ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದಲ್ಲಿ ಕಣ್ಣು ಹಾಯಿಸಿದ ಕಡೆಯಲ್ಲ ಕೇಸರಿ ಬಾವುಟ, ಬಂಟಿಂಗ್ಸ್‌ಗಳ ಹಾವಳಿ. ಇಡೀ ನಗರವೇ ಕೇಸರಿಯಲ್ಲಿ ಕಂಗೊಳಿಸುತ್ತಿರುವುದು ಒಂದೆಡೆಯಾದರೆ, ಶಿವಮೊಗ್ಗದ ಗಾಂಧಿ ಬಜಾರ್‌ನಲ್ಲಿ ಮಹಾದ್ವಾರದಲ್ಲಿ ಶಿವ ನಿಂತು ಸಮುದ್ರ ಮಂಥನ ಮಾಡುತ್ತಿರುವ ದೃಶ್ಯ ಜನರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರೆ, ಎಂಆರ್‌ಎಸ್ ವೃತ್ತದಲ್ಲಿ ನಿಂತು ಬಾಣ ಬಿಡುತ್ತಿರುವ ಶ್ರೀರಾಮ ಒಂದು ಕಡೆ. ಕೈಯಲ್ಲಿ ಖಡ್ಗ ಹಿಡಿದು ನಿಂತಿರುವ ಶಿವಾಜಿ ಮಹಾರಾಜ ಇನ್ನೊಂದು ಕಡೆ. ಇದು ಸೆ.6ರ ಶನಿವಾರ ವಿಸರ್ಜನೆಗೊಳ್ಳುತ್ತಿರುವ ಹಿಂದು ಮಹಾಸಭಾ ಗಣಪತಿಯ ವಿಸರ್ಜನೆ ಪೂರ್ವ ಮೆರವಣಿಗೆ ಹಿನ್ನೆಲೆ ಹಿಂದೂ ಕೇಸರಿ ಅಲಂಕಾರ ಸಮಿತಿಯಿಂದ ಮಾಡಲಾಗಿರುವ ಅಲಂಕಾರ.ಐತಿಹಾಸಿಕ ಪ್ರಸಿದ್ಧ ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಹಿನ್ನೆಲೆ, ಶಿವಮೊಗ್ಗ ನಗರ ಸಂಪೂರ್ಣ ಕೇಸರಿ ಮಯವಾಗಿದೆ. ಹಿಂದೂ ಕೇಸರಿ ಅಲಂಕಾರ ಸಮಿತಿಯಿಂದ ನಗರದಲ್ಲೆಡೆ ಅದ್ದೂರಿ ಆಲಂಕಾರ ಮಾಡಲಾಗಿದೆ.
ಈ ಹಿಂದೆ ರಾಮ ಮಂದಿರ, ಸಿಂಹಾಸನರೂಢ ಛತ್ರಪತಿ ಶಿವಾಜಿ ಮಹಾರಾಜ್, ಮಹಾಭಾರತ ಯುದ್ಧದ ಸಂದರ್ಭದಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದ ಸನ್ನಿವೇಶ ರೂಪಿಸಿದ್ದ ಮಹಾದ್ವಾರಗಳು ಜನರ ಗಮನ ಸೆಳೆದಿದ್ದವು. ಆದರೆ ಈ ಬಾರಿ ಪುರಾಣಗಳಲ್ಲಿ ಪ್ರಸಿದ್ಧವಾದ ಸಮುದ್ರ ಮಂಥನ ಅಥವಾ ಕ್ಷೀರ ಸಾಗರ ಮಂಥನ ಘಟನೆಯ ಸನ್ನಿವೇಶವನ್ನು ಈ ಬಾರಿ ರೂಪಿಸಲಾಗಿದೆ. ಗಾಂಧಿ ಬಜಾರ್ ಮುಖ್ಯರಸ್ತೆಗೆ ಕೇಸರಿ ಬಂಟಿಂಗ್ಸ್ ಹಾಕಲಾಗಿದೆ.ಕಲಾವಿದ ಜೀವನ್ ಕಲಾ ಸನ್ನಿಧಿಯಲ್ಲಿ ನಿರ್ಮಾಣ ಆಗಿದ್ದ ಕಲಾಕೃತಿಗಳನ್ನು ಗಾಂಧಿ ಬಜಾರ್‌ನ ಮುಖ್ಯದ್ವಾರದಲ್ಲಿ ಜೋಡಣೆ ಮಾಡಲಾಗಿದೆ. ಜೀವನ್ ನೇತೃತ್ವದ ಕಲಾವಿದರ ತಂಡದವರು ಮಹಾದ್ವಾರವನ್ನು ನಿರ್ಮಾಣ ಮಾಡಿದ್ದಾರೆ. ಹಿಂದೂ ಧರ್ಮದಲ್ಲಿ ಸಮುದ್ರ ಮಂಥನ ಘಟನೆ ಪುರಾಣಗಳಲ್ಲೂ ಅತ್ಯಂತ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಸಮುದ್ರ ಮಂಥನವನ್ನು ನೆನೆದು 12 ವರ್ಷಗಳಿಗೊಮ್ಮೆ ಅತ್ಯಂತ ವಿಜೃಂಭಣೆಯಿಂದ ಕುಂಭಮೇಳ ಹಬ್ಬವನ್ನು ಆಚರಿಸಲಾಗುತ್ತದೆ. ಈ ಸಮುದ್ರ ಮಂಥನದ ಕಥೆಯನ್ನು ನಾವು ಭಾಗವತ ಪುರಾಣ, ಮಹಾಭಾರತ ಹಾಗೂ ವಿಷ್ಣು ಪುರಾಣದಲ್ಲೂ ಕೂಡ ನೋಡಬಹುದು.
