ಕಾರ್ಮಿಕ ಹಕ್ಕು ಕಸಿತದ ವಿರುದ್ಧ ಸಿಐಟಿಯು ಗರಂ

| Published : Nov 23 2025, 01:45 AM IST

ಸಾರಾಂಶ

೨೦೧೯ರ ವೇತನ ಸಂಹಿತೆಯಿಂದ ಹಿಡಿದು ೨೦೨೦ರಲ್ಲಿ ಜಾರಿಗೆ ಬಂದ ಕೈಗಾರಿಕಾ ಸಂಬಂಧ, ಸಾಮಾಜಿಕ ಭದ್ರತೆ ಹಾಗೂ ಔದ್ಯೋಗಿಕ ಸುರಕ್ಷತಾ ಸಂಹಿತೆಗಳವರೆಗೂ ಪ್ರತಿ ಹಂತದಲ್ಲೂ ಕಾರ್ಮಿಕರ ಜಂಟಿ ವೇದಿಕೆ ಪ್ರತಿರೋಧ ನಡೆಸಿದೆ. ಜನವರಿ ೨೦೨೦ರ ಸಾರ್ವತ್ರಿಕ ಮುಷ್ಕರ, ಐತಿಹಾಸಿಕ ’ದೆಹಲಿ ಚಲೋ’, ರೈತರ ಹೋರಾಟದೊಂದಿಗೆ ನಡೆದ ನವೆಂಬರ್ ೨೬ರ ಮುಷ್ಕರ, ೨೦೨೫ರ ಜುಲೈ ೯ರಂದು ೨೫ ಕೋಟಿಗೂ ಹೆಚ್ಚು ಕಾರ್ಮಿಕರು ಪಾಲ್ಗೊಂಡ ಬೃಹತ್ ಮುಷ್ಕರ ಎಲ್ಲವನ್ನೂ ಕಡೆಗಣಿಸಿ, ಕಾರ್ಪೊರೇಟ್ ಬೆಂಬಲಕ್ಕಾಗಿ ಸರ್ಕಾರ ಸಂಹಿತೆ ಜಾರಿಗೆ ಮುಂದಾಗಿರುವುದಾಗಿ ದೂರಿದರು.

ಕನ್ನಡಪ್ರಭ ವಾರ್ತೆ ಹಾಸನ

ನಾಲ್ಕು ಕರಾಳ ಕಾರ್ಮಿಕ ಸಂಹಿತೆಗಳ ಜಾರಿ ಮಾಡಿರುವುದು ದೇಶದ ದುಡಿಯುವ ಕೋಟ್ಯಂತರ ಜನರ ಮೇಲೆ ಎಸಗಿದ ಮೋಸದ ದಾಳಿಯಾಗಿದ್ದು, ಇದು ಕಾರ್ಮಿಕರ ಹಕ್ಕು, ಕಾಳಜಿಗಳನ್ನು ನುಂಗಿ ಉದ್ಯೋಗದಾತರ ಲಾಭದ ಬಾಗಿಲು ತೆರೆದ ಪರಮ ಅಪ್ರಜಾಸತ್ತಾತ್ಮಕ ನಡೆ ಎಂದು ಸಿಐಟಿಯು ಹಾಸನ ಜಿಲ್ಲಾ ಸಮಿತಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿತು.

ಇದೇ ವೇಳೆ ಸಿಐಟಿಯು ರಾಜ್ಯ ಉಪಾಧ್ಯಕ್ಷ ಧರ್ಮೇಶ್ ಉದ್ದೇಶಿಸಿ ಮಾತನಾಡಿ, ಕೇಂದ್ರ ಸರ್ಕಾರ ನವೆಂಬರ್ ೨೧ರಿಂದ ಜಾರಿಗೆ ತಂದಿರುವ ಈ ಸಂಹಿತೆಗಳು ಅಸ್ತಿತ್ವದಲ್ಲಿದ್ದ ೨೯ ಕಾರ್ಮಿಕ ಕಾನೂನುಗಳನ್ನು ಒಂದೇ ಹೊಡೆತದಲ್ಲಿ ರದ್ದುಗೊಳಿಸಿರುವುದನ್ನು “ಕಲ್ಯಾಣರಾಜ್ಯದ ಮರಣಘಂಟೆ " ಎಂದು ಸಂಘಟನೆಯು ವಿವರಣೆ ನೀಡಿದೆ. ಸಂಹಿತೆಗಳ ಜಾರಿಗೆ ಬಂದ ಮೊದಲ ಘಟ್ಟದಿಂದಲೇ ಹತ್ತು ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಸ್ವತಂತ್ರ ಒಕ್ಕೂಟಗಳು ಜಂಟಿಯಾಗಿ ನೀಡುತ್ತಿದ್ದ ಎಚ್ಚರಿಕೆ, ಮನವಿ, ಮುಷ್ಕರ ಮತ್ತು ಪ್ರತಿಭಟನೆಗಳನ್ನು ಸರ್ಕಾರ ಪೂರ್ತಿ ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.

೨೦೧೯ರ ವೇತನ ಸಂಹಿತೆಯಿಂದ ಹಿಡಿದು ೨೦೨೦ರಲ್ಲಿ ಜಾರಿಗೆ ಬಂದ ಕೈಗಾರಿಕಾ ಸಂಬಂಧ, ಸಾಮಾಜಿಕ ಭದ್ರತೆ ಹಾಗೂ ಔದ್ಯೋಗಿಕ ಸುರಕ್ಷತಾ ಸಂಹಿತೆಗಳವರೆಗೂ ಪ್ರತಿ ಹಂತದಲ್ಲೂ ಕಾರ್ಮಿಕರ ಜಂಟಿ ವೇದಿಕೆ ಪ್ರತಿರೋಧ ನಡೆಸಿದೆ. ಜನವರಿ ೨೦೨೦ರ ಸಾರ್ವತ್ರಿಕ ಮುಷ್ಕರ, ಐತಿಹಾಸಿಕ ’ದೆಹಲಿ ಚಲೋ’, ರೈತರ ಹೋರಾಟದೊಂದಿಗೆ ನಡೆದ ನವೆಂಬರ್ ೨೬ರ ಮುಷ್ಕರ, ೨೦೨೫ರ ಜುಲೈ ೯ರಂದು ೨೫ ಕೋಟಿಗೂ ಹೆಚ್ಚು ಕಾರ್ಮಿಕರು ಪಾಲ್ಗೊಂಡ ಬೃಹತ್ ಮುಷ್ಕರ ಎಲ್ಲವನ್ನೂ ಕಡೆಗಣಿಸಿ, ಕಾರ್ಪೊರೇಟ್ ಬೆಂಬಲಕ್ಕಾಗಿ ಸರ್ಕಾರ ಸಂಹಿತೆ ಜಾರಿಗೆ ಮುಂದಾಗಿರುವುದಾಗಿ ದೂರಿದರು. ಸಂಘಗಳ ಜಂಟಿ ವೇದಿಕೆ ಎಲ್.ಐ.ಸಿ. (ಭಾರತೀಯ ಕಾರ್ಮಿಕ ಸಮ್ಮೇಳನ) ತಕ್ಷಣ ಕರೆಯಲು ಒತ್ತಾಯಿಸಿದರೂ ಸರ್ಕಾರ ಮೌನವೇ ಉತ್ತರವಾಗಿದೆ. ಬಜೆಟ್ ಪೂರ್ವ ಸಮಾಲೋಚನಾ ಸಭೆಯಲ್ಲಿಯೂ ಇದೇ ಬೇಡಿಕೆ ಮರುಕೊಂಡರೂ, ಸರ್ಕಾರ ಕಾರ್ಮಿಕರ ಧ್ವನಿಯನ್ನು ಕಡೆಗಣಿಸಿ ಉದ್ಯೋಗದಾತರ ಬೇಡಿಕೆಯನ್ನು ಪೂರೈಸಿದೆಯೆಂದು ಸಂಘಟನೆಯ ವಿರೋಧ ವ್ಯಕ್ತಪಡಿಸಿದರು. ಸಂಹಿತೆಗಳ ಏನಾದರೂ ಜಾರಿಗೆ ಬಂದರೆ, ವೇತನ ಭದ್ರತೆ ಕುಗ್ಗುವುದು, ಉದ್ಯೋಗ ಭದ್ರತೆ ನಶಿಸುವುದು, ಸಾಮಾಜಿಕ ಭದ್ರತಾ ಹಕ್ಕುಗಳು ಕಡಿಮೆಯಾಗುವುದು, ಕೆಲಸದ ಪರಿಸ್ಥಿತಿಗಳು ಹೀನಗಣನೆಗೆ ತುತ್ತಾಗುವುದು ಎಂದು ಎಚ್ಚರಿಕೆ ನೀಡಿದರು. ಇದು ಕಾರ್ಮಿಕರ ಬದುಕಿನ ಮೇಲೆ ಮಾರಣಾಂತಿಕ ದಾಳಿ, ದುಡಿಯುವ ಜನರನ್ನು ಗುಲಾಮಗಿರಿಗೆ ತಳ್ಳುವ ಸಚಿವಾಲಯ, ಕೋರ್ಪೊರೇಟ್ ಸಂಚು ಎಂದು ತೀಕ್ಷ್ಣ ಟೀಕೆ ವ್ಯಕ್ತವಾಗಿದೆ ಎಂದು ಹೇಳಿದರು. ಸಿಐಟಿಯು ಹಾಸನ ಜಿಲ್ಲಾ ಸಮಿತಿ ನವೆಂಬರ್ ೨೨ರಂದು ಹಾಸನದ ಮಹಾವೀರ ವೃತ್ತದಲ್ಲಿ ಕರಾಳ ಸಂಹಿತೆಗಳ ಅಧಿಸೂಚನೆ ಪ್ರತಿಗಳನ್ನು ದಹಿಸಿ ತೀವ್ರ ಕೋಪ ವ್ಯಕ್ತಪಡಿಸಿತು. ಸಂಘಟನೆಯು ಇದನ್ನು ಕೇಂದ್ರ ಸರ್ಕಾರಕ್ಕೆ ಗಂಭೀರ ಎಚ್ಚರಿಕೆ. ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರತಿಯೊಂದು ಕ್ರಮಕ್ಕೂ ನಾವು ನೂರರಷ್ಟು ಶಕ್ತಿಯಾಗಿ ಪ್ರತಿರೋಧಿಸುತ್ತೇವೆ. ನವೆಂಬರ್ ೨೬ ರಂದು ರೈತರೊಂದಿಗೆ ಸಂಯುಕ್ತ ಹೋರಾಟ ಜೊತೆಗೆ ದೇಶವ್ಯಾಪಿ ಧಿಕ್ಕಾರ ದಿನವಾಗಿದೆ. ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಜಂಟಿ ಕಾರ್ಮಿಕ ವೇದಿಕೆ ೨೬ರಂದು ಒಟ್ಟಾಗಿ ಪ್ರತಿಭಟನೆ ನಡೆಸಲಿದ್ದು, ಕೆಲಸದ ಸ್ಥಳಗಳಲ್ಲಿ ಕಪ್ಪು ಪಟ್ಟಿಗಳನ್ನು ಧರಿಸಿ, ಗೇಟ್ ಸಭೆಗಳು, ಬೀದಿ ಬದಿ ಜಾಗೃತಿ, ಸಭೆಗಳ ಮೂಲಕ ಸಂಘರ್ಷಾತ್ಮಕ ಹೋರಾಟ ಕೈಗೊಳ್ಳಲಾಗುವುದು ಎಂದರು. ನಿರುದ್ಯೋಗದ ಬಿಕ್ಕಟ್ಟು, ಹಣದುಬ್ಬರದ ಹೊಡೆತಗಳ ನಡುವೆ ಜಾರಿಗೊಂಡಿರುವ ಈ ಸಂಹಿತೆಗಳು ದುಡಿಯುವ ಜನರ ಮೇಲೆ ಕೇಂದ್ರ ಸರ್ಕಾರ ಘೋಷಿಸಿರುವ ಯುದ್ಧವೇ ಸರಿ ಎಂದು ಸಂಘಟನೆ ಹೇಳಿದೆ. ಸಂಹಿತೆಗಳನ್ನು ಹಿಂತೆಗೆದುಕೊಳ್ಳುವವರೆಗೆ ಹೋರಾಟ ತೀವ್ರಗೊಳ್ಳುತ್ತಲೇ ಇರುತ್ತದೆ ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ, ಜಿಲ್ಲಾ ಖಜಾಂಚಿ ಅರವಿಂದ್, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುಳ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಟಿ. ಹೊನ್ನೇಗೌಡ, ಪ್ಲಾಂಟೇಶನ್ ವರ್ಕರ್ಸ್‌ ಕಾರ್ಯದರ್ಶಿ ಸೌಮ್ಯ, ರಮೇಶ್ ಇತರರು ಉಪಸ್ಥಿತರಿದ್ದರು.