ಸಾವಿರಾರು ಸಂಖ್ಯೆಯಲ್ಲಿ ಎ, ಮತ್ತು ಬಿ ಖಾತೆ ನೀಡುವ ವೇಳೆ ಕಣ್ತಪ್ಪಿ 24 ಎಕರೆ ಜಾಗಕ್ಕೆ ಇ-ಖಾತೆ ನೀಡಲಾಗಿದೆ ಎನ್ನುವ ಸಬೂಬು ನಗರಸಭೆ ಅಧಿಕಾರಿಗಳು ಹೇಳಿದರೂ, ಕನಿಷ್ಠ ಮಟ್ಟದಲ್ಲಿ ದಾಖಲೆಗಳನ್ನು ಪರಿಶೀಲಿಸದೆಯೇ ಇ-ಖಾತೆ ನೀಡಿದ್ದಾರೆಯೇ ಎನ್ನುವ ಅನುಮಾನಗಳು ಮೂಡಿವೆ ಎಂದಿದ್ದಾರೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ತಾಲೂಕಿನ ಕಸಬಾ ಹೋಬಳಿಯ ಅಣಕನೂರು ಗ್ರಾಮದ ಸರ್ವೇ ಸಂಖ್ಯೆ 109ರಲ್ಲಿ ಸುಮಾರು 24 ಎಕರೆ ಜಾಗಕ್ಕೆ ನಗರಸಭೆಯಿಂದ ಇ-ಖಾತೆ ನೀಡಲಾಗಿದೆ. ಇ-ಖಾತೆ ನೀಡುವಾಗ 29ನೇ ವಾರ್ಡ್ ಎಂದು ನಮೂದಿಸಲಾಗಿದೆ. ಸರ್ವೇ ನಂಬರ್ ವ್ಯಾಪ್ತಿಯ ಜಮೀನುಗಳಿಗೆ ನಗರಸಭೆ ಇ- ಖಾತೆ ನೀಡುವುದು ನಿಯಮಗಳ ಉಲ್ಲಂಘನೆಯೂ ಆಗುತ್ತದೆ. ಈ ಕುರಿತು ಕಾನೂನು ಕ್ರಮ ಕೈಗೊಳ್ಳಿ, ಇಲ್ಲವಾದಲ್ಲಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳಿಗೆ ಮಾಜಿ ನಗರಸಭಾ ಸದಸ್ಯ ಅಮೀರ್ ಮೊಹಮದ್ ಸಾದಿಕ್ ಪತ್ರ ಬರೆದಿದ್ದಾರೆ.ಭರಣಿ ವಿ. ಎಂಬುವವರಿಗೆ 97.130 ಚದರ ಮೀಟರ್ (24 ಎಕರೆ) ಜಾಗವನ್ನು ಇ- ಖಾತೆ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ನಗರಸಭೆಯ ನಡೆಗಳ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಖಾತೆಯಲ್ಲಿರುವ ಮಾಹಿತಿ ಪ್ರಕಾರ ಉತ್ತರಕ್ಕೆ ಚೆಕ್ಕು ಬಂಧಿ ರೈಲ್ವೆ ಇಲಾಖೆ ಆಸ್ತಿ, ರೈಲ್ವೆ ಹಳಿ, ಯಾರ್ಡ್ ಡ್ರೈನೇಜ್, ಶಿಡ್ಲಘಟ್ಟ ರಸ್ತೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಎಂದು ನಮೂದಾಗಿದೆ. 106, 107, 108 8 109, ಪಶ್ಚಿಮಕ್ಕೆ 100 ಅಡಿ ಸರ್ವೀಸ್ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ 44 ಮತ್ತು ದಕ್ಷಿಣಕ್ಕೆ ಮಿನಿ ಬೆಟಾನಿಕಲ್ ಉದ್ಯಾನ 70 ಎಕರೆ ಜಾಗ ಎಂದು ನಮೂದಾಗಿದೆ. ಇ-ಖಾತೆಯಲ್ಲಿ ಜಮೀನು ಮಾಲೀಕರು ಭರಣಿ ಎಂದು ಅವರ ಭಾವಚಿತ್ರ ಹಾಗೂ ಜಿಪಿಎಸ್ ಭಾವಚಿತ್ರವೂ ಇದೆ.
