ಪೌರ ಕಾರ್ಮಿಕರೇ..ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ: ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌

| Published : Sep 24 2024, 01:48 AM IST

ಪೌರ ಕಾರ್ಮಿಕರೇ..ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ: ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌
Share this Article
  • FB
  • TW
  • Linkdin
  • Email

ಸಾರಾಂಶ

ಪುರಸಭೆ ಸಭಾಂಗಣದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಪುರಸಭೆ ಸದಸ್ಯೆಯ ಬದಲು ಪತಿ ವೇದಿಕೆ ಏರಿದ ಘಟನೆ ನಡೆದಿದೆ. ಪುರಸಭೆ ಸದಸ್ಯೆ ವೀಣಾ ಬದಲಿಗೆ ಪತಿ ಮಂಜುನಾಥ್‌, ಸದಸ್ಯೆ ಆರ್.ಭಾಗ್ಯಲಕ್ಷ್ಮೀ ಬದಲಿಗೆ ಪತಿ ಕಾರ್ಗಳ್ಳಿ ಸುರೇಶ್‌, ಸದಸ್ಯೆ ಅನ್ನಪೂರ್ಣ ಬದಲಿಗೆ ಮಾವ ಮಹದೇವನಾಯಕ ಸರ್ಕಾರಿ ವೇದಿಕೆಯಲ್ಲಿ ವಿರಾಜಮಾನರಾಗಿ ಕುಳಿತಿದ್ದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಕಿವಿಮಾತು ಹೇಳಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಜಿಲ್ಲಾಡಳಿತ, ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಹಾಗೂ ಪುರಸಭೆ ಸಂಯುಕ್ತಾಶ್ರಯದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಪೌರ ಕಾರ್ಮಿಕರು ಪಟ್ಟಣ ಸ್ವಚ್ಛಗೊಳಿಸುತ್ತಾರೆ, ಹಾಗೇಯೇ ತಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿವಹಿಸಬೇಕು. ಪೌರ ಕಾರ್ಮಿಕರು ಆರೋಗ್ಯವಾಗಿದ್ದರೆ ಪಟ್ಟಣದ ಜನರು ಆರೋಗ್ಯವಾಗಿರಲಿದ್ದಾರೆ ಎಂದರು.

ಪೌರ ಕಾರ್ಮಿಕರ ಸೇವೆಗೆ ಬೆಲೆ ಕಟ್ಟಲು ಸಾದ್ಯವಿಲ್ಲ. ಪೌರ ಕಾರ್ಮಿಕರು ಸ್ವಚ್ಛತೆಗೆ ಇಳಿದಾಗ ಆರೋಗ್ಯದ ದೃಷ್ಟಿಯಿಂದ ಪರಿಕರ ಬಳಸಿಕೊಂಡು ಕೆಲಸ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ ಎಂದರು.

ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಮಾತನಾಡಿ, ಸರ್ಕಾರ ಪೌರ ಕಾರ್ಮಿಕರಿಗೆ ಆರೋಗ್ಯ ಮತ್ತು ಗೃಹ ಭಾಗ್ಯ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಅವರು ಪಟ್ಟಣದ ಸ್ವಚ್ಛತೆಗೆ ಕಾಳಜಿವಹಿಸಿ ಕೆಲಸ ಮಾಡುತ್ತಿದ್ದಾರೆ. ಪಟ್ಟಣದ ನಾಗರಿಕರು ಕೂಡ ಪಟ್ಟಣದ ಸ್ವಚ್ಛತೆಗೆ ಸ್ವಲ್ಪ ಸಹಕರಿಸದರೆ ಪಟ್ಟಣ ಸುಂದರವಾಗಿರಲಿದೆ ಎಂದರು.

ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷ ಕಿರಣ್‌ ಗೌಡ, ಉಪಾಧ್ಯಕ್ಷೆ ಹೀನಾ ಕೌಸರ್‌, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಪುರಸಭೆ ಸದಸ್ಯರಾದ ರಮೇಶ್, ಅಣ್ಣಯ್ಯಸ್ವಾಮಿ, ಮಹಮದ್‌ ಇಲಿಯಾಸ್‌, ಎನ್.ಕುಮಾರ್‌, ರಾಜಗೋಪಾಲ್‌, ಗೌಡ್ರ ಮಧು, ಎಲ್.ನಿರ್ಮಲ, ಶ್ರೀನಿವಾಸ(ಕಣ್ಣಪ್ಪ), ಪುರಸಭೆ ಮಾಜಿ ಉಪಾಧ್ಯಕ್ಷ ಕಾರ್ಗಳ್ಳಿ ಸುರೇಶ್‌ ಸೇರಿ ಪುರಸಭೆ ಸಿಬ್ಬಂದಿಯಿದ್ದರು.

ಸದಸ್ಯೆಯರ ಬದಲು ಪತಿ, ಮಾವ ಸರ್ಕಾರಿ ವೇದಿಕೇಲಿ ಹಾಜರ್!:

ಗುಂಡ್ಲುಪೇಟೆ: ಪುರಸಭೆ ಸಭಾಂಗಣದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಪುರಸಭೆ ಸದಸ್ಯೆಯ ಬದಲು ಪತಿ ವೇದಿಕೆ ಏರಿದ ಘಟನೆ ನಡೆದಿದೆ. ಪುರಸಭೆ ಸದಸ್ಯೆ ವೀಣಾ ಬದಲಿಗೆ ಪತಿ ಮಂಜುನಾಥ್‌, ಸದಸ್ಯೆ ಆರ್.ಭಾಗ್ಯಲಕ್ಷ್ಮೀ ಬದಲಿಗೆ ಪತಿ ಕಾರ್ಗಳ್ಳಿ ಸುರೇಶ್‌, ಸದಸ್ಯೆ ಅನ್ನಪೂರ್ಣ ಬದಲಿಗೆ ಮಾವ ಮಹದೇವನಾಯಕ ಸರ್ಕಾರಿ ವೇದಿಕೆಯಲ್ಲಿ ವಿರಾಜಮಾನರಾಗಿ ಕುಳಿತಿದ್ದರು.