ಅಮಿತ್ ಶಾ ಅವಹೇಳನಕಾರಿ ಹೇಳಿಕೆ ಖಂಡಿಸಿ ಸಿಐಟಿಯು ಪ್ರತಿಭಟನೆ

| Published : Dec 26 2024, 01:00 AM IST

ಸಾರಾಂಶ

ಸಂವಿಧಾನದ ನೀತಿ ನಿಯಮದ ಪರಿಪಾಲಕರಾಗಿರಬೇಕಾದ ಕೇಂದ್ರ ಸಚಿವ ಅಮಿತ್ ಶಾ ಅಂಬೇಡ್ಕರ್ ವಿರುದ್ಧ ಅಗೌರವದ ಅವಹೇಳನಕಾರಿ ಹೇಳಿಕೆ ನೀಡಿರುವುದು ಸರಿಯಲ್ಲ.

ಕೂಡ್ಲಿಗಿ: ಸಂವಿಧಾನದ ನೀತಿ ನಿಯಮದ ಪರಿಪಾಲಕರಾಗಿರಬೇಕಾದ ಕೇಂದ್ರ ಸಚಿವ ಅಮಿತ್ ಶಾ ಅಂಬೇಡ್ಕರ್ ವಿರುದ್ಧ ಅಗೌರವದ ಅವಹೇಳನಕಾರಿ ಹೇಳಿಕೆ ನೀಡಿರುವುದು ಸರಿಯಲ್ಲ. ಸರ್ಕಾರದ ಉನ್ನತ ಸ್ಥಾನದಲ್ಲಿರುವ ಅಮಿತ್ ಶಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಿಐಟಿಯು ತಾಲೂಕು ಕಾರ್ಯದರ್ಶಿ ಗುನ್ನಳ್ಳಿ ರಾಘವೇಂದ್ರ ಒತ್ತಾಯಿಸಿದರು.

ಅವರು ಪಟ್ಟಣದ ಮದಕರಿ ವೃತ್ತದಲ್ಲಿ ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಸಿಐಟಿಯು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ನೇತೃತ್ವ ವಹಿಸಿ ಮಾತನಾಡಿದರು.

ದೇಶ ಹಾಗೂ ರಾಜ್ಯ ಆಳುವ ಯಾವುದೇ ಸರ್ಕಾರಗಳಿರಲಿ ದೇಶದ ಘನತೆ ಕಾಪಾಡುವ ಸಂವಿಧಾನ ರಚನೆ ಮಾಡಿದ ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಪರಿಪಾಲಿಸಿ ಅವರು ರಚಿಸಿದ ಸಂವಿಧಾನಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕಾಗಿದೆ. ಅದನ್ನು ಬಿಟ್ಟು ದೇಶದ ಸಂವಿಧಾನವನ್ನೇ ಬದಲಿಸುವ ನಿರ್ಧಾರವನ್ನು ಕೈ ಬಿಡಬೇಕು. ಅಮಿತ್ ಶಾ ಅವರೇ ನಿಮ್ಮ ಸರ್ಕಾರದ 15 ವರ್ಷಗಳ ಸಾಧನೆ ಏನು? ನ್ಯಾಯ ಕೇಳಲು ಬಂದ ಅನ್ನದಾತರ ಮೇಲೆ ಹಲ್ಲೆ, ಸಂವಿಧಾನ ತಿದ್ದುಪಡಿ ಮಾಡುವ ಹೇಳಿಕೆಗಳು, ಸಂವಿಧಾನ ರಚಿಸಿದ ಮಹಾನುಭಾವರ ಮೇಲೆ ಅಗೌರವದ ಹೇಳಿಕೆ ನೀಡುವುದೇ ನಿಮ್ಮ ಅಚ್ಚೇ ದಿನ್ ಅಂದುಕೊಂಡಿದ್ದೀರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಐಟಿಯು ರಾಜ್ಯ ಉಪಾಧ್ಯಕ್ಷ ಆರ್.ಎಸ್. ಬಸವರಾಜ್ ಮಾತನಾಡಿ, ಅಂಬೇಡ್ಕರ್ ದೇಶದಲ್ಲಿ ಕಂಡುಂಡ ಅವಮಾನ, ಅವರು ಶಿಕ್ಷಣ ಪಡೆಯಲು ನಡೆಸಿದ ಹೋರಾಟ ಅನನ್ಯ. ದೇಶದ ಸಂವಿಧಾನಕ್ಕೆ ಗೌರವ ಕೊಡುವ ಉನ್ನತ ಸ್ಥಾನದಲ್ಲಿರುವ ಮಂತ್ರಿ ಬಾಯಲ್ಲಿ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಅಗೌರವದ ನುಡಿ ಶೋಭೆ ತರುವಂತದಲ್ಲ. ನಾಲಿಗೆ ಮೇಲೆ ಹಿಡಿತವಿಟ್ಟುಕೊಂಡು ಮಾತನಾಡಲಿ. ಇಲ್ಲವಾದರೆ ಸಚಿವ ಸ್ಥಾನ ನೀಡುವ ಜೊತೆಗೆ ದೇಶದ ಜನತೆಯೆದುರು ಕ್ಷಮೆಯಾಚಿಸಲಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ತಾಲೂಕು ಅಧ್ಯಕ್ಷೆ ಭಾಗ್ಯಮ್ಮ, ಮಾಜಿ ಯೋಧ ರಮೇಶ ಸೇರಿದಂತೆ ಇತರರಿದ್ದರು.

ಕೂಡ್ಲಿಗಿ ಪಟ್ಟಣದ ಮದಕರಿ ವೃತ್ತದಲ್ಲಿ ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಸಿಐಟಿಯು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಗುನ್ನಳ್ಳಿ ರಾಘವೇಂದ್ರ ನೇತೃತ್ವ ವಹಿಸಿ ಮಾತನಾಡುತ್ತಿದ್ದರು.