ಕಲಬುರಗಿ ನಗರ ಗ್ರಂಥಾಲಯ ಪ್ರಾಧಿಕಾರದ 2026-27ನೇ ಸಾಲಿನ ಆಯ-ವ್ಯಯವನ್ನು 97.30 ಲಕ್ಷ ರು.ನಿರೀಕ್ಷಿತ ಆದಾಯ ಹಾಗೂ 95.30 ಲಕ್ಷ ರು.ಅಂದಾಜು ವೆಚ್ಚದೊಂದಿಗೆ ಮಂಡಿಸಲಾಗಿದ್ದು, ಸಭೆಯಲ್ಲಿ ಚರ್ಚಿಸಿ ಅನುಮೋದನೆ ನೀಡಲಾಯಿತು.
ಕನ್ನಡಪ್ರ ವಾರ್ತೆ ಕಲಬುರಗಿ ಕಲಬುರಗಿ ನಗರ ಗ್ರಂಥಾಲಯ ಪ್ರಾಧಿಕಾರದ 2026-27ನೇ ಸಾಲಿನ ಆಯ-ವ್ಯಯವನ್ನು 97.30 ಲಕ್ಷ ರು.ನಿರೀಕ್ಷಿತ ಆದಾಯ ಹಾಗೂ 95.30 ಲಕ್ಷ ರು.ಅಂದಾಜು ವೆಚ್ಚದೊಂದಿಗೆ ಮಂಡಿಸಲಾಗಿದ್ದು, ಸಭೆಯಲ್ಲಿ ಚರ್ಚಿಸಿ ಅನುಮೋದನೆ ನೀಡಲಾಯಿತು.ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ನಡೆದ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿದ್ದ ಮಹಾಪೌರ ಶೇಖ್ ಅಜ್ಮಲ್ ಅಹ್ಮದ್ ಅಫ್ಜಲ ಗೋಲಾ ಅವರು, ಬಜೆಟ್‌ನಲ್ಲಿ ಉಲ್ಲೇಖಿಸಿರುವ ವೆಚ್ಚಗಳನ್ನು ನಿಯಮಾನುಸಾರ ಕೈಗೊಳ್ಳುವಂತೆ ಸೂಚಿಸಿದರು.ಬಿದ್ದಾಪುರ ಕಾಲೋನಿ ಹಾಗೂ ಬಡೆಪುರ ಕಾಲೋನಿಯ ಸಿ.ಎ. ನಿವೇಶನಗಳಲ್ಲಿ ಹೊಸದಾಗಿ ಗ್ರಂಥಾಲಯ ಕಟ್ಟಡ ನಿರ್ಮಿಸಲು ಹಾಗೂ ಅಶೋಕ ನಗರ ಶಾಲಾ ಗ್ರಂಥಾಲಯದ ಮೇಲ್ಛಾವಣಿ ದುರಸ್ತಿ ಕಾಮಗಾರಿ ಕೈಗೊಳ್ಳಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು. 2026-27ನೇ ಸಾಲಿನ ಆಯ-ವ್ಯಯ ಅನುಮೋದನೆಯ ನಂತರ ಲೋಕೋಪಯೋಗಿ ಇಲಾಖೆ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳ ಮೂಲಕ ಕಾಮಗಾರಿಗಳ ಅನುಷ್ಠಾನಗೊಳಿಸಲು ನಿರ್ಧರಿಸಲಾಯಿತು.
ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಮಾತನಾಡಿ, ವೀರೇಂದ್ರ ಪಾಟೀಲ ಬಡಾವಣೆಯಲ್ಲಿರುವ ಖಾಲಿ ನಿವೇಶನದ ಕುರಿತು ಸೂಕ್ತ ಪರಿಶೀಲನೆ ನಡೆಸಿ ವರದಿ ಪಡೆದು ಮಹಾಪೌರರೊಂದಿಗೆ ಚರ್ಚಿಸಿ ಪ್ರಾಧಿಕಾರದ ಅನುದಾನ ಬಳಸಿಕೊಳ್ಳುವ ಕುರಿತು ಕ್ರಮ ಕೈಗೊಳ್ಳುವಂತೆ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಪಿ.ಆರ್. ತಿಪ್ಪೇಸ್ವಾಮಿ ಅವರಿಗೆ ಸೂಚಿಸಿದರು.*ಗ್ರಂಥಾಲಯ ನವೀಕರಣ: ಶಿಥಿಲಗೊಂಡಿರುವ ಬಾಲಭವನ ಗ್ರಂಥಾಲಯ ಕಟ್ಟಡವನ್ನು ಸುಸಜ್ಜಿತವಾಗಿ ನವೀಕರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಮಂಗಳವಾರ ಮಹಾಪೌರರು ಹಾಗೂ ಪ್ರಾಧಿಕಾರದ ಸದಸ್ಯರು ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಹಾನಗರ ಪಾಲಿಕೆ ಅಥವಾ ನಗರ ಗ್ರಂಥಾಲಯ ಪ್ರಾಧಿಕಾರದ ವತಿಯಿಂದ ಕಟ್ಟಡ ನವೀಕರಿಸಿ ಸುಸಜ್ಜಿತ ಬಾಲಭವನ ಗ್ರಂಥಾಲಯವನ್ನಾಗಿ ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಯಿತು.*ಬಾಕಿ ವಸೂಲಿಗೆ ಆದ್ಯತೆ: ಮಹಾನಗರ ಪಾಲಿಕೆಯಿಂದ ನಗರ ಗ್ರಂಥಾಲಯ ಪ್ರಾಧಿಕಾರಕ್ಕೆ ಬರಬೇಕಿರುವ ಬಾಕಿ ಗ್ರಂಥಾಲಯ ಕರ ವಸೂಲಾತಿಗೂ ಸಭೆಯಲ್ಲಿ ಒತ್ತು ನೀಡಲಾಯಿತು. ಮಾ.31ರ ಅಂತ್ಯಕ್ಕೆ 1,91,42,273 ರು.ಬಾಕಿ ಇದ್ದು, ಈ ಪೈಕಿ 71,50,864 ರು.ವಸೂಲಿಯಾಗಿದೆ. ಉಳಿದ 1,19,91,409 ರು. ಬಾಕಿ ಮೊತ್ತ ಹಾಗೂ ಪ್ರಸಕ್ತ ಸಾಲಿನ ಬಾಕಿ ಮೊತ್ತವನ್ನು ಶೀಘ್ರ ವಸೂಲಿ ಮಾಡಲು ಕ್ರಮ ಕೈಗೊಳ್ಳುವಂತೆ ಉಪನಿರ್ದೇಶಕರಿಗೆ ಸೂಚಿಸಲಾಯಿತು.ಮಹಾಪೌರರು ಹಾಗೂ ಪ್ರಾಧಿಕಾರದ ಸದಸ್ಯರು ಕೇಂದ್ರ ಗ್ರಂಥಾಲಯ ಮತ್ತು ಬಾಲಭವನ, ಕೇಂದ್ರ ಬಸ್ ನಿಲ್ದಾಣ ಹಾಗೂ ಗೋದುತಾಯಿ ನಗರ ಶಾಖಾ ಗ್ರಂಥಾಲಯಗಳಿಗೆ ಭೇಟಿ ನೀಡಿ ಓದುಗರ ಅಹವಾಲುಗಳನ್ನು ಆಲಿಸಿದರು. ಓದುಗರ ಬೇಡಿಕೆಗೆ ಅನುಗುಣವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳನ್ನು ಖರೀದಿಸುವಂತೆ ಉಪನಿರ್ದೇಶಕರಿಗೆ ಸೂಚಿಸಿದರು.ಉಪಮೇಯರ್ ಫರಾ ಕೌಸರ್ ಜಾಗೀರದಾರ, ಪ್ರಾಧಿಕಾರದ ಸದಸ್ಯರಾದ ಲತಾ ರಾಠೋಡ, ಅನುಪಮಾ ರಮೇಶ ಕಮಕನೂರ, ಮಹಾನಗರ ಪಾಲಿಕೆ ಸದಸ್ಯರಾದ ಓವಿಸ್ ಪಟೇಲ್, ಅಲಂಮದರ ಝೈದಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶರಣಬಸಪ್ಪ, ಉಪನಿರ್ದೇಶಕ ಪಿ.ಆರ್. ತಿಪ್ಪೇಸ್ವಾಮಿ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.ಗ್ರಂಥಾಲಯ ಸಪ್ತಾಹ: ಸದಸ್ಯರ ನೋಂದಣಿ: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ನ.14ರಿಂದ 20ರವರೆಗೆ ನಗರದ ವಿವಿಧ ವಾರ್ಡ್‌ಗಳಲ್ಲಿ ಹೊಸ ಸದಸ್ಯರ ನೋಂದಣಿ ಅಭಿಯಾನ ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು. ಮಹಾಪೌರರು ಹಾಗೂ ಪ್ರಾಧಿಕಾರದ ಸದಸ್ಯರ ವಾರ್ಡ್‌ಗಳಲ್ಲಿ ಅಭಿಯಾನ ಆರಂಭಿಸಿ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಸದಸ್ಯರನ್ನು ನೋಂದಾಯಿಸಲು ಕ್ರಮ ಕೈಗೊಳ್ಳುವಂತೆ ಉಪನಿರ್ದೇಶಕರಿಗೆ ಸೂಚಿಸಲಾಯಿತು.
----ಫೋಟೊ-----ಫೋಟೋ- ಮೇಯರ್