ದೂರ ದೃಷ್ಟಿಯಲ್ಲಿ ನಡೆಯಲಿದೆ ನಗರದ ಕಾಮಗಾರಿಗಳು: ಅಶೋಕ್ ರೈ

| Published : Jan 09 2024, 02:00 AM IST

ಸಾರಾಂಶ

ಪುತ್ತೂರು ನಗರಕ್ಕೆ ೨೪ ಗಂಟೆಯೂ ಕುಡಿಯುವ ನೀರಿನ ವ್ಯವಸ್ಥೆ ಆಗಲಿದೆ. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ೧೦೧೦ ಕೋಟಿ ರು. ಅನುದಾನ ಬಿಡುಗಡೆಯಾಗಿದ್ದು, ಮುಂದಿನ ಒಂದೂವರೆ ವರ್ಷದೊಳಗೆ ಗ್ರಾಮೀಣ ಭಾಗದಲ್ಲೂ ದಿನದ ೨೪ ಗಂಟೆ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಪುತ್ತೂರುನಗರ ವ್ಯಾಪ್ತಿಯಲ್ಲಿ ೨೪ ಕೋಟಿ ರು.ನಲ್ಲಿ ವಿವಿಧ ಕಾಮಗಾರಿ ನಡೆಯಲಿದ್ದು, ಇದಕ್ಕಾಗಿ ವಿವಿಧ ಕಡೆಗಳಿಗೆ ಅನುದಾನ ಹಂಚಿಕೆ ಕೆಲಸ ನಡೆದಿದೆ. ಮುಂದಿನ ದಿನಗಳಲ್ಲಿ ನಗರದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆಯಲಿದ್ದು, ದೂರ ದೃಷ್ಟಿಯ ಕಾಮಗಾರಿಗಳು ನಡೆಯಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.

ಅವರು ಸೋಮವಾರ ಮರೀಲ್ ಬೆದ್ರಾಳ ರಸ್ತೆ ಅಗಲೀಕರಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

ಪುತ್ತೂರು ನಗರಕ್ಕೆ ೨೪ ಗಂಟೆಯೂ ಕುಡಿಯುವ ನೀರಿನ ವ್ಯವಸ್ಥೆ ಆಗಲಿದೆ. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ೧೦೧೦ ಕೋಟಿ ರು. ಅನುದಾನ ಬಿಡುಗಡೆಯಾಗಿದ್ದು, ಮುಂದಿನ ಒಂದೂವರೆ ವರ್ಷದೊಳಗೆ ಗ್ರಾಮೀಣ ಭಾಗದಲ್ಲೂ ದಿನದ ೨೪ ಗಂಟೆ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದು ಹೇಳಿದರು.

ಕೆಎಂಎಫ್ ಪುತ್ತೂರಿಗೆ ಸ್ಥಳಾಂತರವಾಗಲಿದ್ದು, ಇದರಿಂದ ಇಲ್ಲಿನ ಸುಮಾರು ೬೦೦ ಮಂದಿಗೆ ಉದ್ಯೋಗ ದೊರೆಯಲಿದೆ. ಪುತ್ತೂರು-ಸುಬ್ರಹ್ಮಣ್ಯ ರಸ್ತೆಯಲ್ಲಿನ ಬೆದ್ರಾಳದಿಂದ ಸರ್ವೆ ತನಕ ಚತುಷ್ಪಥ ರಸ್ತೆ ನಿರ್ಮಾಣವಾಗಲಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಅನುದಾನಕ್ಕಾಗಿ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದರು.

ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ಮಾತನಾಡಿ, ನಗರೋತ್ತಾನ ಯೋಜನೆಯಡಿ ಮರೀಲ್ ಬೆದ್ರಾಳ ರಸ್ತೆಗೆ ೫೦ ಲಕ್ಷ ರು.ವನ್ನು ಶಾಸಕರು ಮಂಜೂರು ಮಾಡಿಸುವ ಮೂಲಕ ಇಲ್ಲಿನ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ್ದಾರೆ ಎಂದರು.

ಈ ಸಂದರ್ಭ ಬನ್ನೂರು ಸೇವಾ ಸಹಕಾರಿ ಸಂಘ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಕಾಂಗ್ರೆಸ್ ಮುಖಂಡರಾದ ಶಿವರಾಮ ಆಳ್ವ ಬಳ್ಳಮಜಲು, ಕೃಷ್ಣಪ್ರಸಾದ್ ಆಳ್ವ, ರೋಶನ್ ರೈ ಬನ್ನೂರು, ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಯಾಕೂಬ್ ಮುಲಾರ್, ರಝಾಕ್ ಖಾನ್, ಹೆರಾಲ್ಡ್ ಮಾಡ್ತಾ, ಇಬ್ರಾಹಿಂ ಟಿ.ಎಂ., ಲಿಯೋ ಮಾರ್ಟಿಸ್, ದಿನೇಶ್, ಬೆನ್ನಿ ಡಿಸೋಜ, ತೆರೆಸಾ ಸಿಕ್ವೆರಾ ಮತ್ತಿತರರು ಉಪಸ್ಥಿತರಿದ್ದರು.