ಸಾರಾಂಶ
ಶಿರಸಿ: ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜ.೨೩ಕ್ಕೆ ರಾಜ್ಯದ ಎಲ್ಲಡೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇರುವ ಸಂಸದರ ಕಚೇರಿ ಎದುರು ಪ್ರತಿಭಟನೆ ಮಾಡಲು ತೀರ್ಮಾನಿಸಲಾಗಿದೆ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಹೇಳಿದರು.
ಶನಿವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಅಂಗನವಾಡಿ, ಬಿಸಿಯೂಟ ನೌಕರರು ಒಂದು ದಿನದ ಕೆಲಸ ನಿಲ್ಲಿಸಿ ಹೋರಾಟ ಮಾಡಲಿದ್ದಾರೆ. ೨೦೧೩ರಿಂದ ಅಂಗನವಾಡಿಗೆ, ೨೦೦೦ದಿಂದ ಬಿಸಿಯೂಟದವರಿಗೆ ವೇತನ ಹೆಚ್ಚಳ ಮಾಡಿಲ್ಲ. ಹೆಚ್ಚುವರಿ ಕೆಲಸ ಮಾತ್ರ ಏರುತ್ತಿದೆ. ಅಂಗನವಾಡಿ, ಬಿಸಿಯೂಟದವರಿಗೆ ಬದುಕು ನಡೆಸುವದೇ ಕಷ್ಟವಾಗಿದೆ. ಆಹಾರ, ಆರೋಗ್ಯ, ಉದ್ಯೋಗ ಭದ್ರತೆ ಆಗಬೇಕು. ಸೇವೆ ಸರಕಾಗಿಸಿದ್ದೇ ಸಮಸ್ಯೆ ಆಗಿದೆ ಎಂದರು.ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಸೇರಿಸುವದನ್ನೂ ಕಡಿತ ಮಾಡಲಾಗಿದೆ.ಅನುದಾನ ನೀಡಲು ಬಜೆಟ್ ನಲ್ಲೇ ಕೊರತೆ ಮಾಡುತ್ತಿದೆ. ಬರಲಿರುವ ಬಜೆಟ್ ನಲ್ಲಿ ಆದರೂ ಅಂಗನವಾಡಿ ಬಿಸಿಯೂಟಕ್ಕೆ ಕನಿಷ್ಠ ವೇತನ ಕೊಡಬೇಕು. ಕಡಿತ ಮಾಡಿದ ಅನುದಾನ ವಾಪಸ್ ಕೊಡಬೇಕು ಎಂದರು.
ಇತ್ತೀಚೆಗೆ ಅಂಗನವಾಡಿ ಮಕ್ಕಳು ಕಡಿಮೆ ಆಗುತ್ತಿದ್ದಾರೆ. ಬೇರೆ ಬೇರೆ ಇಲಾಖೆಯಿಂದ ಈ ಓರಗೆಯ ಮಕ್ಕಳಿಗೆ ಶಿಕ್ಷಣ ಕೊಡುವದು ಹೆಚ್ಚುತ್ತಿದೆ.೩ರಿಂದ ೬ ವರ್ಷದ ಒಳಗಿನ ಕಡ್ಡಾಯಗೊಳಿಸಬೇಕು ಎಂಬ ಹೊಸ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದೇವೆ. ಕಾನೂನು ಜಾರಿಗೆ ತರಬೇಕು ಎಂದರು.ಕಾರ್ಮಿಕರ ಪರವಾದ ಕಾನೂನು ಬರಬೇಕು. ₹೩೧ ಸಾವಿರ ಸಮಾನ ಕನಿಷ್ಠ ವೇತನ ಜಾರಿಗೆ ಮಾಡಬೇಕು. ಏಕ ಧರ್ಮ, ಏಕ ಸಂಸ್ಕೃತಿ ಎನ್ನುವ ಕೇಂದ್ರ ಸರ್ಕಾರ ವೇತನದಲ್ಲೂ ಏಕತೆ ತರಬೇಕಾಗಿದೆ ಎಂದರು.
ಸಿ.ಆರ್.ಶಾನಭಾಗ ಮಾತನಾಡಿ, ಜನರಿಂದ ಈ ಬೇಡಿಕೆಗಳ ಈಡೇರಿಕೆಗೆ ಸಹಿ ಸಂಗ್ರಹ ಕೂಡ ಮಾಡಲಾಗುತ್ತಿದೆ ಎಂದರು.ಯಮುನಾ ಗಾಂವಕರ ಮಾತನಾಡಿ, ಪ್ರತಿ ತಾಲೂಕಿನಿಂದ ಸರಾಸರಿ ೧ ಲಕ್ಷ ಸಹಿ ಸಂಗ್ರಹಿಸುವ ಆಂದೋಲನ ಮಾಡಲಾಗುತ್ತದೆ. ಜಿಲ್ಲೆಯ ಬೇರೆ ಬೇರೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.ಈ ವೇಳೆ ಗಂಗಾ ನಾಯ್ಕ, ಮುತ್ತಾ ಪೂಜಾರಿ ಇತರರು ಇದ್ದರು.