ಸಾರಾಂಶ
ಚಳ್ಳಕೆರೆ ನಗರದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಶುಕ್ರವಾರ ಸಿಐಟಿಯು ಕಾರ್ಮಿಕ ಸಂಘಟನೆ ಕಾರ್ಯಕರ್ತರು ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಎನ್‌ಡಿಎ ಮೈತ್ರಿಕೂಟದ ಸರ್ಕಾರದ ಪ್ರಧಾನಮಂತ್ರಿ ನರೇಂದ್ರ ಮೋದಿ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿ ಮತ್ತೊಮ್ಮೆ ಅಧಿಕಾರ ಬರುವ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಆದರೆ, ಚುನಾವಣೆ ಸಂದರ್ಭದಲ್ಲಿ ಅವರು ನೀಡಿದ ಭರವಸೆಗಳು ಯಾವುದು ಈಡೇರಿಲ್ಲ. ರೈತ ಕಾರ್ಮಿಕರ ಸಮಸ್ಯೆ ಬಗೆಹರಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ತಾಲ್ಲೂಕು ಅಧ್ಯಕ್ಷ ಟಿ.ನಿಂಗಣ್ಣ ಆರೋಪಿಸಿದ್ದಾರೆ.ಅವರು, ಶುಕ್ರವಾರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ತಹಶೀಲ್ದಾರ್‌ಗೆ ಮನವಿ ಅರ್ಪಿಸಿ ಮಾತನಾಡಿದರು. ಈ ಹಿಂದೆ ಎನ್‌ಡಿಎ ಅಧಿಕಾರಕ್ಕೆ ಬರುವ ಮುನ್ನ ಪ್ರಧಾನಮಂತ್ರಿ ನರೇಂದ್ರಮೋದಿ ಎರಡು ಕೋಟಿ ಉದ್ಯೋಗಗಳ ಸೃಷ್ಠಿ ರಾಷ್ಟçದ ಪ್ರತಿಯೊಬ್ಬರ ಉಳಿತಾಯ ಖಾತೆಗೆ ೧೫ಲಕ್ಷ ಹಣ, ರೈತರ ಬೆಳೆಗೆ ಬೆಂಬಲ ನೀಡುವ ಡಾ.ಸ್ವಾಮಿನಾಥನ್ ವರದಿಜಾರಿ ಮಾಡುವ ಭರವಸೆ ನೀಡಿದ್ದರು. ಆದರೆ ಯಾವುದೂ ಈಡೇರಿಲ್ಲ. ಈಗಲು ಸಹ ಕಾರ್ಮಿಕರು ಕೇಂದ್ರ ಸರ್ಕಾರದಿಂದ ಯಾವುದೇ ಸೌಲಭ್ಯ ದೊರೆಯದೆ ಅತಂತ್ರವಾದ್ಧಾರೆ. ತಮ್ಮ ನ್ಯಾಯುತವಾದ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ಧಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸಂಘದ ಕರೆಯ ಮೇಲೆ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ನೀಡಲಾಯಿತು ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ಧಾರ್ ರೇಹಾನ್ ಪಾಷ, ಕಾರ್ಮಿಕರ ಬೇಡಿಕೆ ಈಡೇರಿಕೆ ಕುರಿತಂತೆ ನೀವು ಸಲ್ಲಿಸಿದ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ಕಳಿಸಿಕೊಡುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಟಿ.ತಿಪ್ಫೇಸ್ವಾಮಿ, ಉಪಾಧ್ಯಕ್ಷ ದುಗ್ಗಾವರಪಾಲಯ್ಯ, ಈ.ನಾಗರಾಜ, ಇಂದಿರಮ್ಮ, ಜಿ.ಎನ್.ಗಂಗಮ್ಮ, ಸಹ ಕಾರ್ಯದರ್ಶಿ ಬಿ.ಬೋರಮ್ಮ, ಖಜಾಂಚಿ ಎಚ್.ಒ.ನಾಗರಾಜು ಮುಂತಾದವರು ಉಪಸ್ಥಿತರಿದ್ದರು.