ಕೇಂದ್ರ ಸರ್ಕಾರ ಏಕಾಏಕಿ ಕಾರ್ಮಿಕ ಸಂಹಿತೆ ಜಾರಿಗೊಳಿಸಿದೆ ಎಂದು ಆರೋಪಿಸಿ ದಾವಣಗೆರೆ ಜಿಲ್ಲಾ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಸಂಘ (ಸಿಐಟಿಯು) ನೇತೃತ್ವದಲ್ಲಿ ಔಷಧ ಮಾರಾಟ ಪ್ರತಿನಿಧಿಗಳು, ಮುಖಂಡರು ಉಪ ವಿಭಾಗಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದ್ದಾರೆ.

ದಾವಣಗೆರೆ: ಕೇಂದ್ರ ಸರ್ಕಾರ ಏಕಾಏಕಿ ಕಾರ್ಮಿಕ ಸಂಹಿತೆ ಜಾರಿಗೊಳಿಸಿದೆ ಎಂದು ಆರೋಪಿಸಿ ದಾವಣಗೆರೆ ಜಿಲ್ಲಾ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಸಂಘ (ಸಿಐಟಿಯು) ನೇತೃತ್ವದಲ್ಲಿ ಔಷಧ ಮಾರಾಟ ಪ್ರತಿನಿಧಿಗಳು, ಮುಖಂಡರು ಉಪ ವಿಭಾಗಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಮುಖಂಡರು ಮಾತನಾಡಿ, ದೇಶದ್ಯಾಂತ ಕೋಟ್ಯಂತರ ಕಾರ್ಮಿಕರ ಕಲ್ಯಾಣಕ್ಕಾಗಿ ಜಾರಿಯಲ್ಲಿದ್ದ ಎಸ್‌ಇಪಿ-1976 ಕಾಯ್ದೆಯ ಬದಲಿಗೆ ಕೇಂದ್ರ ಸರ್ಕಾರ ಬಂಡವಾಳಶಾಹಿ, ಮಾಲಿಕರ ಪರವಾದ ಕಾರ್ಮಿಕ ಸಂಹಿತೆ ಜಾರಿಗೊಳಿಸಿರುವುದು ಅತ್ಯಂತ ಖಂಡನೀಯ. ಕೇಂದ್ರ ಸರ್ಕಾರ ಕಾರ್ಮಿಕ ಸಂಹಿತೆ ಹಿಂಪಡೆದು, ಎಸ್‌ಇಪಿ-1976 ಕಾಯ್ದೆ ಇನ್ನಷ್ಟು ಸದೃಢಗೊಳಿಸಬೇಕು ಎಂದು ಅಗ್ರಹಿಸಿದರು.

