ನಾಗರಿಕ ಸಮಿತಿ ಪ್ರತಿಭಟನೆ ಎಚ್ಚರಿಕೆ: ರಸ್ತೆ ದುರಸ್ತಿ ಮಾಡಿದ ನಗರಸಭೆ

| Published : Jul 18 2024, 01:32 AM IST

ನಾಗರಿಕ ಸಮಿತಿ ಪ್ರತಿಭಟನೆ ಎಚ್ಚರಿಕೆ: ರಸ್ತೆ ದುರಸ್ತಿ ಮಾಡಿದ ನಗರಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಸಂಪೂರ್ಣ ಹದಗೆಟ್ಟಿದ್ದ ರಸ್ತೆ ದುರಸ್ತಿಗೆ ಆಗ್ರಹಿಸಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಸಂಚಾಲಕ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದರು. ಈ ಹಿನ್ನೆಲೆ ನಗರಸಭೆ ತರಾತುರಿ ಕಾಮಗಾರಿ ಆರಂಭಿಸಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ನಗರದ ಮುಖ್ಯಭಾಗದಲ್ಲಿರುವ ಬ್ರಹ್ಮಗಿರಿ ವೃತ್ತದಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆವರೆಗೆ ಸಂಪೂರ್ಣ ಹದಗೆಟ್ಟಿದ್ದ ರಸ್ತೆ ದುರಸ್ತಿಗೆ ಆಗ್ರಹಿಸಿ, ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರು ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದ ಹಿನ್ನೆಲೆಯಲ್ಲಿ ನಗರಸಭೆ ಬುಧವಾರ ತರಾತುರಿಯಲ್ಲಿ ತೇಪೆ ಕಾಮಗಾರಿ ಆರಂಭಿಸಿದೆ. ಸಂಪೂರ್ಣ ರಸ್ತೆ ದುರಸ್ತಿ ಮಾಡುವುದಾಗಿ ನಗರಸಭೆಯ ಪೌರಾಯುಕ್ತರ ಭರವಸೆ ಹಿನ್ನೆಲೆಯಲ್ಲಿ ಒಳಕಾಡು ಪ್ರತಿಭಟನೆಯನ್ನು ರದ್ದುಗೊಳಿಸಿದ್ದಾರೆ.

ಬುಧವಾರ ಮುಂಜಾನೆ ನಗರಸಭೆಯ ಪೌರಾಯುಕ್ತ ರಾಯಪ್ಪ ಅವರು ತಾತ್ಕಲಿಕವಾಗಿ ರಸ್ತೆ ಗುಂಡಿಗಳಿಗೆ ತೇಪೆ ಹಾಕುವ ಕಾಮಗಾರಿ ಆರಂಭಿಸಿದರು. ಮಳೆಗಾಲ ಮುಗಿದ ಬಳಿಕ ಮರು ಡಾಂಬರೀಕರಣಗೊಳಿಸುವ ಭರವಸೆ ನೀಡಿದರು. ಪ್ರತಿಭಟನೆಗೆ ಸ್ಥಳಕ್ಕೆ ಆಗಮಿಸಿದ ಒಳಕಾಡು ಅವರು ಪೌರಾಯುಕ್ತರ ಮನವಿಗೆ ಮಣಿದು ಪ್ರತಿಭಟನೆಯನ್ನು ಹಿಂಪಡೆದರು. ಪೌರಾಯುಕ್ತರ ತಕ್ಷಣದ ಸ್ಪಂದನೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಯಿತು.

ಬೇಸಿಗೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಓಡಾಡುವ ಈ ಮುಖ್ಯ ರಸ್ತೆಗೆ ಸಂಪೂರ್ಣ ಡಾಂಬರೀಕರಣ ಮಾಡಲಾಗಿತ್ತು. ಆದರೆ ಐದಾರು ತಿಂಗಳಲ್ಲಿಯೇ ಈ ರಸ್ತೆಗಳಲ್ಲಿ ಭಾರಿ ಹೊಂಡಗಳು ಸೃಷ್ಟಿಯಾಗಿದ್ದವು. ಜನ - ವಾಹನಗಳು ಸಂಚರಿಸಲಾಗದ ಪರಿಸ್ಥಿತಿ ಎದುರಾಗಿತ್ತು. ರಸ್ತೆಯು ಅಪಘಾತ ವಲಯವಾಗಿ ಮಾರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಒಳಕಾಡು ವಿನೂತನ ರೀತಿಯಲ್ಲಿ ಪ್ರತಿಭಟಿಸುವುದಾಗಿ ಘೋಷಿಸಿದ್ದರು.