ರಾಜ್ಯದಲ್ಲಿ ಸುಮಾರು 27 ಲಕ್ಷ ಕುಟುಂಬಗಳಿಗೆ ಸ್ವಂತ ಸೂರು ಇಲ್ಲ. ಅಂತಹವರಿಗೆ ಸರ್ಕಾರದಿಂದ ಸೂರು ಕಲ್ಪಿಸುವಂತೆ ಹೋರಾಟಗಳ ಯೋಜನೆ ರೂಪಿಸಲಾಗುವುದು ಎಂದು ಸಿಪಿಐ ರಾಜ್ಯಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್ ಹೇಳಿದ್ದಾರೆ.
- ಸಿಪಿಐ ಶತಮಾನೋತ್ಸವ ಜಾಥಾ, ಬಹಿರಂಗ ಸಭೆಯಲ್ಲಿ ಸಾತಿ ಸುಂದರೇಶ್
- - -ಕನ್ನಡಪ್ರಭ ವಾರ್ತೆ ದಾವಣಗೆರೆ ರಾಜ್ಯದಲ್ಲಿ ಸುಮಾರು 27 ಲಕ್ಷ ಕುಟುಂಬಗಳಿಗೆ ಸ್ವಂತ ಸೂರು ಇಲ್ಲ. ಅಂತಹವರಿಗೆ ಸರ್ಕಾರದಿಂದ ಸೂರು ಕಲ್ಪಿಸುವಂತೆ ಹೋರಾಟಗಳ ಯೋಜನೆ ರೂಪಿಸಲಾಗುವುದು ಎಂದು ಸಿಪಿಐ ರಾಜ್ಯಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್ ಹೇಳಿದರು.
ನಗರದ ಜಯದೇವ ಸರ್ಕಲ್‌ನಲ್ಲಿ ಬುಧವಾರ ಭಾರತ ಕಮ್ಯುನಿಸ್ಟ್ ಪಕ್ಷದಿಂದ ಹಮ್ಮಿಕೊಂಡಿದ್ದ ಸಿಪಿಐ ಶತಮಾನೋತ್ಸವ ಜಾಥಾಗೆ ಸ್ವಾಗತ ಕಾರ್ಯಕ್ರಮ ಅಂಗವಾಗಿ ನಡೆದ ಬಹಿರಂಗ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಸಹ ವಿವಿಧ ಸಂಘ ಸಂಸ್ಥೆಗಳ ಹೆಸರಿನಲ್ಲಿ ಕೋಮುವಾದಿ ಪಕ್ಷವಾಗಿ ವರ್ತಿಸುತ್ತಿದೆ. ಏಕಸ್ವಾಮ್ಯದ ಕಂಪನಿಗಳಿಗೆ ಪೂರಕವಾದ ಯೋಜನೆಗಳನ್ನು ರೂಪಿಸುವ ಮೂಲಕ ದೇಶದ ಜನರ ಸ್ವಾತಂತ್ರ‍್ಯವನ್ನೇ ನಾಶ ಮಾಡಿದೆ ಎಂದರು.ರಾಜ್ಯ ಸರ್ಕಾರ 28 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಈ ನಿರ್ಧಾರ ಕೈಬಿಡುವುದು, ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿಯವರಿಗೆ ವಹಿಸುವ ಪಿಪಿಪಿ ಯೋಜನೆ ಕೈಬಿಡುವಂತೆ ಹೋರಾಟ ಮಾಡಬೇಕಿದೆ. ದೇಶದಲ್ಲಿ ಬಡತನ, ನಿರುದ್ಯೋಗ, ಅತ್ಯಾಚಾರ, ಭ್ರಷ್ಟಾಚಾರ, ರೈತರ ಆತ್ಮಹತ್ಯೆ, ಕಾರ್ಮಿಕರ ಹಕ್ಕುಗಳ ನಾಶ, ವಿದ್ಯಾರ್ಥಿ ಯುವಜನರಲ್ಲಿ ಹತಾಶೆ, ಸಾರ್ವಜನಿಕ ಸಂಪತ್ತಿನ ಲೂಟಿ ಹೆಚ್ಚುತ್ತಿದೆ. ಕೋಮುವಾದ, ಜಾತಿವಾದ ತಾಂಡವ ಆಡುತ್ತಿದೆ. ಕಾರಣ ಇದೆಲ್ಲದರಿಂದ ಹೊರಬಂದು ಸಮತಾವಾದ ಸಮಾಜ ಕಟ್ಟುವುದೇ ನಮ್ಮ ಉದ್ದೇಶ ಎಂದರು.
ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಎ.ಬಿ.ರಾಮಚಂದ್ರಪ್ಪ ಮಾತನಾಡಿ, ಸ್ವತಂತ್ರಪೂರ್ವದಲ್ಲಿ ಭಾರತದಲ್ಲಿ ಬ್ರಾಹ್ಮಣ್ಯವನ್ನೇ ಈ ದೇಶದ ಸಂಸ್ಕೃತಿ ಎಂದು ಬಿಂಬಿಸಿಕೊಂಡು ಬಂದಿದ್ದರು. ಈ ದೇಶದ ಅಧಿಕಾರ ಮತ್ತು ಸಂಪತ್ತು ಕೇವಲ ಮೇಲ್ಜಾತಿಯ ಅಧೀನದಲ್ಲಿತ್ತು. ಭಾರತಕ್ಕೆ ಸ್ವಾತಂತ್ರ‍್ಯ ಬಂದ ಮೇಲೆ ಈ ದೇಶ ಹಿಂದೂ ರಾಷ್ಟ್ರವಾಗಬೇಕು ಎಂಬ ಉದ್ದೇಶದಿಂದ ಬ್ರಿಟಿಷರ ವಿರುದ್ಧ ಹೋರಾಟ ಪ್ರಾರಂಭ ಮಾಡಿದ್ದರು. ಆದರೆ, ಸಿಪಿಐ ದೇಶದ ಸಾಮಾನ್ಯರಿಗೂ ಸ್ವತಂತ್ರದಿಂದ ಬದುಕಲು ಶೋಷಣೆ ಮುಕ್ತರಾಗಿ ಜೀವನ ನಡೆಸಲು ಕಮ್ಯುನಿಷ್ಟರ ಪಕ್ಷ ಪ್ರಾರಂಭವಾಯಿತು ಎಂದರು.ಸಿಪಿಐ ಪಕ್ಷದ ಮುಂದಿನ ಹೋರಾಟಗಳೇನು ಎನ್ನುವುದಾದರೆ, ಮೊದಲು ಜಾತಿವಾದ ಧರ್ಮವಾದದ ಪಕ್ಷಗಳಿಂದ ರಾಷ್ಟ್ರವನ್ನು ರಕ್ಷಿಸಬೇಕಿದೆ. ಹಿಂದೂ, ಮುಸ್ಲಿಂ ಎಂಬ ಕೋಮುವಾದ ಹುಟ್ಟಿಸುತ್ತಿರುವ ಬಿಜೆಪಿಯನ್ನು ಅಧಿಕಾರದಿಂದ ದೂರವಿಟ್ಟು, ಸಮತಾ ಸಮಾಜ ನಿರ್ಮಾಣ ಮಾಡಲು ಮತ್ತೊಮ್ಮೆ ದೊಡ್ಡ ಹೋರಾಟಕ್ಕೆ ಮುಂದಾಗಬೇಕಿದೆ ಎಂದು ತಿಳಿಸಿದರು.
ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿ ಆವರಗೆರೆ ಚಂದ್ರು ಅಧ್ಯಕ್ಷತೆ ಸಭೆಯಲ್ಲಿ ರಾಜ್ಯಮಂಡಳಿಯ ಎಚ್.ಎಂ.ಸಂತೋಷ, ಪಿ.ಷಣ್ಮುಖ ಸ್ವಾಮಿ, ಎಚ್.ಜಿ.ಉಮೇಶ ಅವರಗೆರೆ, ಕಲಿಗಾರ ರಫೀವುಲ್ಲಾ, ಬಿ.ಸಿ. ಹನುಮೇಗೌಡ, ಕೆ.ಜಿ. ಶಿವಮೂರ್ತಿ, ಐರಣಿ ಚಂದ್ರು, ಎಚ್.ಕೆ. ಕೊಟ್ರಪ್ಪ, ಜಿ.ಯಲ್ಲಪ್ಪ, ಮಾದಿಹಳ್ಳಿ ಮಂಜುನಾಥ, ನರೇಗಾ ರಂಗನಾಥ್, ಕೆರೆನಹಳ್ಳಿ ರಾಜು, ಎ.ತಿಪ್ಪೇಶ, ದಾದಾಪೀರ್ ಮತ್ತಿತರರು ಭಾಗವಹಿಸಿದ್ದರು.- - -
-17ಕೆಡಿವಿಜಿ36: ದಾವಣಗೆರೆಯಲ್ಲಿ ಸಿಪಿಐ ಶತಮಾನೋತ್ಸವ ಜಾಥಾಗೆ ಸ್ವಾಗತ ಕಾರ್ಯಕ್ರಮದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಸಾತಿ ಸುಂದರೇಶ್ ಮಾತನಾಡಿದರು.