ಔಷಧ ಮತ್ತು ಮಾರಾಟ ಪ್ರತಿನಿಧಿಗಳ ರಕ್ಷಣೆಗೆ ಇದ್ದಂತಹ ಟ್ರೇಡ್ ಯೂನಿಯನ್ ಅಧಿನಿಯಮ, 1926, ಕೈಗಾರಿಕಾ ವಿವಾದ ಅದಿನಿಯಮ1947 ಮತ್ತು ಮಾರಾಟ ಪ್ರತಿನಿಧಿಗಳ (ಸರ್ವಿಸ್ ಕಂಡಿಶನ್ಸ್) ಅಧಿನಿಯಮ, 1976 (ಎಸ್‌ಪಿಇ ಅಧಿನಿಯಮ) ಸೇರಿದಂತೆ 29 ಅಸ್ತಿತ್ವದಲ್ಲಿರುವ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿದೆ. ದೀರ್ಘ ಕಾಲದಿಂದ ಕಾರ್ಮಿಕರ ರಕ್ಷಣೆಗೆ ಕಾನೂನುಗಳನ್ನು ರದ್ಧುಗೊಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕ ಕಾನೂನುಗಳನ್ನ ಬಲಪಡಿಸುವ ಬದಲು ದುರ್ಬಲಗೊಳಿಸಲು, ಸಾಮೂಹಿಕ ಚೌಕಾಸಿಯ ಹಕ್ಕುಗಳನ್ನು ಕುಗ್ಗಿಸಲು ಮತ್ತು ಮಾಲೀಕರ ಪಾಲಿಗೆ ಭಾರಿ ಅನುಕೂಲ ಆಗುವಂತೆ ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿಯೇ ಕಾರ್ಮಿಕ ವಿರೋಧಿ ನಾಲ್ಕು ಕಾರ್ಮಿಕ ಸಂಹಿತೆ ಜಾರಿಗೆ ತರುವ ಪ್ರಯತ್ನ ಮಾಡುತ್ತಿದೆ. ಕೂಡಲೇ ಕಾರ್ಮಿಕ ಸಂಹಿತೆ ರದ್ದುಪಡಿಸಿ, ಈಗಾಗಲೇ ಜಾರಿಯಲ್ಲಿರುವ ಕಾರ್ಮಿಕ ಪರವಾದ ಕಾನೂನುಗಳನ್ನು ಸಬಲಗೊಳಿಸಬೇಕು. ಆ ಮೂಲಕ ಶ್ರಮಿಕ ವರ್ಗಕ್ಕೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರೀಯ ಟ್ರೇಡ್ ಯೂನಿಯನ್‌ಗಳು, ಸ್ವತಂತ್ರ ಕೈಗಾರಿಕಾ ಫೆಡರೇಶನ್ ಮತ್ತು ದೇಶದ ಲಕ್ಷಾಂತರ ಕಾರ್ಮಿಕರ ವ್ಯಾಪಕ ವಿರೋಧ ಇದ್ದರೂ ಕೇಂದ್ರದಲ್ಲಿರುವ ಮೋದಿ ಸರ್ಕಾರ ಕಳೆದ ನ.21ರಿಂದ ಏಕಪಕ್ಷೀಯವಾಗಿ 4 ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದೆ. ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳ ಪ್ರತಿಗಳನ್ನು ದೇಶಾದ್ಯಂತ ಕಾರ್ಮಿಕ ಸಂಘಟನೆಗಳು ಸುಟ್ಟುಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರೂ ಜಾರಿಗೆ ತಂದಿರುವುದು ಕಾರ್ಮಿಕ, ಶ್ರಮಿಕ ವರ್ಗದ ವಿರೋಧಿ ನೀತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣಾ ಬಾಂಡ್ ಹೆಸರಲ್ಲಿ ಸಾವಿರಾರು ಕೋಟಿ ಹಣ ಪಡೆದ ಕೇಂದ್ರದಲ್ಲಿ ಆಡಳಿತ ಮಾಡುತ್ತಿರುವ ಬಿಜೆಪಿ ಸರ್ಕಾರವು ಕಾರ್ಪೋರೇಟ್ ಕಂಪನಿಗಳ ಋಣ ತೀರಿಸುವ ಸಲುವಾಗಿಯೇ ಕಾರ್ಮಿಕ ವಿರೋಧಿ ಸಂಹಿತೆಗಳನ್ನು ವಾಪಸ್ ಪಡೆಯುತ್ತಿಲ್ಲ. ಹಾಗಾಗಿ ಎಫ್‌ಎಂಆರ್‌ಎಐ ಹೋರಾಟವನ್ನು ದೇಶವ್ಯಾಪಿ ತೀವ್ರಗೊಳಿಸಿದೆ ಎಂದರು.

ಪ್ರತಿಭಟನೆಯಲ್ಲಿ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಕೆ.ಎಚ್. ಆನಂದರಾಜ, ಟಿ.ಶ್ರೀಧರ್, ರಹಮತ್, ಎಂ.ವೆಂಕಟೇಶ, ಪ್ರವೀಣ್, ಪ್ರಶಾಂತ್, ಗುರುರಾಜ್, ಶಶಿಧರ, ಅರುಣ, ಜಗದೀಶ ಇತರರು ಇದ್ದರು.

- - -

-17ಕೆಡಿವಿಜಿ34:

ಕೇಂದ್ರ ಸರ್ಕಾರ ಏಕಾಏಕಿ ಕಾರ್ಮಿಕ ಸಂಹಿತೆ ಜಾರಿಗೊಳಿಸಿದೆ ಎಂದು ಆರೋಪಿಸಿ ದಾವಣಗೆರೆಯಲ್ಲಿ ಬುಧವಾರ ಸಿಐಟಿಯು ನೇತೃತ್ವದಲ್ಲಿ ಎಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.