ಬಿ.ಎಚ್ ರಸ್ತೆಯ ಡಿವೈಡರ್‌ಗಳ ಮೇಲೆ ಹಿಂದೂ ದೇವರು, ಧಾರ್ಮಿಕ ಗುರುಗಳ ಭಾವಚಿತ್ರದ ಫ್ಲೆಕ್ಸ್ ಅಳವಡಿಸಲಾಗಿದೆ. ಶಿವಪ್ಪನಾಯಕ ಪ್ರತಿಮೆ ಮುಂಭಾಗ ಧರ್ಮಸ್ಥಳ ಮಾದರಿಯ ಮಹಾದ್ವಾರ ನಿರ್ಮಿಸಲಾಗಿದೆ. ವಿವಿಧೆಡೆ ಲೈಟಿಂಗ್ ಹಾಕಲಾಗಿದೆ.ನೆಹರು ರಸ್ತೆಗೆ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಇನ್ನು, ನೆಹರು ರಸ್ತೆಯ ಪ್ರವೇಶದಲ್ಲಿ ಆಪರೇಷನ್ ಸಿಂಧೂರ ಹೆಸರಿನಲ್ಲಿ ಮಹಾದ್ವಾರ ನಿರ್ಮಿಸಲಾಗಿದೆ. ಅಲ್ಲದೇ, ವಿದ್ಯಾನಗರದ ಬಿ.ಎಚ್.ರಸ್ತೆಯಲ್ಲಿ ಡಿವೈಡರ್ ಮೇಲೆ ಕೇಸರಿ ಧ್ವಜಗಳನ್ನು ಹಾಕಲಾಗಿದೆ. ಎಂಆರ್‌ಎಸ್ ಸರ್ಕಲ್‌ನಲ್ಲಿ ಕೇಸರಿ ಬಂಟಿಂಗ್ಸ್‌ನಿಂದ ಅಲಂಕಾರ ಮಾಡಲಾಗಿದೆ.
ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವಕ್ಕೆ ಶುಭ ಕೋರಿ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ. ಅದೇ ರೀತಿ ಬೃಹತ್ ಹೂವಿನ ಹಾರಗಳನ್ನು ಹಾಕಲು ತಯಾರಿ ಮಾಡಿಕೊಳ್ಳಲಾಗಿದೆ. ಅದೇ ರೀತಿ ಕ್ರೇನ್‌ಗಳ ಮೂಲಕ ಹಾಕಲು ಹಣ್ಣುಗಳು ಹೂವಿನ ಹಾರಗಳನ್ನು ಕೂಡ ಸಿದ್ಧಪಡಿಸಲಾಗಿದೆ.ನಗರದ ನ್ಯೂ ಮಂಡ್ಲಿಯಲ್ಲಿ ಶ್ರೀ ಕೃಷ್ಣಾರ್ಜುನರ ಕುರುಕ್ಷೇತ್ರ ದೃಶ್ಯ ಪ್ರತಿ ಕೃತಿ ನಿರ್ಮಿಸಿದ್ದು ನೋಡುಗರನ್ನು ಆಕರ್ಷಿಸುತ್ತಿದೆ. ರಸ್ತೆ ಮಧ್ಯದ ಡಿವೈಡರ್‌ಗಳಲ್ಲಿ ವೀರ ಸಾವರ್ಕರ್ ಮಹರ್ಷಿ ವಾಲ್ಮೀಕಿ ಸೇರಿದಂತೆ ನೂರಾರು ಮಹನೀಯರ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ.