ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯ ಸರ್ಕಾರದ ಮುಂದಿರುವ ಕಾರ್ಮಿಕ ವಿರೋಧಿ ತಿದ್ದುಪಡಿ ಪ್ರಸ್ತಾಪಗಳನ್ನು ವಿರೋಧಿಸಿ ಹಾಗೂ ದುಡಿಯುವ ಜನರ ಹಕ್ಕುಗಳ ರಕ್ಷಣೆಗೆ ಆಗ್ರಹಿಸಿ ಸಿಐಟಿಯು ಜಿಲ್ಲಾ ಸಮಿತಿಯವರು ಕುವೆಂಪುನಗರದಲ್ಲಿರುವ ಕಾರ್ಮಿಕ ಇಲಾಖೆಯ ಕಚೇರಿ ಮುಂಭಾಗದಲ್ಲಿ ಗುರುವಾರ ಪ್ರತಿಭಟಿಸಿದರು.ರಾಜ್ಯ ಸರ್ಕಾರವು ಕಾರ್ಪೊರೇಟ್ ಬಂಡವಾಳಶಾಹಿ ಪರವಾಗಿ ನಿಯಮಗಳನ್ನು ಬದಲಾಯಿಸುತ್ತಿರುವುದು ಅಪಾಯಕಾರಿ. ಕೆಲಸದ ಅವಧಿಯನ್ನು 12 ಗಂಟೆಗೆ ಹೆಚ್ಚಿಸಲು ಮುಂದಾಗಿರುವುದು ಕಾರ್ಮಿಕ ವಿರೋಧಿ ನಡೆ. ಇದರಿಂದ ಕಾರ್ಮಿಕರ ಮೇಲಿನ ಒತ್ತಡ ಹೆಚ್ಚುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಅಪಾಯಕಾರಿ ಕೆಲಸಗಳಲ್ಲಿ ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ದುಡಿಸಿಕೊಳ್ಳಲು ಅನುಕೂಲವಾಗುವ ರೀತಿಯ ಬದಲಾವಣೆ ತರಲು ಸರ್ಕಾರ ನಿರ್ಧರಿಸಿರುವುದು ಆತಂಕಕಾರಿ ಬೆಳವಣಿಗೆ. ಇದನ್ನು ಕಾರ್ಮಿಕ ಸಂಘಟನೆಗಳು ಖಂಡಿಸುತ್ತಿದ್ದು, ಕಾರ್ಮಿಕರ ಪರವಾಗಿ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಕಾರ್ಪೊರೇಟ್ ವ್ಯವಸ್ಥೆಯಲ್ಲಿ ಕಾರ್ಮಿಕರನ್ನು ಕಡೆಗಣಿಸಲಾಗುತ್ತಿದೆ. ರಾಜ್ಯದಲ್ಲಿ ಈ ವ್ಯವಸ್ಥೆ ಬಂದರೆ, ಕಾರ್ಮಿಕ ಮತ್ತಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ. ಸರ್ಕಾರವು ತನ್ನ ನಿರ್ಧಾರದ ಬಗ್ಗೆ ಪುನರ್ ಪರಿಶೀಲಿಸಬೇಕು. ಬೇಡಿಕೆ ಈಡೇರದಿದ್ದರೆ ರಾಜ್ಯಾದ್ಯಂತ ಹೋರಾಟ ಸಂಘಟಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಜಿ. ಜಯರಾಮ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಕೆ. ಬಾಲಾಜಿ ರಾವ್, ಮುಖಂಡರಾದ ಎಚ್.ಎಸ್. ಜಗದೀಶ್, ಎಂ. ಅಣ್ಣಪ್ಪ, ಮಹದೇವ, ರಾಘವೇಂದ್ರ, ಸುಬ್ರಹ್ಮಣ್ಯ ಮೊದಲಾದವರು ಇದ್ದರು.252 ಪೌರಕಾರ್ಮಿಕರಿಗೆ ಕಾಯಂ ನೇಮಕಾತಿ ಪತ್ರ ವಿತರಣೆ: ಅಭಿನಂದನೆ
ಮೈಸೂರು: ಕಳೆದ 15- 20 ವರ್ಷಗಳಿಂದ ಮೈಸೂರು ಮಹಾ ನಗರ ಪಾಲಿಕೆಯಲ್ಲಿ ನೇರ ಪಾವತಿ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಒಟ್ಟು 252 ಪೌರಕಾರ್ಮಿಕರಿಗೆ ಕಾಯಂ ನೇಮಕಾತಿ ಪತ್ರ ವಿತರಿಸುತ್ತಿರುವುದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಾ.ಎಚ್.ಸಿ. ಮಹದೇವಪ್ಪ ಹಾಗೂ ಶಾಸಕ ತನ್ವೀರ್ ಸೇಠ್ ಅವರಿಗೆ ಮೈಸೂರು ನಗರ ಪಾಲಿಕೆ ಕಾಯಂ ಪೌರಕಾರ್ಮಿಕರ ಹಾಗೂ ಗುತ್ತಿಗೆದಾರ ಪೌರಕಾರ್ಮಿಕರ ಮಹಾಸಂಘದ ಉನ್ನತ ಸಮಿತಿ ಅಧ್ಯಕ್ಷ ಎನ್. ಮಾರ ಅಭಿನಂದನೆ ಸಲ್ಲಿಸಿದರು.ಈಗಾಗಲೇ ನೇರ ಪಾವತಿ ಅಡಿಯಲ್ಲಿ ಕೆಲಸ ನಿರ್ವಹಿಸಿ ಮೃತಪಟ್ಟ ಸುಮಾರು 89 ಪೌರಕಾರ್ಮಿಕರ ಕುಟುಂಬದ ಒಬ್ಬರಿಗೆ ಪಾಲಿಕೆಯಿಂದ ಕೆಲಸ ನೀಡಬೇಕು. 10 ಲಕ್ಷ ಪರಿಹಾರ ನೀಡಬೇಕು. ಪಾಲಿಕೆಯಲ್ಲಿ ಕಾಯಂ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ 156 ಮಂದಿಗೆ ಕೆಸರೆಯಲ್ಲಿ ಮನೆಗಳನ್ನು ನಿರ್ಮಿಸಲಾಗಿದ್ದು, ಇವುಗಳನ್ನು ಹಂಚಿಕೆ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಸಂಘದ ಪದಾಧಿಕಾರಿಗಳಾದ ನರಸಿಂಹ, ಮಾದೇವ, ಶ್ರೀನಿವಾಸ್, ಎಂ. ವಡಿವೇಲು, ಜಿ. ಮುರುಗೇಶ್ ಮೊದಲಾದವರು ಇದ್ದರು.