ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ದೀಪಾವಳಿ ಹಬ್ಬದ ಪಟಾಕಿ ಸಿಡಿತದಿಂದ ನಗರದ ವಾಯು ಗುಣಮಟ್ಟ ಕುಸಿತವಾಗಿದೆ. ನಗರದ 2 ಪ್ರದೇಶಗಳಲ್ಲಿ ಮಾತ್ರ ವಾಯು ಗುಣಮಟ್ಟ ‘ಕಳಪೆ’ ಹಂತಕ್ಕೆ ತಲುಪಿದೆ. ಆದರೆ, ಶಬ್ಧ ಮಾಲಿನ್ಯದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಶುಕ್ರವಾರ ಬಿಡುಗಡೆ ಮಾಡಿರುವ ವಾಯು ಮತ್ತು ಶಬ್ಧ ಮಾಲಿನ್ಯ ಕುರಿತಾದ ವರದಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.ನಗರದ 11 ಪ್ರದೇಶಗಳಲ್ಲಿ ಅಳವಡಿಸಿರುವ ವಾಯು ಗುಣಮಟ್ಟ ಮಾಪನ ಕೇಂದ್ರಗಳಿಂದ ಸಂಗ್ರಹಿಸಿರುವ ಮಾಹಿತಿ ಪ್ರಕಾರ ಅ.24ರಂದು ನಗರದ ‘ಸರಾಸರಿ’ ವಾಯು ಗುಣಮಟ್ಟ ಸಮಾಧಾನಕರವಾಗಿತ್ತು (ಎಕ್ಯುಐ -78). ಅದೇ ಅ.31ರ ದೀಪಾವಳಿ ಹಬ್ಬದ ದಿನ ಪಟಾಕಿ ಸಿಡಿತವು ಜೋರಾಗಿದ್ದ ಕಾರಣ ಎಕ್ಯುಐ- 153ಕ್ಕೆ ತಲುಪಿದೆ. ಎಕ್ಯುಐ 101 ರಿಂದ 200 ಇದ್ದಲ್ಲಿ ಶ್ವಾಸಕೋಶ, ಹೃದಯ ಮತ್ತು ಅಸ್ತಮಾ ಆರೋಗ್ಯ ಸಮಸ್ಯೆಗಳಿದ್ದವರಿಗೆ ಉಸಿರಾಟಕ್ಕೆ ಸಮಸ್ಯೆಯಾಗುತ್ತದೆ.
ಕಳೆದ ಕೆಲ ದಿನಗಳಿಂದ ನಗರದಲ್ಲಿ ರಾತ್ರಿ ವೇಳೆ ಮಂಜು ಮುಸುಕಿದ ವಾತಾವರಣ ಮತ್ತು ಚಳಿ ಇದೆ. ಹೀಗಾಗಿ, ಗಾಳಿಯಲ್ಲಿ ಸೇರುವ ಧೂಳು ಮತ್ತು ಕಣಗಳ ಚಲನೆ ನಿಧಾನವಾಗಿರುತ್ತದೆ. ಈ ವೇಳೆ ಪಟಾಕಿ ಸಿಡಿತದ ಹೊಗೆ, ಧೂಳು ಸೇರಿ ವಾತಾವರಣಕ್ಕೆ ಸೇರಿ ವಾಯು ಗುಣಮಟ್ಟ ಕುಸಿಯುತ್ತದೆ. ಡಿ.31ರಂದು ಹಬ್ಬದ ದಿನವಾಗಿದ್ದರೂ ವಾಹನಗಳ ಸಂಚಾರ ಹೆಚ್ಚಾಗಿಯೇ ಇತ್ತು. ಅನೇಕರು ಅಂದು ಕೂಡ ಬೆಂಗಳೂರಿಂದ ತಮ್ಮ ತಮ್ಮ ಊರುಗಳಿಗೆ ಹೋಗಿದ್ದಾರೆ. ಇದು ಕೂಡ ವಾಯು ಗುಣಮಟ್ಟ ಕುಸಿತಕ್ಕೆ ಕಾರಣವಾಗಿರಬಹುದು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಿಇಒ ವಿಜಯ್ ಕುಮಾರ್ ತಿಳಿಸಿದರು.ನ.1 ಮತ್ತು ನ.2ರಂದು ಕೂಡ ಪಟಾಕಿ ಸಿಡಿಸಲಾಗುತ್ತದೆ. ಅಂದು ನಗರದಿಂದ ಹೊರ ಹೋಗುವ ವಾಹನಗಳ ಸಂಖ್ಯೆ ಕಡಿಮೆ ಇರುತ್ತದೆ. ಆ ಎರಡು ದಿನಗಳಂದು ದಾಖಲಾಗುವ ಮಾಹಿತಿಯನ್ನು ಪರಿಶೀಲಿಸಿದಾಗ ದೀಪಾವಳಿ ಪಟಾಕಿಯ ಪರಿಣಾಮ ವಾಯು ಗುಣಮಟ್ಟದ ಮೇಲೆ ಎಷ್ಟರ ಮಟ್ಟಿಗೆ ಬೀರಿದೆ ಎನ್ನುವುದನ್ನು ಇನ್ನಷ್ಟು ನಿಖರವಾಗಿ ಅರಿಯಲು ಸಾಧ್ಯವಾಗುತ್ತದೆ ಎಂದು ವಿಜಯ್ ಕುಮಾರ್ ತಿಳಿಸಿದರು.