ಇ-ಖಾತೆ ನೀಡಲು ಚಿಕ್ಕಬಳ್ಳಾಪುರ ನಗರಸಭೆಗೆ ₹8, 24, 087 ಆಸ್ತಿತೆರಿಗೆಯನ್ನು (ರಸೀದಿ ಸಂಖ್ಯೆ 928) ಪಾವತಿಸಲಾಗಿದೆ ಎಂದು ಇ-ಖಾತೆಯಲ್ಲಿ ನಮೂದಾಗಿದೆ. ಅಚ್ಚರಿ ಎನ್ನುವಂತೆ ಇ-ಖಾತೆಯಲ್ಲಿ ತೆರಿಗೆ ಸಂದಾಯದ ದಿನಾಂಕ 2027ರ ಏ.6ರಂದು ನಮೂದಾಗಿದೆ. ಅಣಕನೂರು ಗ್ರಾಮ ವ್ಯಾಪ್ತಿಯ ಜಾಗಕ್ಕೆ ನಗರಸಭೆ ಆಸ್ತಿ ತೆರಿಗೆ ಪಾವತಿಸಿಕೊಂಡಿದೆ ಎಂದಿದ್ದಾರೆ.ಪೌರಾಯುಕ್ತರು, ಆಡಳಿತಾಧಿಕಾರಿ ಅವಧಿಯಲ್ಲಿ ಬಹಳಷ್ಟು ಕೆಲಸಗಳನ್ನು ಕಾನೂನು ಮೀರಿ ಮಾಡಿದ್ದಾರೆ. ಇ- ಖಾತೆ ನೀಡಿರುವ ಜಮೀನಿನ ಒಂದು ಎಕರೆ ಇಂದಿನ ಮಾರುಕಟ್ಟೆ ಮೌಲ್ಯ ₹5 ಕೋಟಿಗೂ ಅಧಿಕವಿದೆ. ಇ-ಖಾತೆ ನೀಡುವ ವಿಚಾರವಾಗಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎನ್ನುವ ಸುದ್ದಿ ಸಾರ್ವಜನಿಕ ವಲಯದಲ್ಲಿ ಇದೆ. ಇ-ಖಾತೆ ಆಧಾರದ ಮೇಲೆ ಶಿಡ್ಲಘಟ್ಟ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಬಿಡುಗಡೆ ಪತ್ರ ಸಹ ಮಾಡಿಸಿದ್ದಾರೆ. ಇದು ದಾಖಲೆಗಳನ್ನು ಸೃಷ್ಟಿಸುವ ಕಾರ್ಯವಾಗಿದೆ ಎಂದು ಸಾದಿಕ್ ದೂರಿನಲ್ಲಿ ತಿಳಿಸಿದ್ದಾರೆ.
ತಮ್ಮ ಕಚೇರಿಯ ನೋಂದಣಿ ಪತ್ರದ ಸಂಖ್ಯೆ ಎಸ್‌ಡಿಜಿ-1-01867-2026-27 2 23-6-20260 ನೋಂದಣಿಗಾಗಿ ಅರ್ಜಿದಾರರು ಸಲ್ಲಿಸಿರುವ ಎಲ್ಲ ದಾಖಲೆಗಳು (ಇ-ಖಾತೆ, ಆಧಾರ್ ಕಾರ್ಡ್, ಹಣ ಸಂದಾಯದ ರಸೀದಿ, ಬ್ಯಾಂಕ್ ಡಿಡಿ ಇತ್ಯಾದಿ ವಿವರ) ಮಾಹಿತಿಯನ್ನು ದೃಢೀಕರಿಸಿ ನೀಡಬೇಕು ಎಂದು ಶಿಡ್ಲಘಟ್ಟ ಉಪನೋಂದಣಾಧಿಕಾರಿ ಅವರಿಗೆ ಮಹಮದ್ ಸಾದಿಕ್ ಮಾಹಿತಿ ಹಕ್ಕಿನಡಿ ಮನವಿ ಸಲ್ಲಿಸಿದ್ದಾರೆ.ಸಾವಿರಾರು ಸಂಖ್ಯೆಯಲ್ಲಿ ಎ, ಮತ್ತು ಬಿ ಖಾತೆ ನೀಡುವ ವೇಳೆ ಕಣ್ತಪ್ಪಿ 24 ಎಕರೆ ಜಾಗಕ್ಕೆ ಇ-ಖಾತೆ ನೀಡಲಾಗಿದೆ ಎನ್ನುವ ಸಬೂಬು ನಗರಸಭೆ ಅಧಿಕಾರಿಗಳು ಹೇಳಿದರೂ, ಕನಿಷ್ಠ ಮಟ್ಟದಲ್ಲಿ ದಾಖಲೆಗಳನ್ನು ಪರಿಶೀಲಿಸದೆಯೇ ಇ-ಖಾತೆ ನೀಡಿದ್ದಾರೆಯೇ ಎನ್ನುವ ಅನುಮಾನಗಳು ಮೂಡಿವೆ ಎಂದಿದ್ದಾರೆ.
ಜಿಲ್ಲಾಧಿಕಾರಿ ಮತ್ತು ನಗರಾಭಿವೃದ್ಧಿ ಯೋಜನಾ ಕೋಶದ ನಿರ್ದೇಶಕರಿಗೆ ದೂರು ನೀಡಿದ್ದೇನೆ. ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು. ಇಲ್ಲದಿದ್ದರೆ ಹೈಕೋರ್ಟ್ ಮೊರೆ ಹೋಗುತ್ತೇನೆ ಎಂದು ಮಹಮದ್ ಸಾದಿಕ್ ತಿಳಿಸಿದ್ದಾರೆ.