ಸಿಐಟಿಯು ಅಕ್ಷರ ದಾಸೋಹ ನೌಕರರ ಸಂಘ ಪ್ರತಿಭಟನೆ

| Published : Dec 20 2024, 12:46 AM IST

ಸಾರಾಂಶ

ಸಿಐಟಿಯು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪುತ್ತೂರು, ಬೆಳ್ತಂಗಡಿ ಕಡಬ ತಾಲೂಕುಗಳ ಅಕ್ಷರ ದಾಸೋಹ ನೌಕರರ ಸಂಘದ ಸದಸ್ಯರು ಪಾಲ್ಗೊಂಡಿದ್ದರು. ಪ್ರತಿಭಟನೆಯ ಬಳಿಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ವಿಧಾನಸಭೆಯ ಕಲಾಪದಲ್ಲಿ ಪರಸ್ಪರದ ದೋಷಾರೋಪಣೆ ಮಾಡುವ ಜನಪ್ರತಿನಿಧಿಗಳು ಅದನ್ನು ಬಿಟ್ಟು ಅಲ್ಪಸಂಬಳದಲ್ಲಿ ದುಡಿಯುವ ಬಿಸಿಯೂಟದ ತಾಯಂದಿರ ಬದುಕಿನ ಬಗ್ಗೆ ಮಾತನಾಡಿ ಎಂದು ಸಿಐಟಿಯು ಮುಖಂಡ ಬಿ.ಎಂ. ಭಟ್ ಆಗ್ರಹಿಸಿದರು. ಅವರು ಗುರುವಾರ ಪುತ್ತೂರು ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿರುವ ಅಮರ್ ಜವಾಜ್ ಜ್ಯೋತಿ ಬಳಿಯಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಪುತ್ತೂರು ಉಪವಿಭಾಗ ಸಮಿತಿಯ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಬಿಸಿಯೂಟದವರಿಗೆ ೬ ಸಾವಿರ ರು. ನೀಡುವ ಭರವಸೆ ನೀಡಿದ್ದರು. ಆದರೆ ಈ ತನಕ ಅದನ್ನು ಜಾರಿಗೊಳಿಸಿಲ್ಲ. ಕೇಂದ್ರ ಸರಕಾರ ಒಮ್ಮೆಯೂ ನಯಾ ಪೈಸೆ ಏರಿಕೆ ಮಾಡಿಲ್ಲ. ಬಿಸಿಯೂಟ ನೌಕರರಿಗೆ ನೀಡುತ್ತಿರುವ ೩ ಸಾವಿರ ವೇತನದಲ್ಲಿ ಜನಪ್ರತಿನಿಧಿಗಳು ಒಂದು ತಿಂಗಳು ಜೀವನ ಸಾಗಿಸಿ ತೋರಿಸಲಿ ಎಂದರು. ಸಿಐಟಿಯು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪುತ್ತೂರು, ಬೆಳ್ತಂಗಡಿ ಕಡಬ ತಾಲೂಕುಗಳ ಅಕ್ಷರ ದಾಸೋಹ ನೌಕರರ ಸಂಘದ ಸದಸ್ಯರು ಪಾಲ್ಗೊಂಡಿದ್ದರು. ಪ್ರತಿಭಟನೆಯ ಬಳಿಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಸಿಐಟಿಯು ತಾಲೂಕು ಕಾರ್ಯದರ್ಶಿ ನ್ಯಾಯವಾದಿ ಪಿ.ಕೆ. ಸತೀಶನ್, ಅಕ್ಷರದಾಸೋಹ ನೌಕರರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷೆ ಲತಾ ಎಕ್ಕಡ್ಕ, ಕಾರ್ಯದರ್ಶಿ ರಂಜಿತಾ ಕೋಡಿಂಬಾಡಿ, ಸಂಘಟಕಿ ಲೀಲಾವತಿ ಕೆ., ಬೆಳ್ತಂಗಡಿ ತಾಲೂಕು ಅಧ್ಯಕ್ಷೆ ಜೋನ್ಸಿ, ಕಾರ್ಯದರ್ಶಿ ಗೀತಾ, ಸಂಘಟಕಿ ಮೀನಾಕ್ಷಿ, ಕಡಬ ತಾಲೂಕು ಅಧ್ಯಕ್ಷೆ ರೇವತಿ, ಕಾರ್ಯದರ್ಶಿ ಸುಲೋಚನಾ ಕುಂತೂರು, ಸಂಘಟಕಿ ಹೇಮಾವತಿ ಸಹಿತ ಹಲವಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.