾ ಕಾಲೇಜುಗಳು, ವಾಣಿಜ್ಯ ಸಂಸ್ಥೆಗಳು, ಸರ್ಕಾರಿ ಕಚೇರಿಗಳು, ಆಸ್ಪತ್ರೆ ಮತ್ತು ಔಷಧ ಅಂಗಡಿಗಳು ಹೊರತುಪಡಿಸಿ ಉಳಿದ ಅಂಗಡಿಗಳು ಮುಚ್ಚಿದ್ದವು.ತಹಸೀಲ್ದಾರ್ ಕಚೇರಿ ಆವರಣದಲ್ಲಿ ಧರಣಿ ನಡೆಸಿದ ಪ್ರತಿಭಟನಾಕಾರರು ಮಾತನಾಡಿ, ಹೆದ್ದಾರಿ ಕಾಮಗಾರಿ ಕುಂಟುತ್ತ ಸಾಗುತ್ತಿದೆ. ಗುತ್ತಿಗೆದಾರರು ಅಲ್ಲಲ್ಲಿ ರಸ್ತೆ ಅಗೆದು ಸುಗಮ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ್ದಾರೆ. ಮೀನು ಮಾರುಕಟ್ಟೆ ಬಳಿ ಸೇತುವೆ ನಿರ್ಮಾಣದ ಕಾಮಗಾರಿಗಾಗಿ ರಸ್ತೆ ಅಗೆದ ಕಾರಣ ನಾಲ್ಕು ತಿಂಗಳಿಂದ ಈ ಮಾರ್ಗದಲ್ಲಿ ಬಸ್ ಸೇರಿದಂತೆ ವಾಹನ ಸಂಚಾರ ಸ್ಥಗಿತವಾಗಿದೆ. ಪರಿಣಾಮ ಖಾನಾಪುರ ಪಟ್ಟಣಕ್ಕೆ ಬರುವವರು, ಇಲ್ಲಿಂದ ಹೋಗುವವರು ಅನಿವಾರ್ಯವಾಗಿ ಸುತ್ತಿ ಬಳಸಿ ಸಂಚರಿಸಬೇಕಿದೆ ಎಂದು ಕಿಡಿಕಾರಿದರು.
ಪಟ್ಟಣದ ವ್ಯಾಪ್ತಿಯಲ್ಲಿ ಕಾಮಗಾರಿಯನ್ನು ಅರ್ಧಕ್ಕೆ ಕೈ ಬಿಟ್ಟು ಗಾಂಧಿನಗರ ವ್ಯಾಪ್ತಿಯಲ್ಲಿ ಕಾಮಗಾರಿಯನ್ನು ಆರಂಭಿಸಲಾಗಿದೆ. ಇದರಿಂದ ಡಿಗ್ರಿ ಕಾಲೇಜ್, ಕೋರ್ಟ್, ಹಲಕರ್ಣಿ ಮಾರ್ಗವಾಗಿ ಖಾನಾಪುರಕ್ಕೆ ಬರುವ ಮತ್ತು ಹೋಗುವ ಬಸ್ ಸಂಚಾರ ಸ್ಥಗಿತವಾಗಿ ಆ ಭಾಗದಲ್ಲೂ ತೀವ್ರ ಸಮಸ್ಯೆ ಉಂಟಾಗಿದೆ. ನಿರ್ವಹಣೆ ಕೊರತೆಯಿಂದ ಕಾಮಗಾರಿ ಸ್ಥಳದಲ್ಲಿ ಧೂಳು ನಿರ್ಮಾಣವಾಗುತ್ತಿದೆ. ಮಾರ್ಚ್ 10ರ ಒಳಗಾಗಿ ಒಂದು ಬದಿಯ ಕಾಮಗಾರಿಯನ್ನು ಪೂರ್ಣವಾಗಿ ಮುಗಿಸಿಕೊಡಬೇಕು ಎಂದರು.ಮೀನು ಮಾರುಕಟ್ಟೆ ಬಳಿ ಮುಖ್ಯ ರಸ್ತೆ ಕಾಮಗಾರಿಗೆ ಕಾನೂನು ಅಡಚಣೆ ಇದ್ದಲ್ಲಿ ಖಾನಾಪುರ ನಕಾಶೆಯಲ್ಲಿ ನಮೂದು ಇರುವ ನಾವಿ ರಸ್ತೆಯನ್ನು ನಿರ್ಮಿಸಿಕೊಡಬೇಕು. ಗೋವಾ ಕ್ರಾಸ್‌ನಿಂದ ಇದೇ ರಸ್ತೆ ಮೂಲಕ ಖಾನಾಪುರ ಬಸ್ ನಿಲ್ದಾಣದವರೆಗೆ ಮತ್ತು ಬಸ್ ನಿಲ್ದಾಣದಿಂದ ಗಾಂಧಿನಗರ, ಕೋರ್ಟ್ ಮಾರ್ಗವಾಗಿ ಬೆಳಗಾವಿ ಕಡೆಗೆ ಬಸ್ ಗಳು ಸಂಚರಿಸಲು ಅನುಕೂಲ ಮಾಡಿಕೊಡಬೇಕು. ಈ ಮಾರ್ಗದಲ್ಲಿ ಒಂದೇ ವೇಳೆ ಎರಡು ಭಾರೀ ಗಾತ್ರದ ವಾಹನಗಳು ದಾಟುವಂತೆ ಅನುವು ಮಾಡಿಕೊಡಬೇಕು. ಇದಕ್ಕೆ ತಪ್ಪಿದಲ್ಲಿ ಮಾ.11ರಿಂದ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ವಿವರಿಸಿ ತಹಸೀಲ್ದಾರ್ ಮೂಲಕ ವಿವಿಧ ಇಲಾಖೆಗಳಿಗೆ ಮತ್ತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿದ ಬಳಿಕ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಕುಳಿತು ಪ್ರತಿಭಟನೆ ಮುಂದುವರಿಸಿದ ಪ್ರತಿಭಟನಾಕಾರರನ್ನು ಭೇಟಿಯಾದ ತಹಸೀಲ್ದಾರ್ ದುಂಡಪ್ಪ ಕೋಮಾರ ಮತ್ತು ಪಪಂ ಮುಖ್ಯಾಧಿಕಾರಿ ಸಂತೋಷ ಕುರಬೆಟ್, ಒಂದು ವಾರದ ಒಳಗೆ ಒಂದು ಭಾಗದ ರಸ್ತೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವ ಬಗ್ಗೆ ಮತ್ತು ರಸ್ತೆಯ ವಿವಿಧೆಡೆ ಇರುವ ಅಡಚಣೆಗಳನ್ನು ದೂರಗೊಳಿಸುವ ಬಗ್ಗೆ ಲೋಕೋಪಯೋಗಿ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು.ತಹಸೀಲ್ದಾರ್ ಹಾಗೂ ಅಧಿಕಾರಿಗಳ ಜೊತೆ ಬಳಿಕ ಪ್ರತಿಭಟನಾಕಾರರು ಮೀನು ಮಾರುಕಟ್ಟೆ ಬಳಿಯ ಸ್ಥಗಿತಗೊಂಡಿದ್ದ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಮಧ್ಯಾಹ್ನದ ಬಳಿಕ ಶಾಸಕ ವಿಠ್ಠಲ ಹಲಗೇಕರ ಅಧಿಕಾರಿಗಳ ಸಭೆ ನಡೆಸಿ ಈ ವಿಷಯವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸೂಚನೆ ನೀಡಿದರು. ಶಾಸಕರು ಮತ್ತು ತಹಸೀಲ್ದಾರರಿಂದ ಕಾಮಗಾರಿಗೆ ಇರುವ ಅಡಚಣೆಗಳನ್ನು ದೂರಗೊಳಿಸುವ ಭರವಸೆ ಸಿಕ್ಕ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದರು.
ಈ ಸಂದರ್ಭದಲ್ಲಿ ಮಹಾಂತೇಶ ರಾಹೂತ, ಚಂದ್ರು ಹೊಸಮನಿ, ಶಿವಶಂಕರ ಕಟ್ಟಿಮನಿ, ಆದರ್ಶ ರಾಹೂತ, ವಿನೋದ ಉಂಡಿ, ಪ್ರದೀಪ ಶೆಟ್ಟಿ, ಲೋಕೇಶ ಕಲಬುರ್ಗಿ, ಮಲ್ಲೇಶಿ ಪೋಳ ಸೇರಿದಂತೆ ನಾಗರಿಕರು, ವ್ಯಾಪಾರಸ್ಥರು ಹಾಗೂ ಸ್ಥಳೀಯರು ಇದ್ದರು.