2 ಕಡೆ ಕಳಪೆ ಗುಣಮಟ್ಟ: ನಗರದ ಹೆಬ್ಬಾಳದಲ್ಲಿ ಅ.24ರಂದು ವಾಯು ಗುಣಮಟ್ಟ (ಎಕ್ಯುಐ) 75 ಇದ್ದದ್ದು, ಡಿ.31ರಂದು 263ಕ್ಕೆ ತಲುಪಿದೆ. ಅದೇ ರೀತಿ ಜಿಗಣಿಯಲ್ಲಿ ಅ.24ರಂದು 55 ಇದ್ದದ್ದು ಅ.31ಕ್ಕೆ 203ಕ್ಕೆ ತಲುಪಿದೆ. 200ರಿಂದ 300ರ ವರೆಗಿನ ಎಕ್ಯುಐ ಕಳಪೆ ಗುಣಮಟ್ಟ ಸೂಚಿಸುತ್ತದೆ. ಧೀರ್ಘ ಕಾಲದವರೆಗೆ ಈ ವಾತಾವರಣದಲ್ಲಿ ಇರುವ ಬಹುತೇಕರಿಗೆ ಉಸಿರಾಟಕ್ಕೆ ಸಮಸ್ಯೆ ಎನಿಸುತ್ತದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.ಶಬ್ಧ ಮಾಲಿನ್ಯ ಹೆಚ್ಚಳವಿಲ್ಲ: ದೀಪಾವಳಿ ಪಟಾಕಿಯಿಂದ ಒಟ್ಟಾರೆ ಶಬ್ಧ ಮಾಲಿನ್ಯ ಪ್ರಮಾಣದಲ್ಲಿ ಹೆಚ್ಚಳವಾಗಿಲ್ಲ. ನಗರದ 9 ಕಡೆ ಅಳವಡಿಸಿರುವ ಮಾಪನ ಯಂತ್ರಗಳಲ್ಲಿ ದಾಖಲಾದ ಮಾಹಿತಿ ಪ್ರಕಾರ ಸಾಮಾನ್ಯ ದಿನಗಳಿಗಿಂತ ದೀಪಾವಳಿ ದಿನ ಶಬ್ಧ ಮಾಲಿನ್ಯ ಕಡಿಮೆಯೇ ಇದೆ. ಬಹುತೇಕ ಮಾಪನ ಯಂತ್ರಗಳು ರಸ್ತೆ ಬದಿ ಮತ್ತು ಸಿಗ್ನಲ್ ಸಮೀಪದಲ್ಲಿವೆ. ಹಬ್ಬದ ವೇಳೆ ವಾಹನ ಸಂಚಾರ ಕಡಿಮೆ ಇರುವುದು ಕೂಡ ಶಬ್ಧ ಕಡಿಮೆಯಾಗಲು ಕಾರಣವಾಗಿದೆ. ಚರ್ಚ್ ಸ್ಟ್ರೀಟ್‌ನಲ್ಲಿ ಅ.24ರಂದು 69.78 ಡೆಸಿಬಲ್ ಇದ್ದದ್ದು, ಅ.31ರಂದು 66.95 ಡೆಸಿಬಲ್‌ಗೆ ಇಳಿದಿದೆ. ಬಸವೇಶ್ವರ ನಗರದಲ್ಲಿ ಮಾತ್ರ 73.1 ಡೆಸಿಬಲ್‌ನಿಂದ 81.33 ಡೆಸಿಬಲ್‌ಗೆ ಹೆಚ್ಚಳವಾಗಿದೆ.ದೀಪಾವಳಿಯ ದಿನ ವಾಯು ಗುಣಮಟ್ಟ ಕುಸಿತವಾಗಿರುವುದು ಕಂಡು ಬಂದಿದೆ. ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗದೇ ಇರುವುದು ಸಮಾಧಾನಕರ ಸಂಗತಿ.
- ಡಾ. ಶಾಂತ್. ಎ. ತಿಮ್ಮಯ್ಯ, ಅಧ್ಯಕ್ಷರು, ಕೆಎಸ್ಪಿಸಿಬಿವಾಯು ಗುಣಮಟ್ಟ ಪ್ರಮಾಣ (ಎಕ್ಯುಐ) ಅಂಕಿ-ಅಂಶ
ಪ್ರದೇಶಅ.24ಅ.31ಹೆಬ್ಬಾಳ75263
ಜಿಗಣಿ55203ಸಿಲ್ಕ್ ಬೋರ್ಡ್141170
ಕಸ್ತೂರಿ ನಗರ67154ಜಯನಗರ68136
ನಿಮ್ಹಾನ್ಸ್48121ಆರ್.ವಿ. ಕಾಲೇಜ್, ಆರ್.ಆರ್.ನಗರ92131
ಸಾಣೇಗುರುವನಹಳ್ಳಿ4186