ಪೌರ ಕಾರ್ಮಿಕರು ದೇಶದ ಸ್ವಚ್ಛತೆ ಹಾಗೂ ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ತಮ್ಮ ವೈಯಕ್ತಿಕ ಸುಖಸಂತೋಷಗಳನ್ನು ಬದಿಗಿಟ್ಟು ಹಗಲು ರಾತ್ರಿ ಎನ್ನದೆ ಶ್ರಮಿಸುವ ಪೌರ ಕಾರ್ಮಿಕರ ಸೇವೆ ಅತ್ಯಂತ ಮಹತ್ವದ್ದಾಗಿದೆ ಎಂದು ಶಾಸಕ ಟಿ.ಬಿ. ಜಯಚಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ಪೌರ ಕಾರ್ಮಿಕರು ದೇಶದ ಸ್ವಚ್ಛತೆ ಹಾಗೂ ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ತಮ್ಮ ವೈಯಕ್ತಿಕ ಸುಖಸಂತೋಷಗಳನ್ನು ಬದಿಗಿಟ್ಟು ಹಗಲು ರಾತ್ರಿ ಎನ್ನದೆ ಶ್ರಮಿಸುವ ಪೌರ ಕಾರ್ಮಿಕರ ಸೇವೆ ಅತ್ಯಂತ ಮಹತ್ವದ್ದಾಗಿದೆ ಎಂದು ಶಾಸಕ ಟಿ.ಬಿ. ಜಯಚಂದ್ರ ಹೇಳಿದರು.

ಅವರು ಮಂಗಳವಾರ ನಗರದ ಶ್ರೀ ವಿವೇಕಾನಂದ ಕ್ರೀಡಾಂಗಣದಲ್ಲಿ ನಗರಸಭೆ ಹಾಗೂ ಕರ್ನಾಟಕ ಪೌರ ಸೇವಾ ನೌಕರರ ಸಂಘ ಇವರ ವತಿಯಿಂದ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆ, ಸ್ವಚ್ಛತಾ ಸೇನಾನಿಗಳಿಗೆ ಗೌರವ ಸಮರ್ಪಣಾ ದಿನಾಚರಣೆ ಹಾಗೂ ವಿವಿಧ ಫಲಾನುಭವಿಗಳಿಗೆ ಸಾಧನ ಸಲಕರಣೆಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಗರದ ಸ್ವಚ್ಛತೆಯನ್ನು ಕಾಪಾಡುವಲ್ಲಿ ಪೌರ ಕಾರ್ಮಿಕರ ಕೊಡುಗೆ ಅಪಾರವಾಗಿದೆ. ಅವರ ಶ್ರಮದಿಂದಲೇ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಸ್ವಚ್ಛತೆ ಸಾಧ್ಯವಾಗುತ್ತಿದೆ. ಆದ್ದರಿಂದ ಪೌರ ಕಾರ್ಮಿಕರ ಸೇವೆಯನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದರು.

ರಾಜ್ಯದಲ್ಲಿ ಸುಮಾರು ೫ ಲಕ್ಷ ನಿವೇಶನಗಳನ್ನು ವಿತರಿಸುವ ಕಾರ್ಯಕ್ರಮ ರೂಪಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತೀರ್ಮಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಿರಾದಲ್ಲಿ ಈಗಾಗಲೇ ೨ ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಅದರ ಜೊತೆಗೆ ಶೀಘ್ರದಲ್ಲಿ ಸುಮಾರು ೧೦ ಸಾವಿರ ನಿವೇಶನಗಳನ್ನು ನೀಡಿ ವಸತಿ ಸೌಲಭ್ಯ ಒದಗಿಸುವುದು ನಮ್ಮ ಆದ್ಯತೆಯಾಗಿದೆ ಎಂದರು.

ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮೂದ್ ಮಾತನಾಡಿ ಪೌರ ಕಾರ್ಮಿಕರ ಬದುಕಿಗೆ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ನಿವೇಶನ ವಿತರಣೆ ಮಾಡುತ್ತಿರುವುದು ಸಂತಸದ ವಿಚಾರ. ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಳ್ಳಲು ೭ ಲಕ್ಷ ರುಪಾಯಿಗಳವರೆಗೆ ಅನುದಾನ ನೀಡುವ ಯೋಜನೆಯೂ ಇದೆ ಎಂದರು.

ಪೌರಾಯುಕ್ತ ರುದ್ರೇಶ್.ಕೆ ಅವರು ಮಾತನಾಡಿ ೨೯ ಪೌರ ಕಾರ್ಮಿಕರಿಗೆ ನೇರಪಾವತಿ ನೇಮಕಾತಿ ಆದೇಶ ನೀಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ೩೯ ತ್ರಿಚಕ್ರ ವಾಹನಗಳನ್ನು ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಟೈಲರಿಂಗ್ ಯಂತ್ರ, ಅಂಗನವಾಡಿಗಳಿಗೆ ವಿವಿಧ ಸಲಕರಣೆಗಳು ಸೇರಿ ಒಟ್ಟು ೯೨ ಲಕ್ಷ ರು. ಮೌಲ್ಯದ ಸವಲತ್ತುಗಳನ್ನು ವಿತರಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಲಕ್ಷ್ಮೀಕಾಂತ್, ಸದಸ್ಯರಾದ ಅಂಜಿನಪ್ಪ, ಆರ್ ರಾಮು, ಗಿರಿಜಾ ವಿಜಯ್ ಕುಮಾರ್, ಉಮಾ ವಿಜಯರಾಜ್, ಎಸ್ ಎಲ್ ರಂಗನಾಥ್, ಅಂಬುಜಕ್ಷಿ ನಟರಾಜ್, ಬುರಾನ್ ಮೊಹಮದ್, ಮಹಮದ್ ಸಫೀರ್, ರಾಧಾಕೃಷ್ಣ, ಮಹೇಶ್, ಧ್ರುವಕುಮಾರ್, ಮಾಜಿ ಸದಸ್ಯ ಆರ್.ರಾಘವೇಂದ್ರ, ಆಶ್ರಯ ಸಮಿತಿ ಸದಸ್ಯರಾದ ನೂರುದ್ದೀನ್, ವಾಜರಹಳ್ಳಿ ರಮೇಶ್, ಜಯಲಕ್ಷ್ಮಿ, ಮಂಜುನಾಥ್, ಸಿಡಿಪಿಒ ಹರಿಪ್ರಸಾದ್, ಕರ್ನಾಟಕ ಪೌರಸೇವ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ಎಂ.ಆರ್.ಡಬ್ಲ್ಯೂ ಚಿತ್ತಯ್ಯ, ಅಂಗವಿಕಲರ ಸಂಘದ ಅಧ್ಯಕ್ಷ ಮಾಗೋಡು ಕಂಬಣ್ಣ, ಆಶ್ರಯ ವಿಷಯ ನಿರ್ವಾಹಕ ಶ್ರೀನಿವಾಸ್, ಸೀನಿಯರ್ ಪ್ರೋಗ್ರಾಮರ್ ಚಿದಾನಂದ್ ಸೇರಿದಂತೆ ಹಲವರು ಹಾಜರಿದ್ದರು.