ಮಂಗಳೂರ: ಕತ್ತು ಸೀಳಿಕೊಂಡು ಬ್ಯಾಂಕ್ಕ್‌ ಅಧಿಕಾರಿ ಆತ್ಮಹತ್ಯೆ

ಕನ್ನಡಪ್ರಭ ವಾರ್ತೆ ಮಂಗಳೂರು

ಕರ್ಣಾಟಕ ಬ್ಯಾಂಕಿನ ಮಂಗಳೂರಿನ ಪ್ರಧಾನ ಕಚೇರಿಯಲ್ಲಿ ಜನರಲ್‌ ಮೆನೇಜರ್‌ ಒಬ್ಬರು ಚಾಕುವಿನಿಂದ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ನಗರದ ಪಂಪ್‌ವೆಲ್‌ನಲ್ಲಿರುವ ಕರ್ಣಾಟಕ ಬ್ಯಾಂಕ್‌ ಪ್ರಧಾನ ಕಚೇರಿಯಲ್ಲಿ ಚೀಫ್‌ ಕಂಪ್ಲೇಂಟ್ ಆಫೀಸರ್‌(ಸಿಸಿಒ) ಆಗಿರುವ ವಾದಿರಾಜ ಕೆ.ಎ.(51) ಎಂಬವರು ಮೃತ ವ್ಯಕ್ತಿ.

ಮಂಗಳೂರಿನ ಬೊಂದೇಲ್‌ನ ಅಪಾರ್ಟ್‌ಮೆಂಟ್‌ನ ಮನೆಯಲ್ಲಿ ಗುರುವಾರ ಬೆಳಗ್ಗೆ ಕತ್ತುಕೊಯ್ದ ಸ್ಥಿತಿಯಲ್ಲಿ ಇವರ ಶವ ಪತ್ತೆಯಾಗಿದೆ. ಬೆಳಗ್ಗೆ ಇವರ ಪತ್ನಿ ಮಗುವಿನೊಂದಿಗೆ ಶಾಲೆಗೆ ಹೆತ್ತವರ ಸಭೆಗೆ ತೆರಳಿದ್ದರು. ಈ ವೇಳೆ ಅವರನ್ನು ಬ್ಯಾಂಕ್‌ಗೆ ಕರೆದೊಯ್ಯಲು ಚಾಲಕ ಕೆಳಗೆ ಕಾಯುತ್ತಾ ಇದ್ದರು. ವಾದಿರಾಜ್‌ ಇನ್ನೂ ಯಾಕೆ ಬಂದಿಲ್ಲ ಎಂದು ಚಾಲಕ ಮೇಲೆ ಹೋಗಿ ನೋಡಿದಾಗ ಕತ್ತು ಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಗಲೇ ಬಹಳಷ್ಟು ರಕ್ತ ಹೋಗಿದ್ದರಿಂದ ಅವರು ಆಸ್ಪತ್ರೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ನಗರ ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್‌ವಾಲ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇವರ ಸಾವಿನ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ. ಸಾವಿಗೆ ನಿರ್ದಿಷ್ಟ ಕಾರಣ ಗೊತ್ತಾಗಿಲ್ಲ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಒಂದು ವರ್ಷದಿಂದ ವಾದಿರಾಜ್‌ ಕುಟುಂಬ ಬೊಂದೇಲ್‌ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು.

ಕಳೆದ 33 ವರ್ಷಗಳಿಂದ ಕರ್ಣಾಟಕ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು ಕ್ಲರ್ಕ್‌ ಆಗಿ ಸೇರಿದ್ದರು. ಬಳಿಕ ಹಂತ ಹಂತವಾಗಿ ಬಡ್ತಿ ಪಡೆದು ಈಗ ಜನರಲ್‌ ಮೆನೇಜರ್‌ ಆಗಿದ್ದರು. ಇವರ ಸಾವಿಗೆ ಬ್ಯಾಂಕಿನ ಆಡಳಿತ ಮಂಡಳಿ ಸಂತಾಪ ವ್ಯಕ್ತಪಡಿಸಿದೆ.